ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಡ್ರೋನ್ ಚಟುವಟಿಕೆಗಳ ಬಗ್ಗೆ ಭಾರತೀಯ ಸೇನೆಯಿಂದ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ

ನೆರೆಯ ದೇಶ ಪಾಕಿಸ್ತಾನದಿಂದ ಭಾರತಕ್ಕೆ ಡ್ರೋನ್ ಒಳನುಸುಳಿದೆ ಎಂದು ಭಾರತ ಹೇಳಿದೆ. ಈ ಬಗ್ಗೆ ಭಾರತದ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ಇಂದು ನಡೆದ ಭಾರತೀಯ ಸೇನೆಯ ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ, ಪಾಕಿಸ್ತಾನದಿಂದ ಭಾರತಕ್ಕೆ ಡ್ರೋನ್ ಒಳನುಸುಳುವಿಕೆಯನ್ನು ನಿಯಂತ್ರಿಸಲು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮುಖ್ಯಸ್ಥರಿಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಡ್ರೋನ್ ಚಟುವಟಿಕೆಗಳ ಬಗ್ಗೆ ಭಾರತೀಯ ಸೇನೆಯಿಂದ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ
Upendra Dwivedi

Updated on: Jan 13, 2026 | 5:51 PM

ನವದೆಹಲಿ, ಜನವರಿ 13: ಪಾಕಿಸ್ತಾನದೊಂದಿಗೆ ಇಂದು ಡಿಜಿಎಂಒ ಮಟ್ಟದ ಮಾತುಕತೆ ನಡೆದಿದ್ದು, ಈ ಸಂದರ್ಭದಲ್ಲಿ ಪಾಕಿಸ್ತಾನದ (Pakistan) ಕಡೆಯಿಂದ ಬರುವ ಡ್ರೋನ್‌ಗಳ ಬಗ್ಗೆ ಕಳವಳ ವ್ಯಕ್ತವಾಗಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆ. ಹಾಗೇ, ಭಾರತದೊಳಗೆ ಡ್ರೋನ್ ಚಟುವಟಿಕೆ ನಿಲ್ಲಿಸಲು ಪಾಕ್​​ಗೆ ಎಚ್ಚರಿಕೆ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ನೌಶೇರಾ-ರಾಜೌರಿ ವಲಯದಲ್ಲಿ ಡ್ರೋನ್‌ಗಳು ಪತ್ತೆಯಾದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ಸಂಭವಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜನರಲ್ ಉಪೇಂದ್ರ ದ್ವಿವೇದಿ, ಮೇ 10ರಿಂದ ಪಶ್ಚಿಮ ಫ್ರಂಟ್, ಜಮ್ಮು ಮತ್ತು ಕಾಶ್ಮೀರ ಸೂಕ್ಷ್ಮ ಪ್ರದೇಶಗಳಾಗಿ ಉಳಿದಿವೆ. ಭದ್ರತಾ ಪಡೆಗಳು 31 ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿದ್ದರಿಂದ ಅಲ್ಲಿನ ಪರಿಸ್ಥಿತಿ ಸದ್ಯಕ್ಕೆ ನಿಯಂತ್ರಣದಲ್ಲಿದೆ. 2025ರಲ್ಲಿ ಆಪರೇಷನ್ ಮಹಾದೇವ್‌ನಲ್ಲಿ ಮೂವರು ಪಹಲ್ಗಾಮ್ ದಾಳಿಯ ಅಪರಾಧಿಗಳನ್ನು ತಟಸ್ಥಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Video: ಜಮ್ಮು-ಕಾಶ್ಮೀರದ ಗಡಿಯಲ್ಲಿ ಐದು ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​

“ಪಾಕಿಸ್ತಾನದ 8 ಭಯೋತ್ಪಾದಕ ಶಿಬಿರಗಳು ಇನ್ನೂ ಸಕ್ರಿಯವಾಗಿವೆ. 6 ಎಲ್‌ಒಸಿಯತ್ತ ಮುಖ ಮಾಡಿವೆ ಮತ್ತು 2 ಅಂತಾರಾಷ್ಟ್ರೀಯ ಗಡಿಯಲ್ಲಿವೆ. ಪಾಕಿಸ್ತಾನಿ ಪಡೆಗಳು ಒಳಗೆ ನುಸುಳಲು ಪ್ರಯತ್ನಿಸಿದರೆ, ಅದರ ಆಧಾರದ ಮೇಲೆ ನಾವು ಕ್ರಮ ಕೈಗೊಳ್ಳುತ್ತೇವೆ” ಎಂದು ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಹೇಳಿದ್ದಾರೆ.


ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ ಸೂಕ್ಷ್ಮವಾಗಿದೆ. ಆದರೆ ಅಲ್ಲಿನ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಹೇಳಿದ್ದಾರೆ. ಭಾರತದೊಳಗೆ ಹಾರಿದ ಡ್ರೋನ್‌ಗಳು ತುಂಬಾ ಚಿಕ್ಕದಾಗಿದ್ದು, ಲೈಟ್​​ಗಳನ್ನು ಆನ್ ಮಾಡಿ ಒಳಗೆ ಬಂದಿದ್ದವು. ಅವು ತೀರಾ ಎತ್ತರದಲ್ಲಿ ಹಾರಿಲ್ಲ ಎಂದು ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆ. ಜನವರಿ 10ರಂದು ಸುಮಾರು 6 ಡ್ರೋನ್‌ಗಳು ಕಾಣಿಸಿಕೊಂಡವು, ಜನವರಿ 11 ಮತ್ತು 12ರಂದು 2ರಿಂದ 3 ಡ್ರೋನ್‌ಗಳು ಕಾಣಿಸಿಕೊಂಡವು ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ