Independence Day 2022: ಟೆಲಿಪ್ರಾಂಪ್ಟರ್ ಕೈಬಿಟ್ಟು ಕಾಗದ ಬಳಸಿ ಭಾಷಣ ಮಾಡಿದ ಪ್ರಧಾನಿ ಮೋದಿ
PM Modi Independence Day Speech: ಈ ಹಿಂದಿನ ಭಾಷಣಗಳಲ್ಲಿ ಮೋದಿ ಅವರು ಟೆಲಿಪ್ರಾಂಪ್ಟರ್ ಬಳಕೆ ಮಾಡುತ್ತಿದ್ದರು. ನೋಡುವವರಿಗೆ ಅವರು ನೇರವಾಗಿ ತಮ್ಮನ್ನೇ ನೋಡುತ್ತಾ ಮಾತನಾಡುತ್ತಿದ್ದಾರೆ ಎನಿಸುವಂತೆ ಇರುತ್ತಿತ್ತು
ದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು 9ನೇ ಬಾರಿಗೆ ದೆಹಲಿಯ ಕೆಂಪುಕೋಟೆಯಿಂದ (Red Fort) ದೇಶದ ಜನರನ್ನು ಉದ್ದೇಶಿಸಿ ಭಾಷಣ ಮಾಡಿದರು. ಪ್ರಧಾನಿ ಭಾಷಣದಲ್ಲಿ ಇಂದು ಒಂದು ವ್ಯತ್ಯಾಸ ಮುಖ್ಯವಾಗಿ ಎದ್ದು ಕಂಡಿತು. ಟೆಲಿಪ್ರಾಂಪ್ಟರ್ ಬದಲಿಗೆ ಕಾಗದದ ಚೀಟಿಗಳಲ್ಲಿ ಬರೆದಿದ್ದ ಅಂಶಗಳನ್ನು ಆಧರಿಸಿ ಅವರು ಭಾಷಣ ಮಾಡಿದರು. ಈ ಹಿಂದಿನ ಭಾಷಣಗಳಲ್ಲಿ ಮೋದಿ ಅವರು ಟೆಲಿಪ್ರಾಂಪ್ಟರ್ ಬಳಕೆ ಮಾಡುತ್ತಿದ್ದರು. ನೋಡುವವರಿಗೆ ಅವರು ನೇರವಾಗಿ ತಮ್ಮನ್ನೇ ನೋಡುತ್ತಾ ಮಾತನಾಡುತ್ತಿದ್ದಾರೆ ಎನಿಸುವಂತೆ ಇರುತ್ತಿತ್ತು. ಆದರೆ ಈ ಬಾರಿ ಅವರು ಆಗಾಗ ಕಾಗದದ ಚೀಟಿಗಳನ್ನು ನೋಡುತ್ತಾ, ಭಾಷಣ ಮುಂದುವರಿಸಿದರು.
ರಾಷ್ಟ್ರೀಯ ಧ್ವಜದ ಚಿತ್ರವಿರುವ ಪೇಟ, ಬಿಳಿ ಜುಬ್ಬಾ- ಪೈಜಾಮದ ಮೇಲೆ ನೀತಿ ಬಣ್ಣದ ನೆಹರೂ ಜಾಕೆಟ್ ತೊಟ್ಟು ಮೋದಿ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು. ಮೋದಿಯವರ ಬಿಳಿ ಕುರ್ತಾ ಮತ್ತು ನೀಲಿ ಜಾಕೆಟ್ ಹಾಗೂ ಅದಕ್ಕೊಪ್ಪುವ ವಿಶೇಷ ವಿನ್ಯಾಸದ ಪೇಟ ಗಮನ ಸೆಳೆಯಿತು.
ಸ್ವಾತಂತ್ರ್ಯ ದಿನಾಚರಣೆಯ ಭಾಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿಶಿಷ್ಟ ಉಡುಪುಗಳು ಯಾವಾಗಲೂ ರಾಷ್ಟ್ರದ ಗಮನವನ್ನು ಸೆಳೆಯುತ್ತವೆ. ಈ ವರ್ಷ ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಮೋದಿ ಸಾಂಪ್ರದಾಯಿಕ ಕುರ್ತಾ ಮತ್ತು ನೀಲಿ ಜಾಕೆಟ್ ಮತ್ತು ಪೇಟವನ್ನು ಧರಿಸಿದ್ದರು. ಐತಿಹಾಸಿಕ ಕೆಂಪು ಕೋಟೆಯ ಮೇಲೆ ಮೋದಿ ‘ತಿರಂಗ’ವನ್ನು ಹಾರಿಸಿದರು. ಕೆಂಪುಕೋಟೆಗೆ ಆಗಮಿಸಿದ ಪ್ರಧಾನಿ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಮತ್ತು ರಕ್ಷಣಾ ಕಾರ್ಯದರ್ಶಿ ಸ್ವಾಗತಿಸಿದರು.
2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಯುವಜನರಿಗೆ ಪ್ರಧಾನಮಂತ್ರಿ ಮೋದಿ ಕರೆ ನೀಡಿದರು. ಭಾರತದ ಯುವಜನತೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 100 ವರ್ಷಗಳಾಗುವುದರೊಳಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಪ್ರತಿಜ್ಞೆ ಮಾಡುವಂತೆ ಪ್ರಧಾನಿ ಮೋದಿ ಸಲಹೆ ಮಾಡಿದರು.
Published On - 10:11 am, Mon, 15 August 22