ಮೈಮರೆಯಬೇಡಿ, ಕೊವಿಡ್ 19 ಮುಂದಿನ ರೂಪಾಂತರ ಇನ್ನಷ್ಟು ಮಾರಣಾಂತಿಕವಾಗಿರಬಹುದು: ವಿಶ್ವ ಆರೋಗ್ಯ ಸಂಸ್ಥೆಯಿಂದ ಎಚ್ಚರಿಕೆ
ಡೆಲ್ಟಾ ನಂತರ ಹುಟ್ಟಿದ್ದು ಒಮಿಕ್ರಾನ್. 2021ರ ನವೆಂಬರ್ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ಈ ವೈರಸ್ ಅತ್ಯಂತ ಕಡಿಮೆ ಸಮಯದಲ್ಲಿ ಜಗತ್ತನ್ನು ಆವರಿಸಿದೆ. ಡೆಲ್ಟಾಕ್ಕಿಂತ ನಾಲ್ಕು ಪಟ್ಟು ಹೆಚ್ಚು ವೇಗವಾಗಿ ಹರಡಿದ ಒಮಿಕ್ರಾನ್ ಆರೋಗ್ಯದಲ್ಲಿ ಗಂಭೀರ ಸಮಸ್ಯೆಯನ್ನು ಉಂಟು ಮಾಡಿದ್ದು ತುಂಬ ಕಡಿಮೆ.
ಒಮಿಕ್ರಾನ್ ರೂಪಾಂತರದಿಂದ ಜಗತ್ತಿನಾದ್ಯಂತ ಅತ್ಯಂತ ಹೆಚ್ಚಾಗಿದ್ದ ಕೊರೊನಾ ಸೋಂಕಿನ (Coronavirus) ಪ್ರಮಾಣ ನಿಧಾನವಾಗಿ ತಗ್ಗುತ್ತಿದೆ. ಹಾಗೇ ಜಗತ್ತು ಕೂಡ ಒಂದೊಂದೇ ಹಂತವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ಜನರು ನಿರ್ಲಕ್ಷ್ಯ ಮಾಡುವಂತಿಲ್ಲ. ಯಾಕೆಂದರೆ ಕೊವಿಡ್ 19ನ ಮುಂದಿನ ರೂಪಾಂತರ ಈ ಹಿಂದಿನ ಎಲ್ಲ ರೂಪಾಂತರಿ ವೈರಾಣುಗಳಿಗಿಂತಲೂ ಅತ್ಯಂತ ಹೆಚ್ಚು ಪ್ರಸರಣ ಹೊಂದುತ್ತದೆ ಮತ್ತು ಬಹುಶಃ ಒಮಿಕ್ರಾನ್ಗಿಂತಲೂ ಮಾರಣಾಂತಿಕವಾಗಿ ಇರಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ ವಿಶ್ವ ಆರೋಗ್ಯ ಸಂಸ್ಥೆ (WHO)ಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞರಾದ ಡಾ.ಮಾರಿಯಾ ವ್ಯಾನ್ ಕೆರ್ಕೋವ್, ಕೊವಿಡ್ 19 ಸಾಂಕ್ರಾಮಿಕ ಇನ್ನೂ ಕೊನೆಗೊಂಡಿಲ್ಲ. ಅದರ ಭವಿಷ್ಯದ ತಳಿಗಳು ಇನ್ನಷ್ಟು ಅಪಾಯಕಾರಿ ಎಂಬುದನ್ನು ಒತ್ತಿ ಹೇಳಿದ್ದಾರೆ.
ಒಮಿಕ್ರಾನ್ ಕೊವಿಡ್ 19 ನ ಕೊನೇ ರೂಪಾಂತರವಲ್ಲ. ಇದರ ಮುಂದಿನ ರೂಪಾಂತರ ಇನ್ನಷ್ಟು ವೇಗವಾಗಿ ಅಂದರೆ ಇದೀಗ ಹರಡುತ್ತಿರುವ ಒಮಿಕ್ರಾನ್ನ್ನೂ ಹಿಂದಿಕ್ಕಿ ಪ್ರಸರಣಗೊಳ್ಳುತ್ತದೆ. ಆದರೆ ಅದರ ಗಂಭೀರತೆ ಎಷ್ಟಿರಲಿದೆ ಎಂಬುದು ಸದ್ಯ ಇರುವ ಪ್ರಶ್ನೆ. ಮುಂದಿನ ರೂಪಾಂತರ ಮನುಷ್ಯರ ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಅತ್ಯಂತ ಸುಲಭವಾಗಿ ತಗ್ಗಿಸಬಹುದು. ಈಗಾಗಲೇ ಇರುವ ಕೊವಿಡ್ 19 ಲಸಿಕೆಗಳ ಶಕ್ತಿಯನ್ನೂ ಕುಂದಿಸುವಂತಿರಬಹುದು ಡಾ.ಮಾರಿಯಾ ವ್ಯಾನ್ ಕೆರ್ಕೋವ್ ಹೇಳಿದ್ದಾರೆ.
What are potential future scenarios on #COVID19 and #Omicron? WHO’s Dr @mvankerkhove explains. ⬇ pic.twitter.com/joaHlgmLKi
— World Health Organization Philippines (@WHOPhilippines) February 6, 2022
ಕೊವಿಡ್ 19 ವೈರಸ್ ಶುರುವಾದ ಮೇಲೆ ಅದರಿಂದ ಹಲವು ರೂಪಾಂತರಗಳು ಉಂಟಾಗಿದ್ದರೂ, ಜಗತ್ತಿಗೆ ಹೆಚ್ಚು ಬಾಧಿಸಿದವು ಡೆಲ್ಟಾ ಮತ್ತು ಒಮಿಕ್ರಾನ್. ಅದರಲ್ಲಿ ಡೆಲ್ಟಾ ಅತ್ಯಂತ ಮಾರಣಾಂತಿಕವಾಗಿ ಪರಿಣಮಿಸಿತ್ತು. ಅದಕ್ಕೆ ಹೋಲಿಸದರೆ ಒಮಿಕ್ರಾನ್ ಗಂಭೀರತೆ ತುಂಬ ಕಡಿಮೆಯಿತ್ತು. ಡೆಲ್ಟಾ ಮೊಟ್ಟ ಮೊದಲು ಭಾರತದಲ್ಲಿ ಪತ್ತೆಯಾಗಿದ್ದು 2020ರ ಅಕ್ಟೋಬರ್ನಲ್ಲಿ. ಅದರ ಹಿಂದಿನ ಆಲ್ಪಾ ರೂಪಾಂತರಿಗಿಂತಲೂ ಶೇ.50ರಷ್ಟು ವೇಗವಾಗಿ ಹರಡಿತ್ತು. ಹಾಗೇ ಮೂಲ ವೈರಸ್ ಆದ ಕೊರೊನಾ ವೈರಸ್ಗಿಂತಲೂ ಶೇ.50ರಷ್ಟು ಅಧಿಕ ಸಾಂಕ್ರಾಮಿಕವಾಗಿತ್ತು. ಈ ಡೆಲ್ಟಾ ಭಾರತದಲ್ಲಿ ಎರಡನೇ ಅಲೆಗೆ ಕಾರಣವಾಗಿತ್ತು. ಅದು ಬಿಟ್ಟರೆ ಯುಕೆ, ಇಸ್ರೇಲ್, ರಷ್ಯಾ, ಆಸ್ಟ್ರೇಲಿಯಾ ಸೇರಿ ಜಗತ್ತಿನ ಇತರ ದೇಶಗಳಿಗೂ ಅತ್ಯಂತ ಹೆಚ್ಚಾಗಿ ಬಾಧಿಸಿತ್ತು.
ಡೆಲ್ಟಾ ನಂತರ ಹುಟ್ಟಿದ್ದು ಒಮಿಕ್ರಾನ್. 2021ರ ನವೆಂಬರ್ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ಈ ವೈರಸ್ ಅತ್ಯಂತ ಕಡಿಮೆ ಸಮಯದಲ್ಲಿ ಜಗತ್ತನ್ನು ಆವರಿಸಿದೆ. ಡೆಲ್ಟಾಕ್ಕಿಂತ ನಾಲ್ಕು ಪಟ್ಟು ಹೆಚ್ಚು ವೇಗವಾಗಿ ಹರಡಿದ ಒಮಿಕ್ರಾನ್ ಆರೋಗ್ಯದಲ್ಲಿ ಗಂಭೀರ ಸಮಸ್ಯೆಯನ್ನು ಉಂಟು ಮಾಡಿದ್ದು ತುಂಬ ಕಡಿಮೆ. ಹಾಗೇ, ಇದು ಡೆಲ್ಟಾಕ್ಕಿಂತಲೂ 5 ಪಟ್ಟು ಹೆಚ್ಚು ಮರುಸೋಂಕಿನ ಅಪಾಯ ಹೊಂದಿದೆ. ಸದ್ಯ ಭಾರತದಲ್ಲಿ ನಡೆಯುತ್ತಿರುವ ಮೂರನೇ ಅಲೆಗೆ ಕಾರಣವಾಗಿದ್ದು ಇದೇ ಒಮಿಕ್ರಾನ್ ಸೋಂಕಾಗಿದೆ. ಒಮಿಕ್ರಾನ್ ಶುರುವಾದಾಗ, ಇದು ಕೊರೊನಾದ ಕೊನೇ ರೂಪಾಂತರ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಅದನ್ನೀಗ ಆರೋಗ್ಯ ತಜ್ಞರು ಅಲ್ಲಗಳೆದಿದ್ದಾರೆ.