
ಬೆಂಗಳೂರು, ಆಗಸ್ಟ್ 12: ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಗೆ ಶಾಲಾ-ಕಾಲೇಜುಗಳಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಧ್ವಜಾರೋಹಣ, ದೇಶಭಕ್ತಿ ಗೀತೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಗಳನ್ನೂ ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳು ಸ್ವಾತಂತ್ರ್ಯದ ಮಹತ್ವ, ದೇಶದ ಅಭಿವೃದ್ಧಿ ಹಾಗೂ ತಮ್ಮ ಜವಾಬ್ದಾರಿಗಳ ಕುರಿತು ಪ್ರಬಂಧ ಮತ್ತು ಭಾಷಣದ ಮೂಲಕ ಅಭಿಪ್ರಾಯ ಹಂಚಿಕೊಳ್ಳಬಹುದು. ಭಾಷಣ, ಪ್ರಬಂಧಗಳಿಗಾಗಿ ಆಯ್ಕೆ ಮಾಡಬಹುದಾದ ವಿಷಯಗಳು ಸೇರಿದಂತೆ ವಿದ್ಯಾರ್ಥಿಗಳಿಗಾಗಿ ಇಲ್ಲಿವೆ ಸರಳವಾದ ಟಿಪ್ಸ್
ಸ್ವಾತಂತ್ರ್ಯ ದಿನದ ಪ್ರಬಂಧಕ್ಕೆ ‘ನನ್ನ ಭಾರತ ನನ್ನ ಹೆಮ್ಮೆ’, ‘ಸ್ವಾತಂತ್ರ್ಯದ ಮಹತ್ವ’, ‘ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ’, ‘1947ರಿಂದ ಭಾರತದ ಪಯಣ’, ‘ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ’, ‘2047ರ ಭಾರತ’ ಮುಂತಾದ ವಿಷಯಗಳನ್ನು ಆಯ್ಕೆ ಮಾಡಬಹುದು.
ಪ್ರಬಂಧವನ್ನು ಪೀಠಿಕೆ, ಮುಖ್ಯ ವಿಚಾರ ಮತ್ತು ಮುಕ್ತಾಯ ಎಂಬ ಮೂರು ಭಾಗಗಳಲ್ಲಿ ಬರೆಯುವುದು ಉತ್ತಮ. ಸ್ವಾತಂತ್ರ್ಯ ಹೋರಾಟದ ಕುರಿತು ಮಾಹಿತಿ ನೀಡುವುದರ ಜೊತೆಗೆ, ಇಂದಿನ ಭಾರತ ಹೇಗೆ ಅಭಿವೃದ್ಧಿಯಾಗುತ್ತಿದೆ ಮತ್ತು ದೇಶದ ಭವಿಷ್ಯದಲ್ಲಿ ವಿದ್ಯಾರ್ಥಿಗಳ ಪಾತ್ರವೇನು ಎಂಬುದನ್ನೂ ವಿವರಿಸಬಹುದು. ಕೇವಲ ಇತಿಹಾಸದ ಘಟನೆಗಳನ್ನು ಪಟ್ಟಿ ಮಾಡುವ ಬದಲು ಸ್ವಂತ ಆಲೋಚನೆಗಳು ಹಾಗೂ ಉದಾಹರಣೆಗಳನ್ನು ಸೇರಿಸಿದರೆ ಪ್ರಬಂಧ ಹೆಚ್ಚು ಪರಿಣಾಮಕಾರಿಯಾಗುತ್ತದೆ.
ಸ್ವಾತಂತ್ರ್ಯ ದಿನದ ಭಾಷಣವನ್ನು ಶುಭಾಶಯದೊಂದಿಗೆ ಆರಂಭಿಸಿ, ಆಗಸ್ಟ್ 15ರ ಐತಿಹಾಸಿಕ ಮಹತ್ವವನ್ನು ಸಂಕ್ಷಿಪ್ತವಾಗಿ ವಿವರಿಸಬಹುದು. ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಬಹುದು.
ನಂತರ “ಸ್ವಾತಂತ್ರ್ಯ ಎಂದರೆ ಕೇವಲ ಹಕ್ಕುಗಳಲ್ಲ, ಜವಾಬ್ದಾರಿಯೂ ಹೌದು” ಎಂಬ ವಿಚಾರವನ್ನು ವಿದ್ಯಾರ್ಥಿಗಳು ತಮ್ಮ ಭಾಷಣದಲ್ಲಿ ಒತ್ತಿಹೇಳಬಹುದು. ದೇಶದ ಸಂವಿಧಾನವನ್ನು ಗೌರವಿಸುವುದು, ಪರಿಸರವನ್ನು ರಕ್ಷಿಸುವುದು, ಸಾರ್ವಜನಿಕ ಆಸ್ತಿಯನ್ನು ಕಾಪಾಡುವುದು, ಉತ್ತಮ ಶಿಕ್ಷಣ ಪಡೆಯುವುದು ಹಾಗೂ ಸಮಾಜದಲ್ಲಿ ಏಕತೆ ಮತ್ತು ಸೌಹಾರ್ದ ಕಾಪಾಡುವುದು ಕೂಡ ದೇಶ ಸೇವೆಯೇ ಎಂಬ ಸಂದೇಶ ನೀಡಬಹುದು. ಷಣದ ಕೊನೆಯಲ್ಲಿ ದೇಶದ ಅಭಿವೃದ್ಧಿಗೆ ತಮ್ಮಿಂದಾದ ಕೊಡುಗೆ ನೀಡುವ ಸಂಕಲ್ಪದೊಂದಿಗೆ ಮುಕ್ತಾಯಗೊಳಿಸಬಹುದು.
ಕಿರಿಯ ಮಕ್ಕಳು 30 ಸೆಕೆಂಡ್‌ನಿಂದ 1 ನಿಮಿಷದವರೆಗೆ ಸರಳ ಭಾಷಣದಲ್ಲಿ ಭಾರತದ ಧ್ವಜ, ಸ್ವಾತಂತ್ರ್ಯ ಹೋರಾಟಗಾರರು, ದೇಶದ ವೈವಿಧ್ಯತೆ ಮತ್ತು ದೇಶಪ್ರೇಮದ ಬಗ್ಗೆ ಮಾತನಾಡಬಹುದು. “ನನಗೆ ಭಾರತ ಎಂದರೆ ಹೆಮ್ಮೆ”, “ನಾನು ಬೆಳೆದು ದೇಶಕ್ಕೆ ಉತ್ತಮ ನಾಗರಿಕನಾಗುತ್ತೇನೆ” ಎಂಬಂತಹ ಸರಳ ವಾಕ್ಯಗಳನ್ನು ಬಳಸಬಹುದು.
ಪ್ರೌಢಶಾಲೆ ಮತ್ತು ಪಿಯುಸಿ ವಿದ್ಯಾರ್ಥಿಗಳು ಭಾಷಣದಲ್ಲಿ ಸ್ವಾತಂತ್ರ್ಯವನ್ನು ಇಂದಿನ ಕಾಲಕ್ಕೆ ಜೋಡಿಸಬಹುದು. ಜಿಟಲ್ ಯುಗ, ಶಿಕ್ಷಣ, ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆ, ತಂತ್ರಜ್ಞಾನ, ಯುವಕರ ಜವಾಬ್ದಾರಿ ಮತ್ತು 2047ರ ಭಾರತದ ಕನಸು ಮುಂತಾದ ವಿಚಾರಗಳನ್ನು ಪ್ರಸ್ತಾಪಿಸಬಹುದು.
ಭಾಷಣ ಅಥವಾ ಪ್ರಬಂಧ ಬರೆಯುವಾಗ ಇಂಟರ್‌ನೆಟ್‌ನಿಂದ ಸಂಪೂರ್ಣ ವಿಷಯವನ್ನು ನಕಲು ಮಾಡುವ ಬದಲು, ಮಾಹಿತಿಯನ್ನು ಅರ್ಥಮಾಡಿಕೊಂಡು ಸ್ವಂತ ಪದಗಳಲ್ಲಿ ಮಂಡಿಸುವುದು ಹೆಚ್ಚು ಪರಿಣಾಮಕಾರಿ. ಇದರಿಂದ ವಿದ್ಯಾರ್ಥಿಗಳ ಜ್ಞಾನ, ಸೃಜನಶೀಲತೆ ಹಾಗೂ ವಿಚಾರ ಮಂಡಿಸುವ ಸಾಮರ್ಥ್ಯವೂ ಸ್ಪಷ್ಟವಾಗುತ್ತದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ