APMC ಕಾಯಿದೆಗೆ 8 ತಿದ್ದುಪಡಿ! ಕೇಂದ್ರ ಸರ್ಕಾರದ ಪ್ರಸ್ತಾವನೆಯಲ್ಲಿ ಏನಿದೆ? ಇಲ್ಲಿದೆ ವಿವರ..
ಕೇಂದ್ರ ಸರ್ಕಾರ ಎಪಿಎಂಸಿ ಆ್ಯಕ್ಟ್ಗೆ 8 ತಿದ್ದುಪಡಿ ಮಾಡಲು ಸಿದ್ಧವಿರುವುದಾಗಿ ಪಂಜಾಬ್ ರೈತರಿಗೆ ಪ್ರಸ್ತಾಪ ನೀಡಿತ್ತು. ಆದರೆ ರೈತ ಒಕ್ಕೂಟಗಳು ಸರ್ಕಾರದ ಪ್ರಸ್ತಾಪವನ್ನು ಸಾರಾಸಗಟವಾಗಿ ತಿರಸ್ಕರಿಸಿವೆ. ಹಾಗಾದರೆ ಸರ್ಕಾರ ನೀಡಿದ್ದ ಪ್ರಸ್ತಾವನೆಯಲ್ಲಿ ಏನಿತ್ತು? ಯಾವ 8 ತಿದ್ದುಪಡಿ ಮಾಡಲು ಸರ್ಕಾರ ಒಪ್ಪಿತ್ತು ಎಂಬ ಸಂಪೂರ್ಣ ವಿವರವನ್ನು ಟಿವಿ9 ಡಿಜಿಟಲ್ ನಿಮಗಾಗಿ ವಿವರಿಸಿದೆ.
ದೆಹಲಿ: ಕೇಂದ್ರ ಸರ್ಕಾರ ಎಪಿಎಂಸಿ ಆ್ಯಕ್ಟ್ ವಿರೋಧಿಸಿ ಪಂಜಾಬ್ ರೈತರು ಎರಡು ವಾರಗಳಿಂದ ದೆಹಲಿ ಚಲೋ ಹಮ್ಮಿಕೊಂಡು ತೀವ್ರ ಪ್ರತಿಭಟನೆಯಲ್ಲಿ ತೊಡಗಿದ್ದರು. ರೈತರ ಈ ಪ್ರತಿಭಟನೆ ಬಗ್ಗೆ ಕೊನೆಗೂ ಮೃದು ಧೋರಣೆ ತಾಳಿದ ಕೇಂದ್ರ ಸರ್ಕಾರವು ಮಹತ್ತರ ನಿರ್ಧಾರ ತೆಗೆದುಕೊಂಡು ಕಾಯಿದೆಗೆ 8 ತಿದ್ದುಪಡಿ ಮಾಡಲು ಸಿದ್ಧವಿರುವುದಾಗಿ ಪಂಜಾಬ್ ರೈತರ ಮುಂದೆ ಪ್ರಸ್ತಾಪವಿಟ್ಟಿತು. ಆದರೆ ರೈತ ಒಕ್ಕೂಟಗಳು ಸರ್ಕಾರದ ಈ ತಿದ್ದುಪಡಿ ಪ್ರಸ್ತಾವನೆಯನ್ನು ಸಾರಾಸಗಟವಾಗಿ ತಿರಸ್ಕರಿಸಿವೆ. ಹಾಗಾದರೆ ಸರ್ಕಾರ ನೀಡಿದ್ದ ಪ್ರಸ್ತಾವನೆಯಲ್ಲಿ ಏನಿತ್ತು? ಯಾವ 8 ತಿದ್ದುಪಡಿ ಮಾಡಲು ಸರ್ಕಾರ ಒಪ್ಪಿತ್ತು? ಇಲ್ಲಿದೆ ಸಂಪೂರ್ಣ ವಿವರ.
ಎಪಿಎಂಸಿಗಳು ಪಾವತಿಸುವಷ್ಟೇ ತೆರಿಗೆಯನ್ನು ಖಾಸಗಿ ವ್ಯಾಪಾರಿಗಳೂ ಪಾವತಿಸಬೇಕು ಎಂಬ ತಿದ್ದುಪಡಿಗೆ ಕೇಂದ್ರ ಒಪ್ಪಿತ್ತು. ಸಮ ಪ್ರಮಾಣದ ತೆರಿಗೆ ವಿಧಿಸುವಂತೆ ನಿಯಮ ರೂಪಿಸುವುದಾಗಿ ಪ್ರಸ್ತಾವನೆಯಲ್ಲಿ ತಿಳಿಸಿತ್ತು. ರೈತರ ಆಗ್ರಹವೂ ಈ ಬದಲಾವಣೆ ತರಬೇಕೆಂದೇ ಆಗಿತ್ತು.
ಈಗ ಜಾರಿಯಲ್ಲಿರುವ ಕೃಷಿ ಕಾನೂನಿನ ಪ್ರಕಾರ, ರೈತ ಮತ್ತು ವ್ಯಾಪಾರಿಗಳ ನಡುವೆ ಯಾವುದೇ ತಕರಾರು, ವಿವಾದ ಉಂಟಾದರೆ ಉಪ ವಿಭಾಗಾಧಿಕಾರಿಗಳ ( Sub Divisional Magistrate) ಮೂಲಕ ಪರಿಹಾರ ಕಂಡುಕೊಳ್ಳಲಷ್ಟೇ ಅವಕಾಶವಿತ್ತು. ಆದರೆ ರೈತರು ವ್ಯಾಪಾರದಲ್ಲಾದ ತಕರಾರು ಪರಿಹರಿಸಿಕೊಳ್ಳಲು ನ್ಯಾಯಾಲಯದಲ್ಲೂ ಅವಕಾಶ ನೀಡುವಂತೆ ಆಗ್ರಹಿಸಿದ್ದರು. ಇದನ್ನು ಒಪ್ಪಿದ ಕೇಂದ್ರ ಸರ್ಕಾರ ತಿದ್ದುಪಡಿಗೆ ಒಪ್ಪಿಗೆ ನೀಡಿತ್ತು.
ಖಾಸಗಿ ಮಾರುಕಟ್ಟೆಯಲ್ಲಿ ನೋಂದಣಿಯಾಗದೆ ವ್ಯಾಪಾರ ಮಾಡುವ ಕುರಿತು ಪಂಜಾಬ್ ರೈತರು ಭೀತಿ ವ್ಯಕ್ತಪಡಿಸಿದ್ದರು. ಕೇವಲ ಪಾನ್ ಕಾರ್ಡ್ ಆಧಾರದ ಮೇಲೆ ಬೆಳೆ ಖರೀದಿಸುವುದು ತಮ್ಮನ್ನು ಲೂಟಿ ಮಾಡುವ ಯತ್ನವೆಂದು ರೈತರು ಮಾಡಬೇಕೆಂದು ರೈತರು ವಿಶ್ಲೇಷಿಸಿದ್ದರು. ಈ ನಿಯಮವನ್ನು ಬದಲಾಯಿಸಲು ಒಪ್ಪಿದ್ದ ಸರ್ಕಾರ ಎಲ್ಲಾ ವ್ಯಾಪಾರಿಗಳಿಗೂ ನೋಂದಣಿ ಕಡ್ಡಾಯಗೊಳಿಸಲು ಒಪ್ಪಿತ್ತು. ಜೊತೆಗೆ, ಸರ್ಕಾರಿ ವೆಬ್ಸೈಟ್ನಲ್ಲಿ ವ್ಯಾಪಾರಿಯ ಮಾಹಿತಿ ಖಚಿತವಾದ ನಂತರವೇ ವ್ಯಾಪಾರಕ್ಕೆ ಅನುಮತಿ ನೀಡುವುದಾಗಿ ತಿಳಿಸಿತ್ತು.
ರೈತರ ಕೃಷಿ ಭೂಮಿ ಕಾಂಟ್ರಾಕ್ಟ್ ಫಾರ್ಮಿಂಗ್ನ ಹೆಸರಲ್ಲಿ ಅಡವಿಡಲು ಅವಕಾಶವಿರದಂತೆ ತಿದ್ದುಪಡಿಗೆ ಕೇಂದ್ರ ಒಪ್ಪಿಗೆ ನೀಡಿತ್ತು.ಈಗಾಗಲೇ ಕನಿಷ್ಠ ಬೆಂಬಲ ಬೆಲೆ ಪಡೆಯುತ್ತಿರುವ ಕೃಷಿಕರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಈ ಸೌಲಭ್ಯವನ್ನು ಮುಂದುವರೆಸುವುದಾಗಿಯೂ ರೈತರಿಗೆ ನೀಡಿದ ಪ್ರಸ್ತಾಪದಲ್ಲಿತ್ತು.
ಫುಡ್ ಕಾರ್ಪೊರೇಶನ್ ಆಫ್ ಇಂಡಿಯಾ (FCI) ರೈತರಿಂದ ಬೆಳೆಗಳನ್ನು ಖರೀದಿಸಿ, ದುರ್ಬಲ ಆರ್ಥಿಕ ವರ್ಗಗಳಿಗೆ ಕಡಿಮೆ ಬೆಲೆಗೆ ವಿತರಿಸುತ್ತದೆ. ಹಿಂದಿನಂತೆಯೇ, ಖರೀದಿ ಮತ್ತು ವಿತರಣೆಯ ಎಲ್ಲ ಹಣವನ್ನು ಕೇಂದ್ರ ಸರ್ಕಾರ ಭರಿಸಲು ಸರ್ಕಾರ ಒಪ್ಪಿಗೆ ಸೂಚಿಸಿತ್ತು.
ಬೆಳೆ ಕಟಾವಿನ ನಂತರ ಜಮೀನಿನಲ್ಲೇ ಕೃಷಿ ತ್ಯಾಜ್ಯ ಸುಡುವ ಕುರಿತು ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ಹಿಂಪಡೆಯಲು ಸಹ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ಜೊತೆಗೆ ಪ್ರತಿಭಟನೆಯಲ್ಲಿ ಭಾಗಿಯಾದರೈತರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ರದ್ದುಗೊಳಿಸುವುದಾಗಿಯೂ ಕೇಂದ್ರ ಪ್ರಸ್ತಾವನೆ ನೀಡಿತ್ತು.
ಆದರೆ, ಕೇಂದ್ರ ಸರ್ಕಾರದ ಈ ಎಲ್ಲ ಪ್ರಸ್ತಾಪವನ್ನೂ ಪಂಜಾಬ್ ರೈತರು ತಳ್ಳಿಹಾಕಿದ್ದಾರೆ.
ಎಪಿಎಂಸಿ ಕಾಯ್ದೆಗೆ 8 ತಿದ್ದುಪಡಿ ಮಾಡಲು ಸಿದ್ಧ ಎಂದ ಕೇಂದ್ರ ಸರ್ಕಾರ, ಪ್ರಸ್ತಾಪ ತಿರಸ್ಕರಿಸಿದ ರೈತ ನಾಯಕರು