
ನವದೆಹಲಿ, ಅಕ್ಟೋಬರ್ 15: ಬಾಲಿವುಡ್ ನಟ ಇಮ್ರಾನ್ ಖಾನ್ಗೆ ಭಾರತವನ್ನು ತೊರೆಯುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಮುಂಬೈನಲ್ಲಿ ನಡೆದ ರಾಜಕೀಯ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಾಲಿವುಡ್ನ ಖ್ಯಾತ ನಟ ಆಮಿರ್ ಖಾನ್ ಸೋದರಳಿಯ ಇಮ್ರಾನ್ ಖಾನ್ಗೆ ಮುಂಬೈ ಪೊಲೀಸರು ಅಕ್ಟೋಬರ್ 28ರ ಒಳಗೆ ಭಾರತದ ಗಡಿ ದಾಟುವಂತೆ ಡೆಡ್ಲೈನ್ ನೀಡಲಾಗಿದೆ.
ಮುಂಬೈನ ಐತಿಹಾಸಿಕ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಹಾಗೂ ಇತರ ಸಂಘಟನೆಗಳು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವೇಳೆ ಇಮ್ರಾನ್ ಖಾನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಾಲಿವುಡ್ ಚಿತ್ರಗಳಾದ ‘ಜಾನೆ ತೂ… ಯಾ ಜಾನೆ ನಾ’, ‘ಡೆಲ್ಲಿ ಬೆಲ್ಲಿ’ ಖ್ಯಾತಿಯ ಇಮ್ರಾನ್ ಖಾನ್ ಹುಟ್ಟಿನಿಂದಲೇ ಅಮೆರಿಕ ಸಂಯುಕ್ತ ಸಂಸ್ಥಾನದ (USA) ಪೌರತ್ವವನ್ನು ಹೊಂದಿದ್ದಾರೆ.
ಅವರು ಭಾರತದಲ್ಲಿ ಶಾಶ್ವತವಾಗಿ ನೆಲೆಸಲು ಮತ್ತು ಕೆಲಸ ಮಾಡಲು ‘ಓವರ್ಸೀಸ್ ಸಿಟಿಜನ್ ಆಫ್ ಇಂಡಿಯಾ’ (OCI) ಕಾರ್ಡ್ ಸೌಲಭ್ಯವನ್ನು ಹೊಂದಿದ್ದಾರೆ. ಭಾರತೀಯ ವಲಸೆ ಕಾಯ್ದೆ ಮತ್ತು ವಿದೇಶಿಯರ ಕಾಯ್ದೆಯ ಕಟ್ಟುನಿಟ್ಟಾದ ನಿಯಮಗಳ ಪ್ರಕಾರ, ಯಾವುದೇ ವಿದೇಶಿ ಪ್ರಜೆ ಅಥವಾ ಒಸಿಐ ಕಾರ್ಡ್ದಾರರು ಭಾರತದ ಆಂತರಿಕ ರಾಜಕೀಯ ಚಟುವಟಿಕೆಗಳು, ಸರ್ಕಾರದ ವಿರುದ್ಧದ ಪ್ರತಿಭಟನೆಗಳು ಅಥವಾ ಧರಣಿಗಳಲ್ಲಿ ಭಾಗವಹಿಸುವಂತಿಲ್ಲ. ರಾಜಕೀಯ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ವೀಸಾ ಮತ್ತು ಒಸಿಐ ಷರತ್ತುಗಳನ್ನು ನೇರವಾಗಿ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ, ಅಕ್ಟೋಬರ್ 28 ರೊಳಗೆ ಸ್ವಯಂಪ್ರೇರಿತರಾಗಿ ದೇಶವನ್ನು ತೊರೆಯಬೇಕೆಂದು ಅವರಿಗೆ ಅಧಿಕೃತ ನೋಟಿಸ್ ನೀಡಲಾಗಿದೆ.
ಮತ್ತಷ್ಟು ಓದಿ:
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ‘ಇಂಡಿ’ ಬಣದ ಜಂಟಿ ಸಮರ: ಬೀದಿ ಹೋರಾಟ ಹಾಗೂ ಸುಪ್ರೀಂ ಕೋರ್ಟ್ ಮೊರೆ ಹೋದ ವಿಪಕ್ಷಗಳು
ಚುನಾವಣಾ ಆಯೋಗದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ದೆಹಲಿ ಬೆನ್ನಲ್ಲೇ ಮುಂಬೈನಲ್ಲೂ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು. ಈ ಸಾರ್ವಜನಿಕ ಆಂದೋಲನದಲ್ಲಿ ಇಮ್ರಾನ್ ಖಾನ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ ಆರೋಪದ ಮೇಲೆ ಮುಂಬೈ ಪೊಲೀಸರು ಇತರ ಪ್ರತಿಭಟನಾಕಾರರೊಂದಿಗೆ ಇವರನ್ನೂ ಬಂಧಿಸಿ ಠಾಣೆಗೆ ಕರೆದೊಯ್ದಿದ್ದರು. ವಿಚಾರಣೆಯ ವೇಳೆ ಅವರ ಪೌರತ್ವ ದಾಖಲೆಗಳನ್ನು ಪರಿಶೀಲಿಸಿದಾಗ ಅವರು ಅಮೆರಿಕನ್ ಪ್ರಜೆ ಎಂಬ ಅಂಶ ದೃಢಪಟ್ಟಿದೆ.
ಇಮ್ರಾನ್ ಖಾನ್ ಹಿನ್ನೆಲೆ: ಅಮೆರಿಕದ ವಿಸ್ಕಾನ್ಸಿನ್ನಲ್ಲಿ ಜನಿಸಿದ ಇಮ್ರಾನ್ ಖಾನ್, ದೀರ್ಘಕಾಲದಿಂದ ಮುಂಬೈನಲ್ಲೇ ವಾಸಿಸುತ್ತಾ ಹಿಂದಿ ಚಿತ್ರರಂಗದಲ್ಲಿ ನಟನಾಗಿ ಗುರುತಿಸಿಕೊಂಡಿದ್ದಾರೆ. ಭಾರತದಲ್ಲಿ ದ್ವಿಪೌರತ್ವಕ್ಕೆ ಅವಕಾಶವಿಲ್ಲದಿರುವುದರಿಂದ, ಅವರು ತಮ್ಮ ಯುಎಸ್ ಪಾಸ್ಪೋರ್ಟ್ ಅನ್ನು ಉಳಿಸಿಕೊಂಡು ಒಸಿಐ ಕಾರ್ಡ್ ಮೂಲಕ ಭಾರತದಲ್ಲಿ ವಾಸಿಸುತ್ತಿದ್ದರು.
ಒಸಿಐ ಕಾರ್ಡ್ ರದ್ದಾಗುವ ಸಾಧ್ಯತೆ: ವಿದೇಶಿ ಪ್ರಜೆಗಳು ಇಂತಹ ಭಾರತ ವಿರೋಧಿ ಅಥವಾ ಆಡಳಿತ ವಿರೋಧಿ ರಾಜಕೀಯ ಪ್ರತಿಭಟನೆಗಳಲ್ಲಿ ಭಾಗವಹಿಸಿದರೆ ಗೃಹ ಸಚಿವಾಲಯವು ಅವರ ಒಸಿಐ ಕಾರ್ಡ್ ಅನ್ನು ಶಾಶ್ವತವಾಗಿ ರದ್ದುಪಡಿಸುವ ಅಧಿಕಾರವನ್ನು ಹೊಂದಿದೆ. ಈ ಹಿಂದೆ ಪೌರತ್ವ ತಿದ್ದುಪಡಿ ಕಾಯ್ದೆ (CAA) ಮತ್ತು ರೈತರ ಪ್ರತಿಭಟನೆಗಳ ವರದಿಗಾರಿಕೆ/ಭಾಗವಹಿಸುವಿಕೆಯ ಸಂದರ್ಭದಲ್ಲೂ ಕೆಲ ವಿದೇಶಿ ಪ್ರಜೆಗಳು ಹಾಗೂ ಸಂಶೋಧಕರಿಗೆ ಇದೇ ರೀತಿ ಗಡಿಪಾರು ನೋಟಿಸ್ ನೀಡಲಾಗಿತ್ತು.
ಕಾನೂನು ಹೋರಾಟದ ಆಯ್ಕೆ: ಪೊಲೀಸರ ಈ ಆದೇಶದ ವಿರುದ್ಧ ನಟ ಇಮ್ರಾನ್ ಖಾನ್ ಬಾಂಬೆ ಹೈಕೋರ್ಟ್ ಮೊರೆ ಹೋಗಿ ತುರ್ತು ತಡೆಯಾಜ್ಞೆ ಪಡೆಯಲು ಅಥವಾ ವಿದೇಶಾಂಗ ಸಚಿವಾಲಯ/ಗೃಹ ಸಚಿವಾಲಯದ ಮುಂದೆ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:59 am, Thu, 15 October 26