Delta Plus Variant: ಡೆಲ್ಟಾ ಪ್ಲಸ್ ಮಾದರಿಯ ಪ್ರಾಥಮಿಕ ಹಂತದ ಗುಣಲಕ್ಷಣಗಳೇನು?
ಬ್ರಿಟನ್ನ ZOE ಆ್ಯಪ್ ಡೆಲ್ಟಾ ಪ್ಲಸ್ನ ಗುಣಲಕ್ಷಣಗಳು ಏನಿವೆ ಎಂಬುದರ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಅದರ ಪ್ರಕಾರ ತಲೆನೋವು, ಗಂಟಲು ಊತ, ಮೂಗು ಸೋರುವಿಕೆ ಹಾಗೂ ಜ್ವರವನ್ನು ಡೆಲ್ಟಾ ಪ್ಲಸ್ ವೈರಾಣುವಿನ ಪ್ರಾಥಮಿಕ ಗುಣಲಕ್ಷಣಗಳು ಎಂದೆನ್ನಲಾಗಿದೆ.
ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆ ಅವಾಂತರ ಸೃಷ್ಟಿಸಿದ ನಂತರ ಈಗ ಹತೋಟಿಗೆ ಬರುತ್ತಿದೆ. ಆದರೆ, ಎರಡನೇ ಅಲೆಗೆ ಕಾರಣವೆನ್ನಲಾದ ಡೆಲ್ಟಾ ಮಾದರಿ ಕೊರೊನಾ ವೈರಾಣು ಮತ್ತೊಮ್ಮೆ ರೂಪಾಂತರ ಹೊಂದಿ ಡೆಲ್ಟಾ ಪ್ಲಸ್ ಆಗಿ ಕಾಣಿಸಿಕೊಂಡಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ. ಇಲ್ಲಿಯವರೆಗಿನ ಎಲ್ಲಾ ಮಾದರಿಗಳಿಗಿಂತಲೂ ಅಪಾಯಕಾರಿ ಎನ್ನಲಾದ ಡೆಲ್ಟಾ ಪ್ಲಸ್, ಭಾರತದಲ್ಲಿ ಮೂರನೇ ಅಲೆ ಸೃಷ್ಟಿಸಬಹುದು ಎನ್ನುವ ಲೆಕ್ಕಾಚಾರಗಳೂ ಇವೆ. ಕೊರೊನಾ ವೈರಾಣು ಮೊಟ್ಟ ಮೊದಲ ಬಾರಿಗೆ 2019ನೇ ಇಸವಿಯಲ್ಲಿ ಕಾಣಿಸಿಕೊಂಡಾಗಿನಿಂದ ಇಲ್ಲಿಯ ತನಕ ಅನೇಕ ಬಗೆಯಲ್ಲಿ ರೂಪಾಂತರ ಹೊಂದಿದೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಗುಣಲಕ್ಷಣಗಳನ್ನು ತೋರ್ಪಡಿಸುವ ರೂಪಾಂತರಿ ಮಾದರಿಗಳ ಬಗ್ಗೆ ನಿರಂತರ ಅಧ್ಯಯನಗಳೂ ಆಗುತ್ತಿವೆ. ಸದ್ಯ ದೇಶದ ಕೆಲ ರಾಜ್ಯಗಳಲ್ಲಿ ಕಾಣಿಸಿಕೊಂಡಿರು ಡೆಲ್ಟಾ ಪ್ಲಸ್ ಮಾದರಿಯನ್ನು ಚಿಂತನೀಯ ಮಾದರಿ ಎಂದು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಘೋಷಿಸಿದೆ. ಇಷ್ಟಕ್ಕೂ, ಡೆಲ್ಟಾ ಪ್ಲಸ್ ಗುಣಲಕ್ಷಣಗಳೇನು? ಅದರಲ್ಲಿ ಏನೆಲ್ಲಾ ಬದಲಾವಣೆಗಳಿವೆ ಎಂಬ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಈ ಮೊದಲು ಕಾಣಿಸಿಕೊಂಡ B.1.617.2 ರೂಪಾಂತರಿ ಕೊರೊನಾ ವೈರಾಣುವನ್ನು ವಿಶ್ವಸಂಸ್ಥೆ ಡೆಲ್ಟಾ ಮಾದರಿ ಎಂದು ಕರೆದಿದೆ. ಸದರಿ ಮಾದರಿ ಇದೀಗ ಮರು ರೂಪಾಂತರಕ್ಕೆ ಒಳಗಾಗಿದ್ದು ಅದನ್ನು ಡೆಲ್ಟಾ ಪ್ಲಸ್ ಎಂದು ಗುರುತಿಸಲಾಗಿದೆ. ಡೆಲ್ಟಾ ಪ್ಲಸ್ (AY.1) ಮಾದರಿಯು ಮೋನೋಕ್ಲೋನಲ್ ಆ್ಯಂಟಿಬಾಡಿ ಕಾಕ್ಟೈಲ್ಗಳಿಗೆ ಪ್ರತಿರೋಧ ಒಡ್ಡುವ ಶಕ್ತಿ ಹೊಂದಿದೆ. ಆದರೆ, ಇದು ಹೊಸದಾಗಿ ಕಂಡುಬಂದ ಮಾದರಿಯಾದ ಕಾರಣ ಅದರ ಗಂಭೀರತೆ ಇನ್ನೂ ಅರ್ಥವಾಗಿಲ್ಲ. ರೂಪಾಂತರವಾಗಿರುವುದು ಸಾರ್ಸ್-ಕೋವ್-2 ವೈರಾಣುವಿನ ಸ್ಪೈಕ್ ಪ್ರೋಟಿನ್ಗಳಲ್ಲಾದ್ದರಿಂದ ಅದು ಮನುಷ್ಯನ ದೇಹವನ್ನು ಸಲೀಸಾಗಿ ಪ್ರವೇಶಿಸುವಲ್ಲಿ ಯಶಸ್ವಿಯಾಗುತ್ತಿವೆ.
ಡೆಲ್ಟಾ ಪ್ಲಸ್ ಗುಣಲಕ್ಷಣಗಳೇನು? ಬ್ರಿಟನ್ನ ZOE ಆ್ಯಪ್ ಡೆಲ್ಟಾ ಪ್ಲಸ್ನ ಗುಣಲಕ್ಷಣಗಳು ಏನಿವೆ ಎಂಬುದರ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಅದರ ಪ್ರಕಾರ ತಲೆನೋವು, ಗಂಟಲು ಊತ, ಮೂಗು ಸೋರುವಿಕೆ ಹಾಗೂ ಜ್ವರವನ್ನು ಡೆಲ್ಟಾ ಪ್ಲಸ್ ವೈರಾಣುವಿನ ಪ್ರಾಥಮಿಕ ಗುಣಲಕ್ಷಣಗಳು ಎಂದೆನ್ನಲಾಗಿದೆ.
ಈಗಿರುವ ಲಸಿಕೆಗಳು ಪರಿಣಾಮಕಾರಿಯೇ? ವೈದ್ಯಕೀಯ ಪರಿಣತರು ಹೇಳುವ ಪ್ರಕಾರ ಪ್ರಸ್ತುತ ಲಭ್ಯವಿರುವ ಕೊರೊನಾ ಲಸಿಕೆಗಳು ಡೆಲ್ಟಾ ಪ್ಲಸ್ ಮೇಲೆ ಪರಿಣಾಮಕಾರಿಯಾಗಿದೆಯೇ? ಇಲ್ಲವೇ? ಎಂದು ನಿಖರವಾಗಿ ಹೇಳಲು ಇನ್ನಷ್ಟು ಸಮಯ ಬೇಕಿದೆ. ಆದರೆ, ಭಾರತದ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್, ಕೊವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳೆರಡೂ ಡೆಲ್ಟಾ ಪ್ಲಸ್ ವಿರುದ್ಧ ಪ್ರಭಾವಶಾಲಿ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Delta Plus Variant: ಡೆಲ್ಟಾ ಪ್ಲಸ್ ವಿರುದ್ಧ ಯಾವ ಕಂಪೆನಿಯ ಕೊರೊನಾ ಲಸಿಕೆ ಹೆಚ್ಚು ಪರಿಣಾಮಕಾರಿ?
ಡೆಲ್ಟಾ ಪ್ಲಸ್ ವೈರಸ್ ವಿರುದ್ಧ ಕೊವಿಶೀಲ್ಡ್ ಲಸಿಕೆ ಹೆಚ್ಚು ಪರಿಣಾಮಕಾರಿಯಲ್ಲ: ಲ್ಯಾನ್ಸೆಟ್ ವರದಿ