ಬೆಳಗಾವಿಯಲ್ಲಿ ನಡೆಯಲಿದೆ ಭಾರತ- ಜಪಾನ್ ಜಂಟಿ ಸಮರಾಭ್ಯಾಸ; ಎಂದಿನಿಂದ? ಮಾಹಿತಿ ಇಲ್ಲಿದೆ
ಭಾರತ ಹಾಗೂ ಜಪಾನ್ನ ಜಂಟಿ ಸಮರಾಭ್ಯಾಸ ‘ಧರ್ಮ ಗಾರ್ಡಿಯನ್ 2022’ ಫೆಬ್ರವರಿ 17ರಿಂದ ಬೆಳಗಾವಿಯಲ್ಲಿ ನಡೆಯಲಿದೆ. ಸ್ಥಳ ಪರಿಶೀಲನೆ ಹಾಗೂ ಈ ಕುರಿತ ಮಾತುಕತೆಗೆ ಜಪಾನ್ ನಿಯೋಗವು ಮೂರು ದಿನಗಳ ಸಭೆಯಲ್ಲಿ ಭಾಗವಹಿಸಿತ್ತು.
ಬೆಳಗಾವಿ: ಭಾರತ ಮತ್ತು ಜಪಾನ್ ನಡುವೆ ಮುಂಬರುವ ಜಂಟಿ ಮಿಲಿಟರಿ ಸಮರಾಭ್ಯಾಸವಾದ ‘ಧರ್ಮ ಗಾರ್ಡಿಯನ್-2022’ಕ್ಕಾಗಿ ಮೂರು ದಿನಗಳ ಅಂತಿಮ ಯೋಜನಾ ಸಮ್ಮೇಳನ ಮತ್ತು ಸ್ಥಳ ಪರಿಶೀಲನೆಯನ್ನು ಇಂದು ಜಪಾನ್ ಮತ್ತು ಭಾರತದ ನಿಯೋಗವು ನಡೆಸಿವೆ. ಜಂಟಿ ಸಮರಾಭ್ಯಾಸವನ್ನು 27 ಫೆಬ್ರವರಿ 2022 ರಿಂದ 12 ಮಾರ್ಚ್ವರೆಗೆ ಬೆಳಗಾವಿಯ ಮರಾಠಾ ಲಘು ಪದಾತಿದಳ- ‘ಫಾರಿನ್ ಟ್ರೈನಿಂಗ್ ನೋಡ್’ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಧರ್ಮ ಗಾರ್ಡಿಯನ್ ಸಮರಾಭ್ಯಾಸವನ್ನು ಜಪಾನ್ ಹಾಗೂ ಭಾರತವು 2018ರಿಂದ ಜಂಟಿಯಾಗಿ ನಡೆಸುತ್ತಿದೆ. ಭಯೋತ್ಪಾದನಾ ನಿಗ್ರಹ, ಕಾಡು ಮತ್ತು ನಗರ ಬ್ಯಾಪ್ತಿಯಲ್ಲಿ ಭದ್ರತಾ ಕಾರ್ಯಾಚರಣೆ ಸೇರಿದಂತೆ ಹಲವು ತರಬೇತಿಗಳನ್ನು ಈ ಸಮರಾಭ್ಯಾಸದಲ್ಲಿ ಜಂಟಿಯಾಗಿ ಕೈಗೊಳ್ಳಲಾಗುತ್ತದೆ. ಇದು ಭಾರತದ ಪಾಲಿಗೆ ಭದ್ರತೆಯ ವಿಚಾರದಲ್ಲಿ ಮಹತ್ವದ್ದಾಗಿದೆ. ಜಂಟಿ ಮಿಲಿಟರಿ ಸಮರಾಭ್ಯಾಸದಿಂದ ಭಾರತೀಯ ಸೇನೆ ಮತ್ತು ಜಪಾನ್ ಸೇನೆಯ ನಡುವಿನ ರಕ್ಷಣಾ ಸಹಕಾರದ ಮಟ್ಟ ಹೆಚ್ಚಲಿದೆ. ಜತೆಗೆ ಇದು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಉತ್ತೇಜಿಸಲಿದೆ.
ಭಾರತದ ಜಪಾನ್ ರಾಯಭಾರ ಕಛೇರಿಯ ಲೆಫ್ಟಿನೆಂಟ್ ಕರ್ನಲ್ ಯುಜೊ ಮಸೂದಾ ಸೇರಿದಂತೆ ವಿವಿಧ ಶ್ರೇಣಿಯ ಐವರು ಅಧಿಕಾರಿಗಳನ್ನೊಳಗೊಂಡ ಜಪಾನ್ನ ನಿಯೋಗವು ನವೆಂಬರ್ 30ರಂದು ಬೆಳಗಾವಿಗೆ ಆಗಮಿಸಿತ್ತು. ಎರಡೂ ದೇಶಗಳ ನಿಯೋಗವು ಜಂಟಿ ಸಮರಾಭ್ಯಾಸವನ್ನು ಸುಗಮವಾಗಿ ನಡೆಸುವ ವಿಧಾನಗಳನ್ನು ಚರ್ಚಿಸಿವೆ. ಜಪಾನಿನ ನಿಯೋಗವು ಎಂಎಲ್ಐಆರ್ಸಿನಲ್ಲಿ ಸಮರಾಭ್ಯಾಸಕ್ಕೆ ಅಗತ್ಯವಾದ ಸಿದ್ಧತೆಯ ಕುರಿತು ಪರಿಶೀಲನೆ ನಡೆಸಿತು.
ಎರಡೂ ದೇಶಗಳ ನಿಯೋಗವು ಮುಂಬರುವ ಸಮರಾಭ್ಯಾಸದ ಕಾರ್ಯಸೂಚಿ ಅಂಶಗಳನ್ನು ಅಂತಿಮಗೊಳಿಸಿವೆ. ಜಪಾನಿನ ನಿಯೋಗದ ಭೇಟಿಯ ಕಾರ್ಯ ಅಂತಿಮವಾಗಿದ್ದು, ನಾಳೆ (ಡಿ 04)ನಿರ್ಗಮಿಸಲಿದೆ. 27 ಫೆಬ್ರವರಿ 2022 ರಿಂದ 12 ಮಾರ್ಚ್ವರೆಗೆ ಜಂಟಿ ಸಮರಾಭ್ಯಾಸ ನಡೆಯಲಿದೆ.
ಇದನ್ನೂ ಓದಿ:
ನೀತಿ ಸಂಹಿತೆ ಉಲ್ಲಂಘನೆ: ಕಾಂಗ್ರೆಸ್ ಶಾಸಕನ ವಿರುದ್ಧ ಎಫ್ಐಆರ್ ದಾಖಲು
Published On - 11:09 pm, Fri, 3 December 21