ರೈತರಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಆಗದಿದ್ದರೆ ರಾಜೀನಾಮೆ ನೀಡುತ್ತೇನೆ: ಹರ್ಯಾಣ DCM ದುಶ್ಯಂತ್ ಚೌಟಾಲಾ
ನಾನು ಕೇಂದ್ರ ಸರ್ಕಾರದ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಇದರ ಜೊತೆಗೆ ನಾನು ನಿರಂತರವಾಗಿ ರೈತರ ಅಭಿಪ್ರಾಯಗಳನ್ನು ಕೇಂದ್ರದ ಮುಂದೆ ಇಡುತ್ತಿದ್ದೇನೆ ಎಂದು ದುಶ್ಯಂತ್ ಚೌಟಾಲಾ ಹೇಳಿದರು.
ನವದೆಹಲಿ: ರೈತರಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಆಗದೆ ಇದ್ದರೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬಿಜೆಪಿ ಮಿತ್ರ ಪಕ್ಷವಾಗಿರುವ ಜನನಾಯಕ ಜನತಾ ಪಾರ್ಟಿ ನಾಯಕ ದುಶ್ಯಂತ್ ಚೌಟಾಲಾ ಹೇಳಿದ್ದಾರೆ. ಬೆಂಬಲ ಬೆಲೆಯ ವ್ಯವಸ್ಥೆಗೆ ಧಕ್ಕೆ ತರುವುದಿಲ್ಲ ಎಂದು ಕೇಂದ್ರ ಸರ್ಕಾರ ಪ್ರತಿಭಟನಾನಿರತ ರೈತರಿಗೆ ಹೇಳಿತ್ತು. ಆದರೆ, ರೈತರು ಇದನ್ನು ಒಪ್ಪಿರಲಿಲ್ಲ. ಈ ಬೆಳವಣಿಗೆ ಬೆನ್ನಲ್ಲೇ ದುಶ್ಯಂತ್ ಚೌಟಾಲಾ ಈ ಹೇಳಿಕೆ ನೀಡಿದ್ದಾರೆ.
ರೈತರಿಗೆ ಬೆಂಬಲ ಬೆಲೆ ಖಾತರಿಪಡಿಸಬೇಕು ಎಂದು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರ ಪ್ರತಿಭಟನಾ ನಿರತ ರೈತರಿಗೆ ನೀಡಿದ ಲಿಖಿತ ಪ್ರಸ್ತಾಪಗಳಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು ಉಳಿಸಿಕೊಳ್ಳುವುದಾಗಿ ಹೇಳಿದೆ. ನಾನು ಅಧಿಕಾರದಲ್ಲಿ ಇರುವವರೆಗೆ ಇದಕ್ಕಾಗಿ ಹೋರಾಡುತ್ತೇನೆ. ನನ್ನಿಂದ ಆಶ್ವಾಸನೆ ಈಡೇರಿಸಲು ಸಾಧ್ಯವಾಗದ ದಿನ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಅವರು ಹೇಳಿದರು.
ನಾನು ಕೇಂದ್ರ ಸರ್ಕಾರದ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ನಿರಂತರವಾಗಿ ರೈತರ ಅಭಿಪ್ರಾಯಗಳನ್ನು ಕೇಂದ್ರದ ಮುಂದೆ ಇಡುತ್ತಿದ್ದೇನೆ ಎಂದು ದುಶ್ಯಂತ್ ಹೇಳಿದರು.
2019ರ ವಿಧಾನಸಭೆ ಚುನಾವಣೆ ನಂತರ ಜನನಾಯಕ ಜನತಾ ಪಕ್ಷದ ಜೊತೆ ಸೇರಿ ಹರಿಯಾಣದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ದುಶ್ಯಂತ್ ಚೌಟಾಲಾಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿತ್ತು.
ಮಾತುಕತೆ ವಿಫಲ: ಕೇಂದ್ರ ಸರ್ಕಾರ ರೈತರ ಜೊತೆ ಇನ್ನೊಂದು ಸುತ್ತಿನ ಮಾತುಕತೆಗೆ ಸಿದ್ಧವಿರುವುದಾಗಿ ಹೇಳಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಕಾಯ್ದೆಗಳಲ್ಲಿ ಕೆಲ ಬದಲಾವಣೆ ತರುವುದಾಗಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ. ಆದರೆ, ಮಾತುಕತೆಯ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ರೈತರು ಕಾಯ್ದೆಯನ್ನು ಸಂಪೂರ್ಣ ಹಿಂಪಡೆಯಬೇಕು ಎಂದು ಪಟ್ಟು ಹಿಡಿದಿದ್ದಾರೆ.
ರೈತರ ಬಲ ಕುಗ್ಗಲಿದ್ದು, ಕಾರ್ಪೊರೇಟ್ ಕಂಪನಿಗಳ ಅಡಿಯಾಳಾಗುವ ಅಪಾಯವಿದೆ: ಸುಪ್ರೀಂ ಕೋರ್ಟ್ನಲ್ಲಿ BKU ಅರ್ಜಿ
Published On - 9:17 pm, Fri, 11 December 20