ಭಾರತದ ತಂಟೆಗೆ ಬರುವ ಮುನ್ನ ಯೋಚಿಸಿ, ಹಾನಿ ಮಾಡಿದವರನ್ನು ಒಬ್ಬರನ್ನೂ ಬಿಡುವುದಿಲ್ಲ: ಎಚ್ಚರಿಕೆ ನೀಡಿದ ರಾಜನಾಥ್ ಸಿಂಗ್
ಗಡಿ ಸಂಘರ್ಷವಾದಾಗ ನಮ್ಮ ಸರ್ಕಾರ ಏನು ಕೈಗೊಂಡಿತು, ಭಾರತೀಯ ಯೋಧರು ಏನು ಮಾಡಿದರು ಎಂಬುದನ್ನು ನಾನು ಬಹಿರಂಗವಾಗಿ ಹೇಳಲಾರೆ. ಆದರೆ ಭಾರತದ ತಂಟೆಗೆ ಯಾರೇ ಬಂದರೂ ಅವರನ್ನು ಈ ರಾಷ್ಟ್ರ ಸುಮ್ಮನೆ ಬಿಡುವುದಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಭಾರತಕ್ಕೆ ಹಾನಿ ಮಾಡಿದರೆ, ಅವರು ಯಾರೇ ಆಗಿರಲಿ ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ಈ ಮೂಲಕ ಚೀನಾ ಮತ್ತು ಪಾಕಿಸ್ತಾನಕ್ಕೆ ಒಂದು ಗಟ್ಟಿ ಸಂದೇಶ ನೀಡಿದ್ದಾರೆ. ಯುಎಸ್ನ ಸ್ಯಾನ್ ಫ್ರಾನ್ಸ್ಕಿಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಈ ಮಾತುಗಳನ್ನಾಡಿದ್ದಾರೆ. ಅಷ್ಟೇ ಅಲ್ಲ, ಭಾರತ-ಚೀನಾ ಗಡಿ ಸಂಘರ್ಷದ ಸಮಯದಲ್ಲಿ ಭಾರತೀಯ ಯೋಧರು ತೋರಿದ ಶೌರ್ಯವನ್ನು ಹೊಗಳಿದರು.
ಗಡಿ ಸಂಘರ್ಷವಾದಾಗ ನಮ್ಮ ಸರ್ಕಾರ ಏನು ಕೈಗೊಂಡಿತು, ಭಾರತೀಯ ಯೋಧರು ಏನು ಮಾಡಿದರು ಎಂಬುದನ್ನು ನಾನು ಬಹಿರಂಗವಾಗಿ ಹೇಳಲಾರೆ. ಆದರೆ ಭಾರತದ ತಂಟೆಗೆ ಯಾರೇ ಬಂದರೂ ಅವರನ್ನು ಈ ರಾಷ್ಟ್ರ ಸುಮ್ಮನೆ ಬಿಡುವುದಿಲ್ಲ. ಇದೊಂದು ಸಂದೇಶ ಎಲ್ಲಿ ಹೋಗಬೇಕೋ ಅಲ್ಲಿ ಹೋಗಿದೆ ಎಂದುಕೊಳ್ಳುತ್ತೇನೆ ಎಂದು ರಾಜನಾಥ್ ಸಿಂಗ್ ಹೇಳಿದರು. ಭಾರತ-ಚೀನಾ ಪೂರ್ವ ಲಡಾಖ್ ಗಡಿ ಸಮಸ್ಯೆ ಶುರುವಾಗಿದ್ದು 2020 ರ ಮೇ ತಿಂಗಳಲ್ಲಿ. ಮೊದಲು ಪ್ಯಾಂಗಾಂಗ್ ಸರೋವರದ ಬಳಿ ಭಾರತ-ಚೀನಾ ಸೈನಿಕರ ನಡುವೆ ಘರ್ಷಣೆ ನಡೆಯಿತು. ಅದಾದ ಬಳಿಕ 2020ರ ಜೂನ್ನಲ್ಲಿ ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷ ಭೀಕರ ಸ್ವರೂಪದ್ದಾಗಿದೆ. ಚೀನಾ ಸೈನಿಕರ ದಾಳಿಗೆ ಭಾರತದ ಸುಮಾರು 20 ಸೈನಿಕರು ಹತ್ಯೆಗೀಡಾದರು. ಅಂದಿನಿಂದಲೂ ಚೀನಾ ಉಪಟಳ ಮತ್ತು ಅದಕ್ಕೆ ಭಾರತದ ತಿರುಗೇಟು ಪ್ರಕ್ರಿಯೆ ನಡೆಯುತ್ತಲೇ ಇದೆ. ಇಲ್ಲಿಯವರೆಗೆ ಎರಡೂ ದೇಶಗಳ ಮಧ್ಯೆ ಸುಮಾರು 15 ಮಿಲಿಟರಿ ಸುತ್ತುಗಳ ಮಾತುಕತೆ ನಡೆದಿದೆ. ಆದರೆ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿಲ್ಲ.
ಈಗಾಗಲೇ ಚೀನಾಕ್ಕೆ ಹಲವು ಬಾರಿ ಎಚ್ಚರಿಕೆ ನೀಡಿರುವ ರಾಜನಾಥ್ ಸಿಂಗ್ ಸ್ಯಾನ್ ಫ್ರಾನ್ಸಿಸ್ಕೋದಲ್ಲಿಯೂ ಇದನ್ನು ಪ್ರಸ್ತಾಪ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಪ್ರಬಲ ರಾಷ್ಟ್ರವಾಗಿ ರೂಪುಗೊಂಡಿದೆ. ಭಾರತದ ಚಿತ್ರಣ ಬದಲಾಗಿದೆ. ನಮ್ಮ ರಾಷ್ಟ್ರದ ಪ್ರತಿಷ್ಠೆ ಮೇರುಮಟ್ಟಕ್ಕೇರಿದೆ. ಇನ್ನು ಕೆಲವೇ ವರ್ಷಗಳಲ್ಲಿ ವಿಶ್ವದ ಆರ್ಥಿಕತೆಯಲ್ಲಿ ಟಾಪ್ 3 ಸ್ಥಾನದಲ್ಲಿರುವದರಲ್ಲಿ ಸಂಶಯವಲ್ಲಿ ಎಂದೂ ರಾಜನಾಥ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಮೈಸೂರು ಬಳಿಯ ವೀರನಹೊಸಹಳ್ಳಿಗೆ ನುಗ್ಗಿತೊಂದು ಕಾಡಾನೆ, ಕಾಡಿಗಟ್ಟಲು ಅರಣ್ಯ ಸಿಬ್ಬಂದಿ ಹರಸಾಹಸ!
Published On - 7:58 pm, Fri, 15 April 22