ದೇಶದಲ್ಲಿ ಹೊಸ ವೈಫೈ ಕ್ರಾಂತಿಗೆ ನಾಂದಿ ಹಾಡಿದ ಕೇಂದ್ರ ಸರ್ಕಾರ; ಏನಿದು ಹೊಸ ಯೋಜನೆ?
ಸಾರ್ವಜನಿಕರಿಗೆ ವೈಫೈ ಸೇವೆ ಸುಲಭವಾಗಿ ಸಿಗುವಂತೆ ನೋಡಿಕೊಳ್ಳುವುದು ಈ ಯೊಜನೆಯ ಮೂಲ ಉದ್ದೇಶ. ಇದರ ಜೊತೆಗೆ ವ್ಯಾಪಾರ ಸ್ನೇಹಿ ಪರಿಸರ ನಿರ್ಮಾಣ ಮಾಡುವುದು ಕೂಡ ಸರ್ಕಾರದ ಗುರಿ ಆಗಿದೆ.

ನವದೆಹಲಿ: ಸಾರ್ವಜನಿಕರಿಗೆ ಉಚಿತ ವೈಫೈ ನೀಡಲು ಕೇಂದ್ರ ಸರ್ಕಾರ ಈ ಮೊದಲಿನಿಂದಲೂ ಒತ್ತು ನೀಡುತ್ತಾ ಬಂದಿದೆ. ಇದರ ಭಾಗವಾಗಿ ಈಗಾಗಲೇ ಸಾಕಷ್ಟು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿ ಸಾರ್ವಜನಿಕ ಪ್ರದೇಶಗಳಲ್ಲಿ ಉಚಿತ ವೈಫೈ ಸೇವೆ ಒದಗಿಸುತ್ತಿದೆ. ಈಗ ಕೇಂದ್ರ ಸರ್ಕಾರ ದೇಶದಲ್ಲಿ ಡೇಟಾ ಕೇಂದ್ರಗಳನ್ನು ತೆರೆಯಲು ಮುಂದಾಗಿದೆ. ಈ ಮೂಲಕ ದೇಶದಲ್ಲಿ ಹೊಸ ವೈಫೈ ಕ್ರಾಂತಿಗೆ ನಾಂದಿ ಹಾಡಿದೆ.
ಪ್ರಧಾನ ಮಂತ್ರಿ ವೈಫೈ ಆ್ಯಕ್ಸೆಸ್ ನೆಟ್ವರ್ಕ್ (PM WANI) ಸ್ಥಾಪನೆಗೆ ದೂರ ಸಂಪರ್ಕ ಇಲಾಖೆ ಮನವಿ ಇಟ್ಟಿತ್ತು. ಇದಕ್ಕೆ ಕೇಂದ್ರ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಈ ಯೋಜನೆ ಅಡಿಯಲ್ಲಿ ಡೇಟಾ ಕೇಂದ್ರಗಳನ್ನು ಸರ್ಕಾರ ಆರಂಭಿಸಲಿದೆ. ಸಾರ್ವಜನಿಕರಿಗೆ ವೈಫೈ ಸೌಲಭ್ಯವು ಪಬ್ಲಿಕ್ ಡೇಟಾ ಆಫೀಸ್ (PDO), ಪಬ್ಲಿಕ್ ಡೇಟಾ ಆಫೀಸ್ ಅಗ್ರಿಗೇಟರ್ಸ್ ಮತ್ತು ಆ್ಯಪ್ ಪ್ರೊವೈಡರ್ಗಳ ಮೂಲಕ ಸಿಗಲಿದೆ. ಇದಕ್ಕೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದರು.
ಸಾರ್ವಜನಿಕರಿಗೆ ವೈಫೈ ಸೇವೆ ಸುಲಭವಾಗಿ ಸಿಗುವಂತೆ ನೋಡಿಕೊಳ್ಳುವುದು ಈ ಯೊಜನೆಯ ಮೂಲ ಉದ್ದೇಶ. ಇದರ ಜೊತೆಗೆ ವ್ಯಾಪಾರ ಸ್ನೇಹಿ ಪರಿಸರ ನಿರ್ಮಾಣ ಮಾಡುವುದು ಕೂಡ ಸರ್ಕಾರದ ಗುರಿ ಆಗಿದೆ. ಕೊರೊನಾ ವೈರಸ್ ಇರುವುದರಿಂದ ಅನೇಕ ಕಡೆಗಳಲ್ಲಿ ಮನೆಯಲ್ಲೇ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ಇದರಿಂದ ವೇಗದ ಇಂಟರ್ನೆಟ್ ಕೊಡುವ ಅನಿವಾರ್ಯತೆ ಎಲ್ಲ ಬ್ರಾಡ್ಬ್ರ್ಯಾಂಡ್ ಸಂಸ್ಥೆಗಳಿಗೆ ಎದುರಾಗಿದೆ. ಇದರ ಜೊತೆಗೆ ಮತ್ತಷ್ಟು ಡೇಟಾ ಕೇಂದ್ರಗಳನ್ನು ಸ್ಥಾಪಿಸಿದರೆ ಜನಸಾಮಾನ್ಯರಿಗೆ ಸಹಕಾರಿಯಾಗಲಿದೆ ಎಂಬುದು ಕೇಂದ್ರದ ಚಿಂತನೆ.
Published On - 7:56 pm, Wed, 9 December 20




