IND vs AUS: ಕ್ರಿಕೆಟ್ ಮ್ಯಾಚ್ ಟಿಕೆಟ್ ಖರೀದಿಗೆಂದು ಏಕಾಏಕಿ ಧಾವಿಸಿ ಬಂದ ಸಾವಿರಾರು ಅಭಿಮಾನಿಗಳು; ಕಾಲ್ತುಳಿತದಿಂದ ನಾಲ್ವರಿಗೆ ತೀವ್ರಗಾಯ
ಕಾಲ್ತುಳಿತದಿಂದ ಕೆಲ ಪೊಲೀಸ್ ಸಿಬ್ಬಂದಿಯೂ ಸೇರಿದಂತೆ ಹಲವು ಅಭಿಮಾನಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ.
ಹೈದರಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ನಡುವೆ ನಡೆಯಲಿರುವ 2ನೇ ಟಿ20 ಮ್ಯಾಚ್ಗಾಗಿ ಟಿಕೆಟ್ ಖರೀದಿಸಲು ನಗರದ ಜಿಮ್ಖಾನಾ ಕ್ರೀಡಾಂಗಣಕ್ಕೆ ಏಕಾಏಕಿ ಸಾವಿರಾರು ಮಂದಿ ನುಗ್ಗಿ ಬಂದಾಗ ಉಂಟಾದ ಗೊಂದಲ ಮತ್ತು ಕಾಲ್ತುಳಿತದಿಂದ ನಾಲ್ವರಿಗೆ ತೀವ್ರ ಗಾಯಗಳಾಗಿವೆ. ಕ್ರೀಡಾಂಗಣದ ಒಳಗೆ ಪ್ರವೇಶಿಸಲೆಂದು ಅಭಿಮಾನಿಗಳು ಗೇಟ್ ಒಡೆದರು. ಈ ವೇಳೆ ನೂಕಾಟ-ತಳ್ಳಾಟ ನಡೆಯಿತು. ಗದ್ದಲ ಆರಂಭವಾದ ಪೊಲೀಸರು ಸಾಕಷ್ಟು ಸಂಖ್ಯೆಯಲ್ಲಿ ಸ್ಥಳದಲ್ಲಿ ಇರಲಿಲ್ಲ, ಆದರೆ ನಂತರ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಯಿತು. ಪೊಲೀಸರು ಲಾಠಿ ಚಾರ್ಜ್ ಮಾಡಿ ಗುಂಪು ಚದುರಿಸಿದರು.
ಟಿಕೆಟ್ಗಾಗಿ ಬೆಳಿಗ್ಗೆ 5 ಗಂಟೆಯಿಂದಲೇ ಅಭಿಮಾನಿಗಳು ಕ್ರೀಡಾಂಗಣದ ಎದುರು ನಿಂತಿದ್ದರು. ಟಿಕೆಟ್ ಕೌಂಟರ್ಗಳನ್ನು 10 ಗಂಟೆಗೆ ತೆರೆದ ಕ್ರೀಡಾಂಗಣದ ಸಿಬ್ಬಂದಿ ಏಕಕಾಲಕ್ಕೆ 20 ಮಂದಿಯನ್ನು ಮಾತ್ರ ಒಳಗೆ ಬಿಟ್ಟು, ಟಿಕೆಟ್ ಕೊಡುತ್ತಿದ್ದರು. ಟಿಕೆಟ್ ವಿತರಣೆ ತಡವಾಗುತ್ತಿದೆ ಎಂದು ಆರೋಪಿಸಿದ ಅಭಿಮಾನಿಗಳು ಏಕಾಏಕಿ ಒಳನುಗ್ಗಲು ಯತ್ನಿಸಿದರು. ಕೇವಲ ನಗದನ್ನು ಮಾತ್ರ ಸ್ವೀಕರಿಸಿ ಟಿಕೆಟ್ ವಿತರಿಸಲಾಗುತ್ತಿದೆ. ಆನ್ಲೈನ್ ಪೇಮೆಂಟ್ಗೆ ಅವಕಾಶವಿಲ್ಲ ಎನ್ನುವುದೂ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಒಬ್ಬರಿಗೆ ಎರಡು ಟಿಕೆಟ್ ಮಾತ್ರ ಕೊಡಲಾಗುತ್ತಿದೆ. ಟಿಕೆಟ್ಗಾಗಿ ಬರುವವರು ಆಧಾರ್ ಕಾರ್ಡ್ನ ಜೆರಾಕ್ಸ್ ಪ್ರತಿಯೊಂದಿಗೆ ಇಮೇಲ್ ವಿಳಾಸ ಹಾಗೂ ಮೊಬೈಲ್ ನಂಬರ್ ಕೊಡಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಮೂರು ವರ್ಷಗಳಿಂದ ಪ್ರತ್ಯಕ್ಷ ಮ್ಯಾಚ್ ನೋಡಲು ಸಾಧ್ಯವಾಗದಿದ್ದ ಅಭಿಮಾನಿಗಳು ಟಿಕೆಟ್ ಖರೀದಿಗಾಗಿ ಕಾತರದಿಂದ ಕಾಯುತ್ತಿದ್ದರು. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಉಪ್ಪಲ್ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 25ರಂದು ಪಂದ್ಯ ನಡೆಯಲಿದೆ. ಆನ್ಲೈನ್ನಲ್ಲಿ 15 ಸಾವಿರ ಟಿಕೆಟ್ಗಳನ್ನು ಮಾರಾಟ ಮಾಡಲಾಗಿದೆ. ಆಫ್ಲೈನ್ನಲ್ಲಿ 15 ಸಾವಿರ ಟಿಕೆಟ್ ಮಾರಲಾಗುತ್ತಿದೆ.
ಕಾಲ್ತುಳಿತದಿಂದ ಕೆಲ ಪೊಲೀಸ್ ಸಿಬ್ಬಂದಿಯೂ ಸೇರಿದಂತೆ ಹಲವು ಅಭಿಮಾನಿಗಳು ತೀವ್ರವಾಗಿ ಗಾಯಗೊಂಡಿದ್ತದಾರೆ. ತಕ್ಷಣ ಅವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಯಿತು.
Published On - 1:24 pm, Thu, 22 September 22