ವಿವಾದಕ್ಕೀಡಾಗಿರುವ ಐಐಟಿ ನಿರ್ದೇಶಕ ಲಕ್ಷ್ಮೀಧರ್ ಬೆಹೆರಾ ಕುರಿತ ಅಚ್ಚರಿಯ ಮಾಹಿತಿ ಇಲ್ಲಿದೆ
ಐಐಟಿ ಮಂಡಿಯ ನಿರ್ದೇಶಕ ಲಕ್ಷ್ಮೀಧರ್ ಬೆಹೆರಾ ಮಾಂಸಾಹಾರದಿಂದಲೇ ಹಿಮಾಚಲ ಪ್ರದೇಶದಲ್ಲಿ ಭೂಕುಸಿತವಾಗಿದೆ ಎಂದು ಟೀಕೆಗೊಳಗಾಗಿದ್ದಾರೆ. ಅವರು ಈ ರೀತಿ ವಿವಾದಕ್ಕೀಡಾಗಿರುವುದು ಇದೇ ಮೊದಲಲ್ಲ. ಈ ಹಿಂದೆ ನಾನೇ ಭೂತ, ದೆವ್ವವನ್ನು ಓಡಿಸಿದ್ದೆ ಎನ್ನುವ ಅವರ ವಿಡಿಯೋ ಭಾರೀ ವೈರಲ್ ಆಗಿತ್ತು.

ನವದೆಹಲಿ: ಹಿಮಾಚಲ ಪ್ರದೇಶದಲ್ಲಿನ ಭೂಕುಸಿತ ಮತ್ತು ಮೇಘ ಸ್ಫೋಟದಂತಹ ಪ್ರಕೃತಿ ವಿಕೋಪಗಳಿಗೆ ಪ್ರಾಣಿ ಹಿಂಸೆಯೇ ಕಾರಣ. ಹೀಗಾಗಿ, ಯಾರೂ ಮಾಂಸಾಹಾರ ಸೇವಿಸಬೇಡಿ ಎಂದು ಹೇಳುವ ಮೂಲಕ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮಂಡಿ ನಿರ್ದೇಶಕ ಲಕ್ಷ್ಮೀಧರ್ ಬೆಹೆರಾ ವಿವಾದಕ್ಕೀಡಾಗಿದ್ದರು. ಕಾರ್ಯಕ್ರಮವೊಂದರಲ್ಲಿ ಮಾಂಸ ಸೇವನೆಯ ವಿರುದ್ಧ ಪ್ರತಿಜ್ಞೆ ಮಾಡುವಂತೆ ಐಐಟಿ ವಿದ್ಯಾರ್ಥಿಗಳಿಗೆ ಒತ್ತಾಯಿಸಿರುವ ವಿಡಿಯೋ ವೈರಲ್ ಆಗಿತ್ತು. ಐಐಟಿ ನಿರ್ದೇಶಕರೇ ಈ ರೀತಿ ಮೂಢನಂಬಿಕೆಯಿಂದ ಮಾತನಾಡುತ್ತಿದ್ದಾರಾ? ಎಂದು ಹಲವರು ಹುಬ್ಬೇರಿಸಿದ್ದರು. ಆದರೆ, ಈ ಲಕ್ಷ್ಮೀಧರ್ ಬೆಹೆರಾ ಅವರ ಶೈಕ್ಷಣಿಕ ಸಾಧನೆಯನ್ನು ನೋಡಿದರೆ ನಿಮಗೆ ಆಶ್ಚರ್ಯವಾಗುವುದು ಖಂಡಿತ.
ಐಐಟಿ ಕಾನ್ಪುರದ ರೊಬೊಟಿಕ್ಸ್ ಮತ್ತು ಎಐ ವಿಭಾಗದಲ್ಲಿ ಸುದೀರ್ಘ ಕಾಲ ಕೆಲಸ ಮಾಡಿರುವ ಪ್ರೊಫೆಸರ್ ಲಕ್ಷ್ಮೀಧರ್ ಬೆಹೆರಾ ಅವರು ಐಐಟಿ ಮಂಡಿಯ ನೇರ ಸದಸ್ಯರಾಗಿದ್ದಾರೆ. ಹಿಮಾಚಲ ಪ್ರದೇಶದ ಐಐಟಿ ಮಂಡಿಯ ನಿರ್ದೇಶಕ ಲಕ್ಷ್ಮೀಧರ್ ಬೆಹೆರಾ ಕೃತಕ ಬುದ್ಧಿಮತ್ತೆ (AI) ಮತ್ತು ರೊಬೊಟಿಕ್ಸ್ ವಿಷಯಗಳಲ್ಲಿ ಪರಿಣಿತರಾಗಿದ್ದಾರೆ.
ಇದನ್ನೂ ಓದಿ: ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ದನದ ಮಾಂಸ ತಿನ್ನಿಸಿದ ಯುವಕರು
ಐಐಟಿ ದೆಹಲಿಯಿಂದ ಪಿಎಚ್‌ಡಿ ಪಡೆದಿರುವ ಲಕ್ಷ್ಮೀಧರ್ ಬೆಹೆರಾ ಒಡಿಶಾದ ಬಾಲಸೋರ್‌ನ ತಲ್ಸಾರಾ ಗ್ರಾಮದಲ್ಲಿ ಜನಿಸಿದರು. ತಮ್ಮ ಊರಿನಲ್ಲೇ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಅವರು ಉನ್ನತ ಶಿಕ್ಷಣಕ್ಕಾಗಿ NIT ರೂರ್ಕೆಲಾದಲ್ಲಿ ಪ್ರವೇಶ ಪಡೆದರು. ಅಲ್ಲಿ ಎಂಟೆಕ್ ಮಾಡಿದ ನಂತರ ಐಐಟಿ ದೆಹಲಿಗೆ ಹೋದರು. ಅಲ್ಲಿಂದ ಅವರು ಪಿಎಚ್‌ಡಿ ಪದವಿ ಪಡೆದರು. ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನ ಹಲವು ವಿಷಯಗಳಲ್ಲಿ ಪರಿಣತರಾಗಿದ್ದಾರೆ.
ತಮ್ಮ ಸಂಶೋಧನೆ ಮತ್ತು ಬೋಧನಾ ವೃತ್ತಿಯ ಕಳೆದ 27 ವರ್ಷಗಳಲ್ಲಿ ಪ್ರೊ. ಲಕ್ಷ್ಮೀಧರ್ ಬೆಹೆರಾ ಅವರು ಇಂಟೆಲಿಜೆಂಟ್ ಸಿಸ್ಟಮ್ಸ್ ಮತ್ತು ಕಂಟ್ರೋಲ್, ವಿಷನ್-ಆಧಾರಿತ ರೊಬೊಟಿಕ್ಸ್, ವೇರ್‌ಹೌಸ್ ಆಟೊಮೇಷನ್, ನ್ಯಾನೊ-ರೊಬೊಟಿಕ್ಸ್, ಸಾಫ್ಟ್ ಕಂಪ್ಯೂಟಿಂಗ್, ಸೈಬರ್ ಫಿಸಿಕ್ಸ್ ಸಿಸ್ಟಂ, ಬ್ರೈನ್-ಕಂಪ್ಯೂಟರ್-ಇಂಟರ್‌ಫೇಸ್ ಮತ್ತು ಡ್ರೋನ್ ಆಧಾರಿತ ಪೈಪ್‌ಲೈನ್ ಇನ್‌ಸ್ಪೆಕ್ಷನ್ ಸಿಸ್ಟಮ್‌ಗಳಂತಹ ಕ್ಷೇತ್ರಗಳಲ್ಲಿ ಲಕ್ಷ್ಮೀಧರ್ ಪರಿಣತಿ ಹೊಂದಿದ್ದಾರೆ.
ಲಕ್ಷ್ಮೀಧರ್ ಬೆಹೆರಾ ಅವರು ಜರ್ಮನ್ ನ್ಯಾಷನಲ್ ಲೈಬ್ರರಿ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡಿದ್ದಾರೆ. ಇದಾದ ನಂತರ ಅವರು ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪಿಲಾನಿಯಲ್ಲಿಯೂ ಕೆಲಸ ಮಾಡಿದ್ದರು. 2001ರಲ್ಲಿ ಕಾನ್ಪುರದ ಐಐಟಿಗೆ ಸೇರಿದ ಅವರು ರೊಬೊಟಿಕ್ಸ್ ಮತ್ತು AI ವಿಭಾಗದಲ್ಲಿ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಭೂಕುಸಿತಕ್ಕೆ ಮಾಂಸ ಸೇವನೆ ಕಾರಣವೆಂದ ಐಐಟಿ ನಿರ್ದೇಶಕ!
ಬಳಿಕ, ಐಐಟಿ ಕಾನ್ಪುರದಲ್ಲಿ ರೊಬೊಟಿಕ್ಸ್ ಮತ್ತು AIನಲ್ಲಿ ಕೆಲಸ ಮಾಡುವ ಜವಾಬ್ದಾರಿಯನ್ನು ಪಡೆದರು. ಐಐಟಿ ಕಾನ್ಪುರದಲ್ಲಿ ದೀರ್ಘಕಾಲ ಕೆಲಸ ಮಾಡಿದ ನಂತರ ಪ್ರೊಫೆಸರ್ ಲಕ್ಷ್ಮೀಧರ್ ಬೆಹೆರಾ ಅವರನ್ನು ಐಐಟಿ ಮಂಡಿಯ ನಿರ್ದೇಶಕರಾಗಿ ನೇಮಿಸಲಾಗಿದೆ.
ಏನಿದು ವಿವಾದ?: “ನಾವು ಪ್ರಾಣಿಗಳ ಹತ್ಯೆಯನ್ನು ನಿಲ್ಲಿಸದಿದ್ದರೆ ಹಿಮಾಚಲ ಪ್ರದೇಶವು ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇಲ್ಲಿ ಮುಗ್ಧ ಪ್ರಾಣಿಗಳನ್ನು ಕಡಿಯಲಾಗುತ್ತಿದೆ. ಇದು ಪರಿಸರದ ಹಾನಿಗೆ ಕಾರಣವಾಗುತ್ತಿದೆ. ಪ್ರಕೃತಿ ಮತ್ತು ಮನುಷ್ಯರ ನಡುವೆ ಸಹಜೀವನದ ಸಂಬಂಧ ಇರಬೇಕು. ಹೀಗಾಗಿ, ನೀವೆಲ್ಲರೂ ಮಾಂಸಾಹಾರ ತ್ಯಜಿಸುವುದಾಗಿ ಪ್ರತಿಜ್ಞೆ ಮಾಡಬೇಕು” ಎಂದು ಬೆಹೆರಾ ತಮ್ಮ ಐಐಟಿ ವಿದ್ಯಾರ್ಥಿಗಳಿಗೆ ಹೇಳಿದ್ದರು. ಅವರ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿದ್ಯಾರ್ಥಿಗಳು ಮಾಂಸಾಹಾರ ಸೇವನೆಯಿಂದ ದೂರವಿರಬೇಕು ಎಂದು ಕರೆ ನೀಡಿದ ಅವರು, ಇದು ಉತ್ತಮ ಮನುಷ್ಯರಾಗುವ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದೆ ಎಂದಿದ್ದರು. ಅವರ ಹೇಳಿಕೆಗಳು ನೆಟ್ಟಿಗರಿಂದ ಟೀಕೆಗೆ ಒಳಗಾಗಿದ್ದವು.
ವಿವಾದ ಇದೇ ಮೊದಲಲ್ಲ:
ಲಕ್ಷ್ಮೀಧರ್ ಬೆಹೆರಾ ಈ ರೀತಿಯ ವಿವಾದಕ್ಕೀಡಾಗಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2022ರಲ್ಲಿ ಅವರು ಮಾತನಾಡಿದ್ದ ವಿಡಿಯೋವೊಂದು ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಅವರು ತಮ್ಮ ಜೀವನದಲ್ಲಿ ನಡೆದ ಘಟನೆಯೊಂದನ್ನು ಹಂಚಿಕೊಂಡಿದ್ದರು. “ನನ್ನ ಗೆಳೆಯರೊಬ್ಬರ ಕುಟುಂಬಕ್ಕೆ ಭೂತದ ಕಾಟ ಎದುರಾಗಿತ್ತು. ಆಗ ನಾನು ಪವಿತ್ರ ಮಂತ್ರಗಳನ್ನು ಪಠಿಸುವ ಮೂಲಕ ತನ್ನ ಸ್ನೇಹಿತನ ಅಪಾರ್ಟ್ಮೆಂಟ್ ಮತ್ತು ಕುಟುಂಬವನ್ನು ದುಷ್ಟಶಕ್ತಿಗಳಿಂದ ರಕ್ಷಿಸಿದ್ದೆ. 1993ರಲ್ಲಿ ಈ ಘಟನೆ ನಡೆದಿತ್ತು. ಪ್ರೇತಗಳ ಕಾಟಕ್ಕೆ ಒಳಗಾಗಿದ್ದ ನನ್ನ ಸ್ನೇಹಿತನಿಗೆ ಸಹಾಯ ಮಾಡಲು ಚೆನ್ನೈಗೆ ಹೋಗಿದ್ದೆ. ನಾನು ಆತನ ಮನೆಯಲ್ಲಿ “ಹರೇ ರಾಮ ಹರೇ ಕೃಷ್ಣ” ಮಂತ್ರವನ್ನು ಪಠಿಸುವುದರ ಜೊತೆಗೆ ಭಗವದ್ಗೀತೆಯಲ್ಲಿನ ಕೆಲವು ಭಾಗವನ್ನು ಪಠಿಸಿದಾಗ ದುಷ್ಟಶಕ್ತಿಗಳು ಆ ಮನೆಯಿಂದ ಹೊರಹೋದವು. ಆಧುನಿಕ ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಕೆಲವು ವಿಷಯಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಇಂದಿಗೂ ದೆವ್ವಗಳು ಅಸ್ತಿತ್ವದಲ್ಲಿವೆ” ಎಂದು ಹೇಳುವ ಮೂಲಕ ಟೀಕೆಗೆ ಈಡಾಗಿದ್ದರು. ಟೆಕ್ನಾಲಜಿ ಕ್ಷೇತ್ರದಲ್ಲಿ ಇಷ್ಟೆಲ್ಲ ಸಾಧನೆ ಮಾಡಿರುವ ವ್ಯಕ್ತಿ ಇಷ್ಟು ಮೂಢನಂಬಿಕೆಯನ್ನು ಹೊಂದಿರಲು ಹೇಗೆ ಸಾಧ್ಯ? ಎಂಬ ಪ್ರಶ್ನೆಗಳು ಉದ್ಭವಿಸಿದ್ದವು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:30 pm, Fri, 8 September 23