ಡೆಲ್ಟಾ ಪ್ಲಸ್ ವೈರಸ್ ವಿರುದ್ಧ ಕೊವಿಶೀಲ್ಡ್ ಲಸಿಕೆ ಹೆಚ್ಚು ಪರಿಣಾಮಕಾರಿಯಲ್ಲ: ಲ್ಯಾನ್ಸೆಟ್ ವರದಿ
ಕೊವಿಶೀಲ್ಡ್ನ ಎರಡೂ ಡೋಸ್ ಲಸಿಕೆ ಪಡೆದವರಿಗೆ ಸೋಂಕಿನಿಂದ ಶೇ 60ರಷ್ಟು ರಕ್ಷಣೆ ಸಿಗುತ್ತದೆ. ಒಂದೇ ಡೋಸ್ ಪಡೆದವರಿಗೆ ಶೇ 33ರಷ್ಟು ರಕ್ಷಣೆ ಸಿಗಲಿದೆ ಎಂದು ವರದಿ ಹೇಳಿದೆ.
ದೆಹಲಿ: ಕೊರೊನಾ ವೈರಾಣುವಿನ ಡೆಲ್ಟಾ ಪ್ಲಸ್ ರೂಪಾಂತರದ ವಿರುದ್ಧ ಕೊವಿಶೀಲ್ಡ್ ಲಸಿಕೆಯಿಂದ ಹೆಚ್ಚು ರಕ್ಷಣೆ ಸಿಗುವುದಿಲ್ಲ ಎಂದು ಇಂಗ್ಲೆಂಡ್‌ನ ಪ್ರತಿಷ್ಠಿತ ಲ್ಯಾನ್ಸೆಟ್ ಮೆಡಿಕಲ್ ಜರ್ನಲ್‌ನ ಅಧ್ಯಯನ ವರದಿ ತಿಳಿಸಿದೆ. ಕೊವಿಶೀಲ್ಡ್ನ ಎರಡೂ ಡೋಸ್ ಲಸಿಕೆ ಪಡೆದವರಿಗೆ ಸೋಂಕಿನಿಂದ ಶೇ 60ರಷ್ಟು ರಕ್ಷಣೆ ಸಿಗುತ್ತದೆ. ಒಂದೇ ಡೋಸ್ ಪಡೆದವರಿಗೆ ಶೇ 33ರಷ್ಟು ರಕ್ಷಣೆ ಸಿಗಲಿದೆ ಎಂದು ವರದಿ ಹೇಳಿದೆ.
ಭಾರತದ ಸಾಂಕ್ರಾಮಿಕ ರೋಗತಜ್ಞರು ಡೆಲ್ಟಾ ಪ್ಲಸ್ ರೂಪಾಂತರಿಯ ವಿರುದ್ಧವೂ ಕೊವಿಶೀಲ್ಡ್ ಲಸಿಕೆ ರಕ್ಷಣೆ ನೀಡುತ್ತದೆ ಎಂದು ವಾದಿಸುತ್ತಿದ್ದಾರೆ. ಕೊವಿಶೀಲ್ಡ್ ಲಸಿಕೆಯು ಡೆಲ್ಟಾ ಪ್ಲಸ್ ವಿರುದ್ಧ ರಕ್ಷಣೆ ನೀಡುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (Indian Council of Medical Research – ICMR) ಮಾಜಿ ಮುಖ್ಯಸ್ಥ ರಾಮನ್ ಗಂಗಾಖೇಡ್ಕರ್ ಅಭಿಪ್ರಾಯಪಟ್ಟಿದ್ದರು.
ಭಾರತದ ತಜ್ಞರ ಅಭಿಪ್ರಾಯಗಳನ್ನು ಲ್ಯಾನ್ಸೆಟ್ನ ಈ ವರದಿಯು ನಿರಾಕರಿಸಿದೆ. ಕೊರೊನಾ ವೈರಾಣುವಿನ ಡೆಲ್ಟಾ ರೂಪಾಂತರದ ವಿರುದ್ಧ ಆಸ್ಟ್ರಾಜೆನೆಕಾ ಲಸಿಕೆಗಳು ಹೆಚ್ಚು ಪರಿಣಾಮಕಾರಿಯಲ್ಲ ಎಂದು ಲ್ಯಾನ್ಸೆಟ್ನ ಹೊಸ ವರದಿ ಹೇಳಿದೆ. ಲಸಿಕೆ ತೆಗೆದುಕೊಂಡ ನಂತರ ದೇಹದಲ್ಲಿ ಬೆಳವಣಿಗೆಯಾಗಿರುವ ಪ್ರತಿಕಾಯಗಳ ಶಕ್ತಿಯನ್ನೂ ಈ ರೂಪಾಂತರಿಯು ಕುಗ್ಗಿಸುತ್ತದೆ ಎಂದು ಹಲವು ಪುರಾವೆಗಳನ್ನು ಮುಂದಿಟ್ಟಿದೆ.
ಏಪ್ರಿಲ್ನಿಂದ ಜೂನ್ ತಿಂಗಳ ಅವಧಿಯಲ್ಲಿ ಸ್ಕಾಟ್ಲೆಂಡ್ನ ಹಲವು ಸೋಂಕಿತರನ್ನು ಕೂಲಂಕಶ ಪರಿಶೀಲನೆಗೆ ಒಳಪಡಿಸಿದರು. ಈ ಪೈಕಿ ಶೇ 44.7ರಷ್ಟು ಜನರು ಲಸಿಕೆಯ ಮೊದಲ ಡೋಸ್ ಮತ್ತು ಶೇ 7.6ರಷ್ಟು ಜನರು ಎರಡೂ ಡೋಸ್ ಪಡೆದುಕೊಂಡಿದ್ದರು. ಆಕ್ಸ್ಫರ್ಡ್ ಆಸ್ಟ್ರಾಜೆನೆಕಾ ಮತ್ತು ಫಿಜರ್ ಬಯೊಎನ್ಟೆಕ್ ಲಸಿಕೆಗಳನ್ನು ಇವರು ಪಡೆದಿದ್ದರು.
ಡೆಲ್ಟಾ ರೂಪಾಂತರದ ವೈರಾಣು ಸೋಂಕಿನಿಂದ ಬಾಧಿತರಾದವರಿಗೆ ಆಸ್ಪತ್ರೆಗೆ ಸೇರಬೇಕಾದ ಅಗತ್ಯ ಇತರ ರೂಪಾಂತರಿಗಳಿಂದ ಸೋಂಕಿತರಾದವರಿಗಿಂತಲೂ ಹೆಚ್ಚು. ಬಹುತೇಕ ದ್ವಿಗುಣ ಎಂದು ವರದಿ ಹೇಳಿದೆ. ಸುಮಾರು ಐದು ಕೊಮಾರ್ಬಿಡಿಟಿ ಲಕ್ಷಣಗಳು ಇಂಥವರಲ್ಲಿ ಕಂಡುಬಂದಿದೆ. ಆಸ್ಟ್ರಾಜೆನೆಕಾ ಮತ್ತು ಫಿಜರ್ ಲಸಿಕೆ ಪಡೆದವರಿಗೆ ಕೊರೊನಾದ ಇತರ ರೂಪಾಂತರಗಳ ವಿರುದ್ಧ ಪ್ರತಿಕಾಯಗಳು ಸಮರ್ಪಕವಾಗಿ ಕೆಲಸ ಮಾಡುತ್ತವೆ. ಆದರೆ ಡೆಲ್ಟಾ ರೂಪಾಂತರದ ವಿರುದ್ಧ ಈ ಲಸಿಕೆಗಳು ಹೆಚ್ಚು ಪರಿಣಾಮ ಬೀರಿಲ್ಲ ಎಂದು ವರದಿ ಹೇಳಿದೆ.
ಫಿಜರ್ ಲಸಿಕೆಗೆ ಹೋಲಿಸಿದರೆ ಕೊರೊನಾದ ಡೆಲ್ಟಾ ರೂಪಾಂತರದ ವಿರುದ್ಧದ ಕ್ಷಮತೆಯ ಲೆಕ್ಕಾಚಾರದಲ್ಲಿ ಆಕ್ಸ್ಫರ್ಡ್ ಆಸ್ಟ್ರಾಜೆನೆಕಾ ಲಸಿಕೆಯು ಕಡಿಮೆ ಪರಿಣಾಮಕಾರಿ ಎಂದು ಸಂಶೋಧಕರ ತಂಡವು ಕಂಡುಕೊಂಡಿದೆ.
ಲ್ಯಾನ್ಸೆಟ್ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ಈ ಅಧ್ಯಯನ ವರದಿಯು ಭಾರತಕ್ಕೆ ನೇರವಾಗಿ ಸಂಬಂಧ ಹೊಂದಿದೆ. ಏಕೆಂದರೆ ಭಾರತದಲ್ಲಿ ಈಚೆಗೆ ಡೆಲ್ಟಾ ಪ್ಲಸ್ ರೂಪಾಂತರದ ವೈರಾಣು ಸೋಂಕು ಹೆಚ್ಚಾಗಿ ಕಂಡುಬರುತ್ತಿದೆ. ಇದರ ಜೊತೆಗೆ ಭಾರತದಲ್ಲಿ ಆಕ್ಸ್ಫರ್ಡ್ ಆಸ್ಟ್ರಾಜೆನೆಕಾ ಸಿದ್ಧಪಡಿಸಿದ ತಂತ್ರಜ್ಞಾನದಿಂದ ತಯಾರಿಸಿದ ಕೊವಿಶೀಲ್ಡ್ ಲಸಿಕೆಯನ್ನು ಶೇ 90ರಷ್ಟು ಮಂದಿ ಪಡೆದುಕೊಂಡಿದ್ದಾರೆ.
(Covishield vaccine less effective against Coronavirus Delta variant says a Scotland study in Lancet journal)
ಇದನ್ನೂ ಓದಿ: Delta Plus Variant ಹಿಂದಿನ ರೂಪಾಂತರಿಗೆ ಹೋಲಿಸಿದರೆ ಡೆಲ್ಟಾ ಪ್ಲಸ್ ವೈರಸ್ ಹೆಚ್ಚು ಸಾಂಕ್ರಾಮಿಕ: ಡಾ.ರಣದೀಪ್ ಗುಲೇರಿಯಾ
ಇದನ್ನೂ ಓದಿ: Simply Explained : ಏನಿದು ಡೆಲ್ಟಾ.. ಡೆಲ್ಟಾ ಪ್ಲಸ್ ವೈರಸ್, 3rd Wave ಹೇಗಿರುತ್ತೆ: ?