ದೆಹಲಿ ಜುಲೈ 13: ವಿಧಾನಸಭೆ ಉಪಚುನಾವಣೆಯಲ್ಲಿ ಇಂಡಿಯಾ ಬ್ಲಾಕ್ (INDIA Bloc) ಪಕ್ಷಗಳು ಹೆಚ್ಚಿನ ಸೀಟುಗಳಲ್ಲಿ ಗೆಲುವು ಸಾಧಿಸುತ್ತಿದ್ದಂತೆ, ಕಾಂಗ್ರೆಸ್ ನಾಯಕ ಪವನ್ ಖೇರಾ (Pawan Khera) ಅವರು 2014 ರ ನಂತರ ಕಾಂಗ್ರೆಸ್ ಪಕ್ಷವು ಅನುಭವಿಸಿದಂತೆಯೇ ಬಿಜೆಪಿ (BJP) ಚುನಾವಣಾ ಅವನತಿಯ ಹಂತವನ್ನು ಪ್ರವೇಶಿಸುತ್ತಿದೆ ಎಂದು ಹೇಳಿದ್ದಾರೆ. “ಇದು ಲೋಕಸಭೆ ಚುನಾವಣೆಯಿಂದ ಪ್ರಾರಂಭವಾದ ಟ್ರೆಂಡ್ ಮತ್ತು ಮುಂದೆ ಸಾಗುತ್ತಿದೆ. ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ಸೋಲುತ್ತಲೇ ಇರುತ್ತದೆ” ಎಂದು ಖೇರಾ ಎಎನ್‌ಐಗೆ ತಿಳಿಸಿದ್ದಾರೆ.
2014ರಲ್ಲಿ ನಮಗೆ ಈ ಟ್ರೆಂಡ್ ಆರಂಭವಾದ ನಂತರ ನಾವು ಹಲವು ಚುನಾವಣೆಗಳಲ್ಲಿ ಸೋತಿದ್ದೇವೆ ಮತ್ತು ಈಗ ಬಿಜೆಪಿಯೂ ಅದೇ ಹಂತವನ್ನು ಎದುರಿಸಲಿದೆ ಎಂದು ಅವರು ಹೇಳಿದರು. ಈ ವಾರದ ಆರಂಭದಲ್ಲಿ ನಡೆದ 13 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಶನಿವಾರ ನಡೆದ ಮತಗಳ ಎಣಿಕೆಯಲ್ಲಿ ಇಂಡಿಯಾ ಬ್ಲಾಕ್ ಪಕ್ಷಗಳು ಆರು ವಿಧಾನಸಭಾ ಸ್ಥಾನಗಳನ್ನು ಗೆದ್ದು ನಾಲ್ಕರಲ್ಲಿ ಮುನ್ನಡೆ ಸಾಧಿಸಿವೆ. ಅದೇ ವೇಳೆ ಬಿಜೆಪಿ ಒಂದು ಸ್ಥಾನವನ್ನು ಗೆದ್ದು ಇನ್ನೊಂದರಲ್ಲಿ ಮುಂದಿದೆ ಎಂದು ಚುನಾವಣಾ ಆಯೋಗದ ವೆಬ್‌ಸೈಟ್ ಹೇಳಿದೆ.
ಹಿಮಾಚಲ ಪ್ರದೇಶದ ಮೂರು ಸ್ಥಾನಗಳಲ್ಲಿ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಎರಡು ಕ್ಷೇತ್ರ ಗೆದ್ದಿದ್ದು, ಬಿಜೆಪಿ ಒಂದು ಸ್ಥಾನವನ್ನು ಗೆದ್ದಿದೆ. ಫೆಬ್ರವರಿ 27 ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಮತ ಚಲಾಯಿಸಿದ್ದ ಮೂವರು ಸ್ವತಂತ್ರ ಶಾಸಕರಾದ ಹೋಶ್ಯಾರ್ ಸಿಂಗ್ (ಡೆಹ್ರಾ), ಆಶಿಶ್ ಶರ್ಮಾ (ಹಮೀರ್‌ಪುರ್) ಮತ್ತು ಕೆಎಲ್ ಠಾಕೂರ್ (ನಲಾಗಢ) ರಾಜೀನಾಮೆ ನೀಡಿದ ನಂತರ ಈ ಸ್ಥಾನಗಳಿಗೆ ಉಪಚುನಾವಣೆ ಅನಿವಾರ್ಯವಾಗಿತ್ತು.
ಉಪಚುನಾವಣೆಯಲ್ಲಿ ಮತ ಚಲಾಯಿಸಿದ ಉತ್ತರಾಖಂಡದ ಬದರಿನಾಥ್ ಮತ್ತು ಮಂಗಳೂರ್ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಮೂರು ವಿಧಾನಸಭಾ ಸ್ಥಾನಗಳನ್ನು ಗೆದ್ದುಕೊಂಡಿದೆ ಮತ್ತು 14 ಸುತ್ತಿನ ಮತ ಎಣಿಕೆಯ ನಂತರ ನಿರ್ಣಾಯಕ ಮುನ್ನಡೆ ಸಾಧಿಸುವ ಮೂಲಕ ನಾಲ್ಕನೇ ಸ್ಥಾನವನ್ನು ಗೆಲ್ಲುವ ಹಾದಿಯಲ್ಲಿದೆ.
ಆಮ್ ಆದ್ಮಿ ಪಕ್ಷ (ಎಎಪಿ) ಪಂಜಾಬ್‌ನ ಜಲಂಧರ್ ಪಶ್ಚಿಮ ಕ್ಷೇತ್ರದಲ್ಲಿ ಸಮೀಪದ ಪ್ರತಿಸ್ಪರ್ಧಿ ಮತ್ತು ಬಿಜೆಪಿ ಅಭ್ಯರ್ಥಿ ಶೀತಲ್ ಅಂಗುರಾಲ್ ಅವರನ್ನು 37,325 ಮತಗಳ ಅಂತರದಿಂದ ಸೋಲಿಸಿತು. ಅಂಗುರಲ್ ಎಎಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾರ್ಚ್‌ನಲ್ಲಿ ಬಿಜೆಪಿಗೆ ಸೇರ್ಪಡೆಯಾದ ನಂತರ ಈ ಸ್ಥಾನ ತೆರವಾಗಿತ್ತು.
ಇದನ್ನೂ ಓದಿ: 7 ರಾಜ್ಯಗಳಲ್ಲಿ ಉಪಚುನಾವಣೆ: 6 ಕ್ಷೇತ್ರದಲ್ಲಿ ಗೆಲುವು, 4 ರಲ್ಲಿ ಮುನ್ನಡೆ ಸಾಧಿಸಿದ ಇಂಡಿಯಾ ಬಣ
ಬಿಹಾರದ ರುಪೌಲಿ ವಿಧಾನಸಭಾ ಕ್ಷೇತ್ರದಲ್ಲಿ, ಅಂತಿಮ ಸುತ್ತಿನ ಮತ ಎಣಿಕೆಯಲ್ಲಿ ಸ್ವತಂತ್ರ ಅಭ್ಯರ್ಥಿ ಶಂಕರ್ ಸಿಂಗ್ 8,000 ಮತಗಳಿಂದ ಮುನ್ನಡೆ ಸಾಧಿಸಿದ್ದರೆ, ಜೆಡಿಯುನಿಂದ ಆರ್‌ಜೆಡಿಗೆ ಪಕ್ಷಾಂತರಗೊಂಡ ಬಿಮಾ ಭಾರತಿ ಅವರು ಉಪಚುನಾವಣೆಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಬಿಮಾ ಭಾರತಿ ಅವರು ಆರ್‌ಜೆಡಿ ಟಿಕೆಟ್‌ನಲ್ಲಿ ಪೂರ್ಣೆಯಾದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಪಕ್ಷೇತರ ಅಭ್ಯರ್ಥಿ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಅವರು ಸಮೀಪದ ಪ್ರತಿಸ್ಪರ್ಧಿ ಮತ್ತು ಜೆಡಿಯು ಅವರನ್ನು ಸೋಲಿಸಿ ಪೂರ್ಣೆಯಾ ಲೋಕಸಭೆಯಿಂದ ಗೆದ್ದಿದ್ದಾರೆ. ಅಭ್ಯರ್ಥಿ ಸಂತೋಷ್ ಕುಮಾರ್ 23,847 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಪಪ್ಪು ಯಾದವ್ 5,67,556 ಮತಗಳನ್ನು ಪಡೆದರೆ, ಬಿಮಾ ಭಾರತಿ ಕೇವಲ 27,120 ಮತಗಳನ್ನು ಪಡೆದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ