ಕೆಲ ಸಂಘಟನೆಗಳು ನಿಯಮ ಮೀರಿ ನಡೆದುಕೊಂಡಿವೆ: ಸಂಯುಕ್ತ ಕಿಸಾನ್ ಮೋರ್ಚಾ ಬೇಸರ
ಅನುಮತಿ ನಿರಾಕರಿಸಲಾದ ಪ್ರದೇಶಗಳಲ್ಲೂ ಟ್ರ್ಯಾಕ್ಟರ್ಗಳು ಸಂಚಾರ ನಡೆಸಿದ್ದವು. ಕೆಂಪುಕೋಟೆ ಒಳಗೆ ನುಗ್ಗಿದ್ದ ರೈತರು, ಮೂರು ಬಾರಿ ಬಾವುಟ ಹಾರಿಸಿದ್ದಾರೆ.
ದೆಹಲಿ: ನಾವು ಶಾಂತಿ ಪ್ರಿಯರು. ಯಾವುದೇ ಕಾರಣಕ್ಕೂ ಗಣರಾಜ್ಯೋತ್ಸವದ ಟ್ರ್ಯಾಕ್ಟರ್ ರ‍್ಯಾಲಿ ಹಿಂಸಾಚಾರಕ್ಕೆ ತಿರುಗದಂತೆ ನೋಡಿಕೊಳ್ಳುತ್ತೇವೆ ಎಂದು ರೈತ ಸಂಘಟನೆಗಳು ಹೇಳಿದ್ದವು. ಆದರೆ, ಇಂದು ಎಲ್ಲವೂ ತಲೆಕೆಳಗಾಗಿದೆ. ಈ ಸಂಬಂಧ ಸಂಯುಕ್ತ ಕಿಸಾನ್ ಮೋರ್ಚಾ ಪ್ರತಿಕ್ರಿಯೆ ನೀಡಿದ್ದು, ಕೆಲ ಸಂಘಟನೆಗಳು ನಿಯಮ ಮೀರಿ ನಡೆದುಕೊಂಡಿವೆ ಎಂದು ಬೇಸರ ಹೊರ ಹಾಕಿದೆ.
ಟ್ರ್ಯಾಕ್ಟರ್ ರ‍್ಯಾಲಿಗೂ ಮುನ್ನ ಮಾತನಾಡಿದ್ದ ರೈತ ಸಂಘಟನೆಗಳು ನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತೇವೆ ಎಂದಿತ್ತು. ಆದರೆ, ಇಂದು ಆಗಿದ್ದೇ ಬೇರೆ. ಒಪ್ಪಿಗೆ ಇಲ್ಲದ ಪ್ರದೇಶಗಳಲ್ಲೂ ಟ್ರ್ಯಾಕ್ಟರ್ಗಳು ಸಂಚಾರ ನಡೆಸಿದ್ದವು. ಕೆಂಪುಕೋಟೆ ಒಳಗೆ ನುಗ್ಗಿದ್ದ ರೈತರು, ಮೂರು ಬಾರಿ ಬಾವುಟ ಹಾರಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಪ್ರತಿಭಟನಾ ನಿರತ ಸಂಯುಕ್ತ ಕಿಸಾನ್ ಮೋರ್ಚಾ, ನಮ್ಮೆಲ್ಲ ಪ್ರಯತ್ನದ ಹೊರತಾಗಿಯೂ ಕೆಲ ಸಂಘಟನೆಗಳ ನಾಯಕರು ಮತ್ತು ಸದಸ್ಯರು ನಿಯಮಬಾಹಿರವಾಗಿ ನಡೆದುಕೊಂಡಿದ್ದಾರೆ. ಸಮಾಜ ವಿರೋಧಿ ಶಕ್ತಿಗಳು ನಮ್ಮ ಪ್ರತಿಭಟನೆಯಲ್ಲಿ ನುಸುಳಿದ್ದವು. ಇಲ್ಲದಿದ್ದರೆ ನಮ್ಮ ಚಳುವಳಿ ಶಾಂತಿಯುತವಾಗಿಯೇ ಇರುತ್ತಿತ್ತು. ಶಾಂತಿ ನಮ್ಮ ದೊಡ್ಡ ಶಕ್ತಿ ಎಂದು ನಾವು ಯಾವಾಗಲೂ ಭಾವಿಸಿದ್ದೇವೆ. ಈ ರೀತಿಯ ಉಲ್ಲಂಘನೆಯು ಚಳವಳಿಗೆ ನೋವುಂಟು ಮಾಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೂರು ಬಾರಿ ಹಾರಿದ ಬಾವುಟ ಕೆಂಪುಕೋಟೆ ಧ್ವಜಸ್ಥಂಬದ ಮೇಲೆ ಮಧ್ಯಾಹ್ನ ಸಿಖ್ ಹಾಗೂ ರೈತ ಧ್ವಜ ಹಾರಿಸಲಾಗಿತ್ತು. ಇದಾದ ಬೆನ್ನಲ್ಲೇ, ಗುಮ್ಮಟದ ಮೇಲೆ ರೈತರ ಧ್ವಜ ಹಾರಾಡಿತ್ತು. ನಂತರ ಮಾತನಾಡಿದ್ದ ರೈತ ನಾಯಕರು, ದೆಹಲಿ ಕೆಂಪುಕೋಟೆಯ ಮೇಲೆ ರೈತಧ್ವಜ ಹಾರಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಸಂದೇಶವೊಂದನ್ನು ರವಾನಿಸುವ ತುಡಿತವಿತ್ತು. ಇದೀಗ ಅದು ಈಡೇರಿದೆ. ನಾವು ವಾಪಸ್ ಮೊದಲಿದ್ದ ಸ್ಥಳಕ್ಕೆ ಹೋಗುತ್ತೇವೆ ಎಂದು ರಾಷ್ಟ್ರೀಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು.
ಹೇಳಿಕೆ ನೀಡಿದ ನಂತರ ಅಚ್ಚರಿ ಎಂಬಂತೆ ರೈತರು ಗುಮ್ಮಟದ ಕೆಳಭಾಗದಲ್ಲಿ ಮತ್ತೊಮ್ಮೆ ಬಾವುಟ ಹಾರಿಸಿದ್ದಾರೆ. ಪ್ರತಿಭಟನೆ ಕಾವು ತಣಿಯದ ಕಾರಣ, ಸನ್ನದ್ಧ ಸ್ಥಿತಿಯಲ್ಲಿರುವಂತೆ ಭದ್ರತಾ ಪಡೆಗಳಿಗೆ ಕೇಂದ್ರ ಗೃಹ ಇಲಾಖೆಯಿಂದ ಸೂಚನೆ ನೀಡಿದೆ. ಪರಿಸ್ಥಿತಿ ಕೈಮೀರಿದರೆ ಹೆಚ್ಚುವರಿ ಭದ್ರತೆ ಒದಗಿಸಲು ಸರ್ಕಾರ ಈ ಸಿದ್ಧತೆ ಮಾಡಿಕೊಂಡಿದೆ.