Covid 19: ದೇಶದಲ್ಲಿ ಕೊರೊನಾ ಪ್ರಕರಣಗಳಲ್ಲಿ ಇಳಿಕೆ; ಕಳೆದ 24 ಗಂಟೆಗಳ ಅವಧಿಯಲ್ಲಿ ದಾಖಲಾದ ಪ್ರಕರಣಗಳೆಷ್ಟು?

| Updated By: shivaprasad.hs

Updated on: Feb 11, 2022 | 9:57 AM

India Covid Update: ಭಾರತದಲ್ಲಿ ಕೊರೊನಾ ಪ್ರಕರಣಗಳಲ್ಲಿ ಇಳಿಕೆಯಾಗುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 58,077 ಪ್ರಕರಣಗಳು ಪತ್ತೆಯಾಗಿವೆ.

Covid 19: ದೇಶದಲ್ಲಿ ಕೊರೊನಾ ಪ್ರಕರಣಗಳಲ್ಲಿ ಇಳಿಕೆ; ಕಳೆದ 24 ಗಂಟೆಗಳ ಅವಧಿಯಲ್ಲಿ ದಾಖಲಾದ ಪ್ರಕರಣಗಳೆಷ್ಟು?
ಪ್ರಾತಿನಿಧಿಕ ಚಿತ್ರ
Follow us on

ದೇಶದಲ್ಲಿ ಶುಕ್ರವಾರ ಒಟ್ಟು 58,077 ಹೊಸ ಕರೋನ ಪ್ರಕರಣಗಳು (Corona Cases) ವರದಿಯಾಗಿವೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಸಕ್ರಿಯ ಪ್ರಕರಣಗಳ ಸಂಖ್ಯೆ 6,97,802ಕ್ಕೆ ಇಳಿದಿದೆ. ದೈನಂದಿನ ಪಾಸಿಟಿವಿಟಿ ದರವು (Daily Positivity Rate) 3.89 ಶೇಕಡಾ ಇದ್ದು, ಸಾಪ್ತಾಹಿಕ ಪಾಸಿಟಿವಿಟಿ ದರವು 5.76 ಶೇಕಡಾ ದಾಖಲಾಗಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮಹಾನಿರ್ದೇಶಕ ಡಾ.ಬಲರಾಮ್ ಭಾರ್ಗವ (Dr Balaram Bhargava) ಅವರು ಗುರುವಾರ ಮಾಹಿತಿ ನೀಡಿ, ದೇಶದಲ್ಲಿ ಮೊದಲ ಡೋಸ್‌ನ 96 ಪ್ರತಿಶತದಷ್ಟು ಲಸಿಕೆ ಸಾಧನೆ ಮಾಡಲಾಗಿದೆ ಎಂದು ಹೇಳಿದರು. ಭಾರತವು ಲಸಿಕೆ ಸೂಪರ್-ಪವರ್ ಆಗುವತ್ತ ಸಾಗುತ್ತಿದೆ ಎಂದು ಅವರು ನುಡಿದಿದ್ದಾರೆ. ದೇಶದಲ್ಲಿ ಇದುವರೆಗೆ ಒಟ್ಟು 1,71,79,51,432 ಡೋಸ್ ಲಸಿಕೆ ನೀಡಲಾಗಿದೆ.

ದೇಶದಲ್ಲಿನ ಕೊರೊನಾ ಪ್ರಕರಣಗಳ ಕುರಿತು ಎಎನ್​ಐ ಟ್ವೀಟ್ ಇಲ್ಲಿದೆ:

ವಿದೇಶಿ ಪ್ರಯಾಣದ ಮಾರ್ಗಸೂಚಿಯಲ್ಲಾಗಿದೆ ಬದಲಾವಣೆ:

ದೇಶದಲ್ಲಿ ಕೊವಿಡ್ 19 ಪ್ರಕರಣಗಳು ತಗ್ಗುತ್ತಿರುವ ಬೆನ್ನಲ್ಲೇ, ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಸಂಬಂಧಪಟ್ಟ ಮಾರ್ಗಸೂಚಿಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪರಿಷ್ಕರಿಸಿದೆ. ಒಮಿಕ್ರಾನ್​ ಹೆಚ್ಚಿದ ಬೆನ್ನಲ್ಲೇ ವಿದೇಶಿ ಪ್ರಯಾಣಕರಲ್ಲೇ ಎರಡು ವಿಭಾಗ ಮಾಡಲಾಗಿತ್ತು. ಅದರಲ್ಲಿ ಅಪಾಯ ಹೆಚ್ಚಿರುವ ರಾಷ್ಟ್ರಗಳು ಮತ್ತು ಇತರ ರಾಷ್ಟ್ರಗಳು ಎಂದು ವಿಂಗಡಿಸಿ, ಪ್ರತ್ಯೇಕವಾಗಿ ಮಾರ್ಗಸೂಚಿ ರೂಪಿಸಿತ್ತು. ಆದರೆ ಈಗ ಅಪಾಯದಲ್ಲಿರುವ ರಾಷ್ಟ್ರಗಳ ಮತ್ತು ಇತರ ರಾಷ್ಟ್ರಗಳ ನಡುವಿನ ಪ್ರತ್ಯೇಕತೆಯನ್ನು ತೆಗೆದುಹಾಕಲಾಗಿದೆ. ಯಾವುದೇ ರಾಷ್ಟ್ರದಿಂದ ಭಾರತಕ್ಕೆ ಬಂದಿದ್ದರೂ, ಅವರು 14 ದಿನಗಳ ಕಾಲ ಸ್ವಯಂ ನಿಗಾ ವಹಿಸಬೇಕು ಎಂದು ಪರಿಷ್ಕೃತ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿದೆ. ಈ ಹಿಂದೆ ಇದ್ದ ಏಳು ದಿನಗಳ ಹೋಂ ಕ್ವಾರಂಟೈನ್​ ನಿಯಮವನ್ನೂ ತೆಗೆದುಹಾಕಿದೆ. ಈ ನಿಯಮ ಫೆಬ್ರವರಿ 14ರಿಂದ ಜಾರಿಯಾಗುತ್ತದೆ.

ಈ ಹೊಸ ನಿಯಮದ ಅನ್ವಯ ಅವರು ಭಾರತಕ್ಕೆ ತಲುಪಿದ ಕೂಡಲೇ ಆರ್​ಟಿ-ಪಿಸಿಆರ್​ ಟೆಸ್ಟ್​ಗೆ ಒಳಗಾಗುವ ಅಗತ್ಯ ಇಲ್ಲ. ಬದಲಿಗೆ 72 ಗಂಟೆಯೊಳಗೆ ಟೆಸ್ಟ್​ ಮಾಡಿ, ಬಂದ ನೆಗೆಟಿವ್​ ರಿಪೋರ್ಟ್​ನ್ನು ಏರ್​ ಸುವಿಧಾ ವೆಬ್ ಪೋರ್ಟ್​ಲ್​ನಲ್ಲಿ ಅಪ್​ಲೋಡ್ ಮಾಡಬೇಕು. ಅದಿಲ್ಲದಿದ್ದರೆ ಪೂರ್ಣ ಪ್ರಮಾಣದ ಲಸಿಕೆ ಪಡೆದಿದ್ದನ್ನು ದೃಢೀಕರಿಸುವ ಸರ್ಟಿಫಿಕೇಟ್​ನ್ನು ದಾಖಲೆಗೆ ನೀಡಬೇಕು ಎಂದು ಹೇಳಲಾಗಿದೆ. ಕೆನಡಾ, ಹಾಂಗ್ ಕಾಂಗ್, ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ಬಹ್ರೇನ್, ಕತಾರ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮತ್ತು ಕೆಲವು ಯುರೋಪಿಯನ್ ರಾಷ್ಟ್ರಗಳು ಸೇರಿ ಒಟ್ಟು 82 ದೇಶಗಳಿಂದ ಬರುವವರಿಗೆ ಈ ಆಯ್ಕೆ ಸೌಲಭ್ಯ ನೀಡಲಾಗಿದೆ.

ಇದನ್ನೂ ಓದಿ:

PM Modi: ಇಂದು ಸಾಗರ ಶೃಂಗಸಭೆಯ ಉನ್ನತ ವಿಭಾಗವನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ನರೇಂದ್ರ ಮೋದಿ

ಮೈಮರೆಯಬೇಡಿ, ಕೊವಿಡ್ 19 ಮುಂದಿನ ರೂಪಾಂತರ ಇನ್ನಷ್ಟು ಮಾರಣಾಂತಿಕವಾಗಿರಬಹುದು: ವಿಶ್ವ ಆರೋಗ್ಯ ಸಂಸ್ಥೆಯಿಂದ ಎಚ್ಚರಿಕೆ

Published On - 9:56 am, Fri, 11 February 22