World Environment Day | ಭಾರತದಲ್ಲಿ 2025 ರ ಹೊತ್ತಿಗೆ ಪೆಟ್ರೋಲ್​ನಲ್ಲಿ ಶೇಕಡಾ 20 ರಷ್ಟು ಎಥೆನಾಲ್ ಬೆರೆಸುವ ಗುರಿ ತಲುಪಲಿದ್ದೇವೆ: ಪ್ರಧಾನಿ ಮೋದಿ

World Environment Day | ಭಾರತದಲ್ಲಿ 2025 ರ ಹೊತ್ತಿಗೆ ಪೆಟ್ರೋಲ್​ನಲ್ಲಿ ಶೇಕಡಾ 20 ರಷ್ಟು ಎಥೆನಾಲ್ ಬೆರೆಸುವ ಗುರಿ ತಲುಪಲಿದ್ದೇವೆ: ಪ್ರಧಾನಿ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ

ಎಥೆನಾಲನ್ನು ಇದುವರೆಗೆ ಕೇವಲ ಕಬ್ಬು ಬೆಳೆಯುವ ರಾಜ್ಯಗಳಲ್ಲಿ ಮಾತ್ರ ಉತ್ಪಾದಿಸಲಾಗುತ್ತಿತ್ತು ಆದರೆ ಈಗ ಆಹಾರ ಧಾನ್ಯ ತ್ಯಾಜ್ಯ ಘಟಕಗಳು ಮತ್ತು ಕೃಷಿ ತ್ಯಾಜ್ಯ ಎಥೆನಾಲ್ ಘಟಕಗಳನ್ನು ಎಲ್ಲೆಡೆ ಸ್ಥಾಪಿಸಲಾಗುತ್ತಿರುವುದರಿಂದ ದೇಶದ ಎಲ್ಲಾ ಭಾಗಗಳಲ್ಲಿ ಅದನ್ನು ಉತ್ಪಾದಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದರು.

Arun Belly

|

Jun 06, 2021 | 1:53 AM

ಪುಣೆ: ದೇಶದಾದ್ಯಂತ ಎಥೆನಾಲ್​ನ ಉತ್ಪಾದನೆ ಮತ್ತು ಮತ್ತು ಹಂಚಿಕೆಗಾಗಿ ಇ-100 ಪೈಲಟ್​ ಪ್ರಾಜೆಕ್ಟ್​ ಅನ್ನು ಶನಿವಾರದಂದು ಪುಣೆಯಲ್ಲಿ ಉದ್ಘಾಟಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2025 ಹೊತ್ತಿಗೆ ಪಟ್ರೋಲ್​ನೊಂದಿಗೆ ಶೇಕಡಾ 20 ಎಥೆನಾಲ್ ಬೆರೆಸುವ ತನ್ನ ಗುರಿ ಮುಟ್ಟಲು ಭಾರತ ಬದ್ಧವಾಗಿದೆ ಎಂದು ಹೇಳಿದರು. ‘ಆರ್ಥಿಕತೆ ಮತ್ತು ಪರಿಸರ’ ಜೊತೆಜೊತೆಯಾಗಿ ಸಾಗುತ್ತವೆ ಎಂದು ಈ ಸಂದರ್ಭದಲ್ಲಿ ಹೇಳಿದ ಪ್ರಧಾನಿಗಳು, ಸ್ವಚ್ಛ ಇಂಧನದೆಡೆ ಭಾರತ ಧಾಪುಗಾಲಿಡುತ್ತಿದ್ದು ಇದು ವಿಶೇಷವಾಗಿ ಕೃಷಿವಲಯಲಕ್ಕೆ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದರು. ‘ವಿಶ್ವ ಪರಿಸರ ದಿನವಾಗಿರುವ ಇಂದು, ದೇಶದೆಲ್ಲೆಡೆ ಎಥೆನಾಲ ಉತ್ಪಾದನೆಯನ್ನು ಆರಂಭಿಸಲು ಸಮಗ್ರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿ, ಪುಣೆಯಲ್ಲಿ ಮೂರು ಇ-100 ಪೆಟ್ರೋಲ್ ಪಂಪ್​ಗಳನ್ನು ಲಾಂಚ್​ ಮಾಡುವ ಮೂಲಕ ಭಾರತ ಎಥೆನಾಲ್ ವಲಯದಲ್ಲಿ ಒಂದು ದೊಡ್ಡ ಹೆಜ್ಜೆಯಿಟ್ಟಿದೆ. ಏಳು ವರ್ಷಗಳ ಹಿಂದೆ ಎಥೆನಾಲ್ ಕುರಿತ ಚರ್ಚೆಯೇ ಇರಲಿಲ್ಲ, ಅದರೆ ಈಗ ಅದು ನಮ್ಮ 21 ನೇ ಶತಮಾನದ ಗುರಿಗಳಲ್ಲಿ ಒಂದಾಗಿದೆ. 2025 ರ ಹೊತ್ತಿಗೆ ಶೇಕಡಾ 20 ರಷ್ಟು ಬೆರಕೆಯ ಗುರಿಯನ್ನು ನಾವು ಹೊಂದಿದ್ದೇವೆ. ಇದಕ್ಕೆ ಮೊದಲು 2030 ರ ಹೊತ್ತಿಗೆ ಈ ಗುರಿಯನ್ನು ತಲುಪುವ ಉದ್ದೇಶ ನಮ್ಮದಾಗಿತ್ತು. ಆದರೆ ಕಳೆದ ಏಳು ವರ್ಷಗಳಲ್ಲಿ ಭಾರತ ಸಾಧಿಸಿರುವ ಅಗಾಧ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ನಾವು ಈ ಅವಧಿಯಲ್ಲಿ 5 ವರ್ಷಗಳನ್ನು ಕಡಿತಗೊಳಿಸಿದ್ದೇವೆ,’ ಎಂದು ಪ್ರಧಾನಿಗಳು ಹೇಳಿದರು.

ವಿಶ್ವ ಪರಿಸರ ದಿನ ಅಂಗವಾಗಿ ಆಯೋಜಿಲಾಗಿದ್ದ ಕಾರ್ಕ್ರಮವೊಂದರಲ್ಲಿ ಪ್ರಧಾನಿ ಮೋದಿ ಈ ಯೋಜನೆಗಳನ್ನು ಉದ್ಘಾಟಿಸಿದರು. ಪ್ರಧಾನಿಗಳೊಂದಿಗೆ ಅವರ ಸಂಪುಟ ಸಹೋದ್ಯೋಗಿಗಳಾಗಿರುವ ನಿತಿನ್ ಗಡ್ಕರಿ, ಪ್ರಕಾಶ್ ಜಾವಡೇಕರ್, ಪಿಯುಷ್ ಗೋಯಲ್, ಧರ್ಮೇಂದ್ರ ಫ್ರಧಾನ್ ಮತ್ತು ನರೇಂದ್ರ ಸಿಂಗ್ ತೋಮರ್ ಮೊದಲಾದವರಿದ್ದರು.

2014ರಲ್ಲಿ ಎಥೆನಾಲ್ ಬೆರಕೆ ಕೇವಲ ಶೇಕಡಾ 1.5 ಮಾತ್ರ ಇತ್ತು ಆದರೀಗ ಅದು ಶೇಕಡಾ 8.5ಕ್ಕೆ ವೃದ್ಧಿಯಾಗಿದೆ ಎಂದು ನರೇಂದ್ರ ಮೋದಿ ಹೇಳಿದರು.

‘ಪ್ರಸಕ್ತವಾಗಿ 320 ಕೋಟಿ ಲೀಟರ್​ಗಳಿಗಿಂತ ಜಾಸ್ತಿ ಎಥೆನಾಲನ್ನು ಖರೀದಿ ಮಾಡಲಾಗುತ್ತಿದೆ; ಅದರೆ, 2013-14 ರಲ್ಲಿ ಅದರ ಖರೀದಿ ಕೇವಲ 38 ಕೋಟಿ ಲೀಟರ್​ಗಳಷ್ಟು ಮಾತ್ರ ಇತ್ತು. ಅಂದರೆ ಎಥೆನಾಲ್ ಖರೀದಿ ಈಗ ಎಂಟು ಪಟ್ಟುಗಳಷ್ಟು ಜಾಸ್ತಿಯಾಗಿದೆ. ಹಣದ ರೂಪದಲ್ಲಿ ಹೇಳುವುದಾದರೆ ಅದು ರೂ. 21,000 ಕೋಟಿಯಾಗುತ್ತದೆ ಮತ್ತ್ತು ಇದರಲ್ಲಿ ಅಧಿಕಾಂಶ ರೈತರಿಗೆ ಹೋಗಿದೆ. 20 ಪರ್ಸೆಂಟ್ ಎಥೆನಾಲ್ ಬೆರಕೆಯ ಗುರಿಯನ್ನು ನಾವು ಸಾಧಿಸಿದ್ದೇಯಾದಲ್ಲಿ ರೈತರ ಪಾಲಿಗೆ ಎಷ್ಟು ಹಣ ಹೋಗಬಹುದೆಂದು ಒಮ್ಮೆ ಯೋಚಿಸಿ ನೋಡಿ,’ ಎಂದು ಪ್ರಧಾನಿಗಳು ಹೇಳಿದರು.

ಪೆಟ್ರೋಲ್​ನಲ್ಲಿ ಎಥೆನಾಲ್ ಬೆರಕೆಯು ಕೃಷಿ ತ್ಯಾಜ್ಯದ ಸಮಸ್ಯೆಯನ್ನು ಬಹಳಷ್ಟು ಮಟ್ಟಿಗೆ ಪರಿಹರಿಸಲಿದೆ ಮತ್ತು ಸಕ್ಕರೆ ಉತ್ಪಾದನೆ ಹೆಚ್ಚಲಿರುವುದರಿಂದ ಅದರ ಬೆಲೆಯು ಸ್ಥಿರಗೊಳ್ಳಲಿದೆಯೆಂದು ಅವರು ಹೇಳಿದರು.

ಎಥೆನಾಲನ್ನು ಇದುವರೆಗೆ ಕೇವಲ ಕಬ್ಬು ಬೆಳೆಯುವ ರಾಜ್ಯಗಳಲ್ಲಿ ಮಾತ್ರ ಉತ್ಪಾದಿಸಲಾಗುತ್ತಿತ್ತು ಆದರೆ ಈಗ ಆಹಾರ ಧಾನ್ಯ ತ್ಯಾಜ್ಯ ಘಟಕಗಳು ಮತ್ತು ಕೃಷಿ ತ್ಯಾಜ್ಯ ಎಥೆನಾಲ್ ಘಟಕಗಳನ್ನು ಎಲ್ಲೆಡೆ ಸ್ಥಾಪಿಸಲಾಗುತ್ತಿರುವುದರಿಂದ ದೇಶದ ಎಲ್ಲಾ ಭಾಗಗಳಲ್ಲಿ ಅದನ್ನು ಉತ್ಪಾದಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದರು.

ಹವಾಮಾನಕ್ಕೆ ನ್ಯಾಯ ಒದಗಿಸುವ ಹೋರಾಟದಲ್ಲಿ ಭಾರತ ಹೇಗೆ ವಿಶ್ವದ ಅಗ್ರಗಣ್ಯ ರಾಷ್ಟ್ರಗಳಲ್ಲಿ ಒಂದೆನಿಸಿಕೊಂಡಿದೆ ಎನ್ನುವುದನ್ನು ಈ ಸಂದರ್ಭದಲ್ಲಿ ಪ್ರಧಾನಿಗಳು ಹೇಳಿದರು.

ಪರಿಸರದ ಸುಸ್ಥಿರ ಅಭಿವೃದ್ಧಿಗಾಗಿ ಕೇಂದ್ರ ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಮಾತಾಡಿದ ಪ್ರಧಾನಿಗಳು,‘ ಹವಾಮಾನ ಬದಲಾವಣೆ ದೊಡ್ಡ ಸಮಸ್ಯೆಗಳನ್ನು ತಂದೊಡ್ಡುತ್ತದೆ ಮತ್ತು ನಾವು ಈ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದೇವೆ. ಕಳೆದ ಏಳು ವರ್ಷಗಳ ಅವದಿಯಲ್ಲಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯದಲ್ಲಿ ಶೇಕಡಾ 250 ರಷ್ಟು ಹೆಚ್ಚಳವಾಗಿದೆ. ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸ್ಥಾಪಿಸುವ ವಿಷಯಕ್ಕೆ ಬಂದರೆ, ಟಾಪ್ 5 ರಾಷ್ಟ್ರಗಳ ಪೈಕಿ ಭಾರತವೂ ಒಂದಾಗಿದೆ. ನಮ್ಮ ದೇಶದಲ್ಲಿ ಅದು 14 ಪಟ್ಟುಗಳಷ್ಟು ಹೆಚ್ಚಾಗಿದೆ. ಅತಿದೊಡ್ಡ ಸೋಲಾರ ಎನರ್ಜಿ ಮತ್ತು ಗಾಳಿ ಎನರ್ಜಿಯ ಹೈಬ್ರೀಡ್​ ಘಟಕವನ್ನು ಗುಜರಾತ್​ನ ಕಛ್​ನಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಹಳೆಯ ಇದ್ದಿಲು ಪ್ಲಾಂಟ್​ಗಳನ್ನು ಮುಚ್ಚಲಾಗುತ್ತಿದೆ ಮತ್ತು ಸಿಂಗಲ್-ಬಳಕೆ ಪ್ಲಾಸಿಕ್ ಮಾಲಿನ್ಯದ ಬಗ್ಗೆ ಈಗ ಜಾಗೃತಿ ಹೆಚ್ಚಾಗಿದೆ. ಅರಣ್ಯ ಪ್ರದೇಶ ಸುಮಾರು 15,000 ಚದರ ಕಿಲೋಮೀಟರ್​ಗಳಷ್ಟು ಬೆಳೆದಿದೆ ಮತ್ತು ದೇಶದಲ್ಲಿ ಹುಲಿಗಳ ಸಂಖ್ಯೆಯೂ ವೃದ್ಧಿಯಾಗಿದೆ,’ ಎಂದು ಪ್ರಧಾನಿ ಹೇಳಿದರು.

ಇದನ್ನೂ ಓದಿ: World Environment Day 2021: ಟೆರೇಸ್​ ಮೇಲೆ ಪುಟ್ಟ ಕಾಡು ನಿರ್ಮಾಣ ಮಾಡಿದ ಮಧ್ಯಪ್ರದೇಶದ ವ್ಯಕ್ತಿ..2500ಕ್ಕೂ ಹೆಚ್ಚು ಮರಗಳು

Follow us on

Related Stories

Most Read Stories

Click on your DTH Provider to Add TV9 Kannada