ದೆಹಲಿ: ಕೊರೊನಾ ಮೂರನೇ ಅಲೆ ಏಳುವ ಹೊತ್ತಿಗೆ ಹೇಗಾದರೂ ಸರಿ ದೇಶದಲ್ಲಿ ಶೇ.70ರಷ್ಟಾದರೂ ಜನರಿಗೆ ಕೊವಿಡ್ 19 ಲಸಿಕೆ ನೀಡಿ ಮುಗಿಸಿರಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ವಿದೇಶಿ ಲಸಿಕೆಗಳನ್ನು ಭಾರತದಲ್ಲಿ ಬಳಸುವ ಸಂಬಂಧ ಪರೀಕ್ಷೆಗಳು ತ್ವರಿತರಗತಿಯಲ್ಲಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕೊವ್ಯಾಕ್ಸ್ ಎಂಬ ಜಾಗತಿಕ ಮಟ್ಟದ ಕೊರೊನಾ ಲಸಿಕೆ ಹಂಚಿಕೆ ಕಾರ್ಯಕ್ರಮದಡಿ ಮೊದಲ ಬಾರಿಗೆ ಭಾರತಕ್ಕೆ ವಿದೇಶಿ ನಿರ್ಮಿತ ಕೊವಿಡ್ 19 ಲಸಿಕೆಗಳು ತಲುಪಲಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಈ ಕಾರ್ಯಕ್ರಮದಡಿ ಭಾರತಕ್ಕೆ 30-40 ಲಕ್ಷದಷ್ಟು ಫೈಜರ್ ಹಾಗೂ ಮಾಡೆರ್ನಾ ಲಸಿಕೆಗಳು ಆಗಸ್ಟ್ನಲ್ಲಿ ತಲುಪಲಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಲಸಿಕೆ ಮತ್ತು ರೋಗನಿರೋಧಕಗಳ ಜಾಗತಿಕ ಒಕ್ಕೂಟ (GAVI)ದ ವಕ್ತಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಲಸಿಕೆ ಹಂಚಿಕೆ ಕೊವ್ಯಾಕ್ಸ್ ಕಾರ್ಯಕ್ರಮದಡಿ ಅಮೆರಿಕ ನೀಡಲಿರುವ ಲಸಿಕೆಯ ಡೋಸ್ಗಳು ಶೀಘ್ರದಲ್ಲೇ ಭಾರತಕ್ಕೆ ತಲುಪಲಿವೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಲಸಿಕೆಯ ಅತಿದೊಡ್ಡ ಉತ್ಪಾದಕ ದೇಶ ಭಾರತ ಏಪ್ರಿಲ್ವರೆಗೂ ನಮ್ಮಲ್ಲಿ ಉತ್ಪಾದನೆಯಾದ ಲಸಿಕೆಯನ್ನು ಕೊವ್ಯಾಕ್ಸ್ ಪ್ರೋಗ್ರಾಂನಡಿ ವಿವಿಧ ದೇಶಗಳಿಗೆ ನೀಡಿದೆ. ಆದರೆ ಏಪ್ರಿಲ್ನಲ್ಲಿ ನಮ್ಮ ದೇಶದಲ್ಲಿಯೇ ಲಸಿಕೆ ಕೊರತೆ ಉಂಟಾದಾಗ ಅನಿವಾರ್ಯವಾಗಿ ನಿಲ್ಲಿಸಿದೆ. ಈಗ ಭಾರತದಲ್ಲಿ ಕೊರೊನಾ ಲಸಿಕೆ ಅಭಿಯಾನ ಭರದಿಂದ ಸಾಗುತ್ತಿದ್ದು, ಮೂರನೇ ಅಲೆ ಶುರುವಾಗುವುದಕ್ಕೂ ಮೊದಲು ಲಸಿಕೆ ನೀಡಿ ಮುಗಿಯಬೇಕಿದೆ. ಸದ್ಯ ಭಾರತದಲ್ಲಿ ಕೊವಿಶೀಲ್ಡ್, ಕೊವ್ಯಾಕ್ಸಿನ್ ಮತ್ತು ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಗಳು ಬಳಕೆಯಾಗುತ್ತಿದೆ. ಅದರಲ್ಲೂ ದೇಶಾದ್ಯಂತ ಅತಿ ಹೆಚ್ಚು ಬಳಕೆಯಾಗುತ್ತಿರುವುದು ಸದ್ಯ ಕೊವಿಶೀಲ್ಡ್ ಎರಡು ಡೋಸ್ಗಳ ಲಸಿಕೆ.
ಇದನ್ನೂ ಓದಿ: K Annamalai: ಮೋದಿ ಸಂಪುಟ ವಿಸ್ತರಣೆ ಎಫೆಕ್ಟ್; ಅಣ್ಣಾಮಲೈಗೆ ಒಲಿದು ಬರುತ್ತದಾ ಆ ಅದೃಷ್ಟ!?
India May Receive Pfizer, Moderna COVID 19 Vaccine By August
Published On - 12:56 pm, Thu, 8 July 21