ದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಪ್ರಸರಣ ಇಳಿಮುಖವಾಗುತ್ತಿದೆ. ಶನಿವಾರ 50 ಸಾವಿರಕ್ಕಿಂತಲೂ ಕಡಿಮೆ ಹೊಸ ಕೇಸ್ಗಳು ಪತ್ತೆಯಾಗಿದ್ದು, 24ಗಂಟೆಯಲ್ಲಿ 1,183 ಮಂದಿ ಸೋಂಕಿನಿಂದ ಜೀವ ಕಳೆದುಕೊಂಡಿದ್ದಾರೆ. ದಿನದಲ್ಲಿ ಪತ್ತೆಯಾಗುವ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತ ಬಂದಿದ್ದರೂ ಸಾವಿನ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರಲಿಲ್ಲ. ಇದೀಗ ದಾಖಲಾಗುವ ಸಾವಿನಸಂಖ್ಯೆಯಲ್ಲೂ ತುಸು ಕಡಿಮೆಯಾಗುತ್ತಿದೆ. ದೇಶದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 3,01,83,143ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಕಳೆದ 24ಗಂಟೆಯಲ್ಲಿ 48,698 ಹೊಸ ಕೊರೊನಾ ಕೇಸ್ಗಳು ದಾಖಲಾಗಿದ್ದು, 64,818 ಮಂದಿ ಕೊವಿಡ್-19ನಿಂದ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ. ಇಲ್ಲಿಯವರೆಗೆ ಕೊರೊನಾದಿಂದ ಮೃತಪಟ್ಟವರ ಒಟ್ಟು ಸಂಖ್ಯೆ 3,94,493 ಕ್ಕೆ ಏರಿಕೆಯಾಗಿದ್ದು, ಚೇತರಿಸಿಕೊಂಡವರ ಸಂಖ್ಯೆ 2,91,93,085 ಆಗಿದೆ. ದೇಶದಲ್ಲಿ ಸಕ್ರಿಯ ಕೊರೊನಾ ಸೋಂಕಿತರ ಸಂಖ್ಯೆ 5,95,565 ಇದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಡಾಟಾದಲ್ಲಿ ಉಲ್ಲೇಖವಾಗಿರುವಂತೆ ಇದುವರೆಗೆ 40,18,11,892 ಮಾದರಿಗಳನ್ನು ತಪಾಸಣೆ ಮಾಡಲಾಗಿದೆ. ಜೂ.25ರಂದು 17,45,809 ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ. ಹಾಗೇ, ಕೊರೊನಾ ಲಸಿಕೆ ಅಭಿಯಾನ ಕೂಡ ವೇಗದಿಂದ ನಡೆಯುತ್ತಿದೆ. ಈಗಾಗಲೇ 31 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ. ಜೂ.21ರಿಂದ ದೇಶದಲ್ಲಿ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗಿದೆ. ಶುಕ್ರವಾರ ಒಂದೇ ದಿನ 60 ಲಕ್ಷ ಜನರಿಗೆ ಕೊವಿಡ್ 19 ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: 7th Pay Commission: ಕೇಂದ್ರದಿಂದ ಉದ್ಯೋಗಿಗಳಿಗೆ ಡಿಎ, ಡಿಆರ್ ಬಾಕಿ ಪಾವತಿ ಬಗ್ಗೆ ಇಂದಿನ ಸಭೆಯಲ್ಲಿ ನಿರ್ಧಾರ