ವಿದ್ಯಾರ್ಥಿಗಳ ಪ್ರತಿಭಟನೆಗೆ ಬೇಸತ್ತು ಐಐಟಿ ಬಾಂಬೆ ನಿರ್ದೇಶಕ ಪ್ರೊ. ಶಿರೀಶ್ ಕೇದಾರೆ ರಾಜೀನಾಮೆ: ಕಾಪಿ ತಡೆದಿದ್ದೇ ನಮ್ಮ ತಪ್ಪಾಯ್ತಾ ಎಂದು ಭಾವುಕ ಪ್ರಶ್ನೆ

ಐಐಟಿ ಬಾಂಬೆ ನಿರ್ದೇಶಕ ಪ್ರೊ. ಶಿರೀಶ್ ಕೇದಾರೆ, ವಿದ್ಯಾರ್ಥಿಗಳ ನಿರಂತರ ಪ್ರತಿಭಟನೆಗಳಿಂದ ಬೇಸತ್ತು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಪರೀಕ್ಷೆಗಳಲ್ಲಿ ನಕಲು ತಡೆಯಲು ಸಂಸ್ಥೆ ತೆಗೆದುಕೊಂಡ ಕ್ರಮಗಳನ್ನು ವಿದ್ಯಾರ್ಥಿಗಳು ವಿರೋಧಿಸಿದ್ದು, ಇದು ತಪ್ಪು ಎಂಬಂತ ಪ್ರತಿಭಟಿಸಿದ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ಭವಿಷ್ಯದ ಮೇಲೆ ಗಮನಹರಿಸುವಂತೆ ಕಿವಿಮಾತು ಹೇಳಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆಗೆ ಬೇಸತ್ತು ಐಐಟಿ ಬಾಂಬೆ ನಿರ್ದೇಶಕ ಪ್ರೊ. ಶಿರೀಶ್ ಕೇದಾರೆ ರಾಜೀನಾಮೆ: ಕಾಪಿ ತಡೆದಿದ್ದೇ ನಮ್ಮ ತಪ್ಪಾಯ್ತಾ ಎಂದು ಭಾವುಕ ಪ್ರಶ್ನೆ
ಪ್ರೊಫೆಸರ್
Image Credit source: Abhishek Kumar X Account

Updated on: Sep 21, 2026 | 10:32 AM

ಮುಂಬೈ, ಸೆಪ್ಟೆಂಬರ್ 21: ದೇಶದ ಪ್ರತಿಷ್ಠಿತ ತಂತ್ರಜ್ಞಾನ ಶಿಕ್ಷಣ ಸಂಸ್ಥೆ ಐಐಟಿ ಬಾಂಬೆಯ (IIT Bombay) ನಿರ್ದೇಶಕ ಪ್ರೊ. ಶಿರೀಶ್ ಕೇದಾರೆ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳು ನಡೆಸುತ್ತಿದ್ದ ಸತತ ಪ್ರತಿಭಟನೆಯ ನಡುವೆ ವಿದ್ಯಾರ್ಥಿಯೊಬ್ಬ “ನೀವು ಯಾವಾಗ ರಾಜೀನಾಮೆ ನೀಡುತ್ತೀರಿ?” ಎಂದು ನೇರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸೆಪ್ಟೆಂಬರ್ 21 ರಂದು ಐಐಟಿ ಆಡಳಿತ ಮಂಡಳಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ಬಹಿರಂಗಪಡಿಸಿದ್ದಾರೆ. ಪರೀಕ್ಷೆಯಲ್ಲಿ ನಕಲು ತಡೆಯುವುದು ತಪ್ಪೆಂಬಂತೆ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಧೋರಣೆಗೆ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಯ ಪ್ರಶ್ನೆಗೆ ದಿಟ್ಟ ಉತ್ತರ: ವಿದ್ಯಾರ್ಥಿಗಳು ಮತ್ತು ನಿರ್ದೇಶಕರ ನಡುವಿನ ಮುಖಾಮುಖಿ ಸಂವಾದದ ವೇಳೆ, “ನೀವು ಯಾವಾಗ ಹುದ್ದೆ ತೊರೆಯುತ್ತೀರಿ?” ಎಂದು ವಿದ್ಯಾರ್ಥಿಯೊಬ್ಬ ಪ್ರಶ್ನಿಸಿದ್ದಾನೆ. ಇದಕ್ಕೆ ಉತ್ತರಿಸಿದ ಪ್ರೊ. ಕೇದಾರೆ, “ನಾನು ಸೆಪ್ಟೆಂಬರ್ 21 ರಂದು ಬೋರ್ಡ್‌ಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ” ಎಂದು ಖಚಿತಪಡಿಸಿದರು.

ಅಧ್ಯಯನದ ಮೇಲೆ ಗಮನವಿರಲಿ: “ನೀವು ನಿಮ್ಮ ಭವಿಷ್ಯ ಮತ್ತು ಅಧ್ಯಯನದ ಕಡೆ ಗಮನ ಹರಿಸುವುದನ್ನು ಬಿಟ್ಟು ಇಂತಹ ಅನಗತ್ಯ ಪ್ರತಿಭಟನೆಗಳಲ್ಲಿ ಸಿಲುಕಿಹಾಕಿಕೊಳ್ಳುವುದು ನನಗೆ ಇಷ್ಟವಿಲ್ಲ; ನಿಮ್ಮ ಭವಿಷ್ಯ ಹಾಳಾಗಬಾರದು ಎಂದೇ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ” ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾಪಿ ತಡೆಯುವುದೇ ನಮ್ಮ ಕರ್ತವ್ಯವಾಗಿತ್ತು’: ಆಡಳಿತ ಮಂಡಳಿಯ ಕ್ರಮವನ್ನು ಸಮರ್ಥಿಸಿಕೊಂಡ ನಿರ್ದೇಶಕರು, “ನಾವು ಕೇವಲ ನಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದೆವು. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕಾಪಿ ಹೊಡೆಯುವುದನ್ನು ಅಥವಾ ಅಕ್ರಮ ಎಸಗುವುದನ್ನು ತಡೆಯುವುದು ಸಂಸ್ಥೆಯ ಜವಾಬ್ದಾರಿ ಎಂದು ನಾವು ಭಾವಿಸಿದ್ದೆವು. ಆದರೆ ಅದು ತಪ್ಪು ಎಂದು ನೀವು ಭಾವಿಸಿ ನನ್ನ ರಾಜೀನಾಮೆ ಬಯಸುವುದಾದರೆ, ನಾನು ಕೆಳಗಿಳಿಯಲು ಸಿದ್ಧನಿದ್ದೇನೆ” ಎಂದು ಭಾವುಕರಾಗಿ ನುಡಿದರು.

ಮತ್ತಷ್ಟು ಓದಿ:ಯುಜಿಸಿ-ನೆಟ್ ಪತ್ರಿಕೆ ತಯಾರಿಕೆಯಲ್ಲಿ ಎಐ ಯಡವಟ್ಟು: 3 ವಿಷಯಗಳ ಪರೀಕ್ಷೆ ರದ್ದು, ಎನ್‌ಟಿಎ ವಿರುದ್ಧ ತಜ್ಞರ ಗಂಭೀರ ಆರೋಪ

ವಿವಾದಕ್ಕೆ ಕಾರಣವಾದ ಕಠಿಣ ನಿಯಮಗಳು: ಐಐಟಿ ಬಾಂಬೆ ಆಡಳಿತ ಮಂಡಳಿಯು ಇತ್ತೀಚಿನ ಪರೀಕ್ಷೆಗಳಲ್ಲಿ ಕೃತಕ ಬುದ್ಧಿಮತ್ತೆ (AI) ದುರುಪಯೋಗ ಮತ್ತು ಪರೀಕ್ಷಾ ಅಕ್ರಮಗಳನ್ನು ತಡೆಯಲು ಕಠಿಣ ಕಣ್ಗಾವಲು ನಿಯಮಗಳನ್ನು ಜಾರಿಗೆ ತಂದಿತ್ತು. ಇದರ ಜೊತೆಗೆ ಕೆಲ ವಿದ್ಯಾರ್ಥಿಗಳ ವಿರುದ್ಧ ಶಿಸ್ತುಕ್ರಮ ಕೈಗೊಂಡಿದ್ದರಿಂದ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ಸಮುದಾಯ ಆಡಳಿತದ ವಿರುದ್ಧ ತಿರುಗಿಬಿದ್ದು ಪ್ರತಿಭಟನೆ ತೀವ್ರಗೊಳಿಸಿತ್ತು.

ಪೋಸ್ಟ್​

ಪ್ರೊ. ಶಿರೀಶ್ ಕೇದಾರೆ ಹಿನ್ನೆಲೆ: ಪ್ರೊ. ಶಿರೀಶ್ ಕೇದಾರೆ ಅವರು ಶಕ್ತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ ಹೆಸರಾಂತ ಸಂಶೋಧಕರಾಗಿದ್ದು, ಐಐಟಿ ಬಾಂಬೆಯ ಹಳೆಯ ವಿದ್ಯಾರ್ಥಿಯೂ ಹೌದು. ಅವರು ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ನಂತರ ಶೈಕ್ಷಣಿಕ ಶಿಸ್ತು ಮತ್ತು ಪಾರದರ್ಶಕತೆಗೆ ಹೆಚ್ಚಿನ ಆದ್ಯತೆ ನೀಡಿದ್ದರು.

ಮುಂದಿನ ಹೆಜ್ಜೆ: ಐಐಟಿ ಕೌನ್ಸಿಲ್ ಮತ್ತು ಶಿಕ್ಷಣ ಸಚಿವಾಲಯಕ್ಕೆ ಬೋರ್ಡ್ ಮೂಲಕ ರಾಜೀನಾಮೆ ತಲುಪಲಿದ್ದು, ಆಡಳಿತ ಮಂಡಳಿಯು ಈ ರಾಜೀನಾಮೆಯನ್ನು ಅಂಗೀಕರಿಸುತ್ತದೆಯೇ ಅಥವಾ ಮಧ್ಯಪ್ರವೇಶಿಸಿ ನಿರ್ದೇಶಕರನ್ನು ಮುಂದುವರಿಯುವಂತೆ ಮನವೊಲಿಸುತ್ತದೆಯೇ ಎಂಬುದು ಇಡೀ ಉನ್ನತ ಶಿಕ್ಷಣ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us