ಡ್ರಗ್ಸ್ ಸಾಗಣೆಯಾಗುತ್ತಿದ್ದ ದೋಣಿ ವಶಕ್ಕೆ ಪಡೆದ ಭಾರತ; 14 ಮಂದಿ ಪಾಕಿಸ್ತಾನೀಯರ ಬಂಧನ

14 Pakistani nationals arrested by Indian coast guard: ಗುಜರಾತ್ ಕರಾವಳಿ ತೀರದ ಆಚೆ ಪಾಕಿಸ್ತಾನದಿಂದ ಡ್ರಗ್ಸ್ ಹೊತ್ತು ಭಾರತದತ್ತ ಬರುತ್ತಿದ್ದ ದೋಣಿಯೊಂದನ್ನು ಭಾರತದ ಕರಾವಳಿ ಕಾವಲುಪಡೆ ತಂಡ ತಡೆದಿದೆ. ದೋಣಿಯಲ್ಲಿದ್ದ 14 ಮಂದಿ ಪಾಕ್ ನಾಗರಿಕರನ್ನು ಬಂಧಿಸಲಾಗಿದೆ. 86 ಕಿಲೋ ನಾರ್ಕೋಟಿಕ್ಸ್ ಅನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಸದ್ಯ ಈ ದೋಣಿಯನ್ನು ಪೋರ್​ಬಂದರ್​ಗೆ ತರಲಾಗುತ್ತಿದ್ದು, ಆರೋಪಿಗಳನ್ನ ವಿಚಾರಣೆಗೆ ಒಳಪಡಿಸಲಾಗಲಿದೆ. ಗುಜರಾತ್ ಎಟಿಎಸ್, ಎನ್​ಸಿಬಿ ತಂಡಗಳೊಂದಿಗೆ ಸಮನ್ವಯತೆಯಲ್ಲಿ ಐಸಿಜಿ ಈ ಕಾರ್ಯಾಚರಣೆ ನಡೆಸಿತ್ತು.

ಡ್ರಗ್ಸ್ ಸಾಗಣೆಯಾಗುತ್ತಿದ್ದ ದೋಣಿ ವಶಕ್ಕೆ ಪಡೆದ ಭಾರತ; 14 ಮಂದಿ ಪಾಕಿಸ್ತಾನೀಯರ ಬಂಧನ
ಕರಾವಳಿ ಕಾವಲು ಪಡೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 28, 2024 | 5:23 PM

ನವದೆಹಲಿ, ಏಪ್ರಿಲ್ 28: ಗುಜರಾತ್ ಕರಾವಳಿ ಆಚೆಗಿನ ಸಾಗರ ಗಡಿಭಾಗದಲ್ಲಿ ಸಾಗಿ ಬರುತ್ತಿದ್ದ ಪಾಕಿಸ್ತಾನದ ದೋಣಿಯೊಂದನ್ನು ಭಾರತದ ಕರಾವಳಿ ಕಾವಲು ಪಡೆ (ICG- Indian coast guard) ವಶಕ್ಕೆ ತೆಗೆದುಕೊಂಡಿದೆ. 600 ಕೋಟಿ ರೂ ಮೌಲ್ಯದ, 86 ಕಿಲೋ ಮಾದಕವಸ್ತುಗಳನ್ನು (narcotics) ಜಫ್ತಿ ಮಾಡಲಾಗಿದೆ ಎಂಬ ಮಾಹಿತಿಯನ್ನು ಐಸಿಜಿ ಭಾನುವಾರ ನೀಡಿದೆ. ಗುಪ್ತಚರ ಮಾಹಿತಿಯೊಂದರ ಮೇರೆಗೆ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್), ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್​ಸಿಬಿ) ಮತ್ತು ಕರಾವಳಿ ಕಾವಲು ಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದಿಂದ ಭಾರತಕ್ಕೆ ನಾರ್ಕೋಟಿಕ್ಸ್ ಸಾಗಿಸುತ್ತಿದ್ದ ದೋಣಿಯನ್ನು ತಡೆದು ನಿಲ್ಲಿಸಿವೆ. ದೋಣಿಯಲ್ಲಿದ್ದ 14 ಮಂದಿ ಪಾಕ್ ನಾಗರಿಕರು ಮತ್ತು ಡ್ರಗ್ಸ್ ಅನ್ನು ಭಾರತದ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿವೆ.

ಕರಾವಳಿ ಕಾವಲು ಪಡೆಯ ರಾಜರತ್ನಂ ಹಡಗನ್ನು ಕಾರ್ಯಾಚರಣೆಗೆ ಬಳಸಲಾಗಿದೆ. ಐಸಿಜಿ, ಗುಜರಾತ್ ಎಟಿಎಸ್ ಮತ್ತು ಎನ್​ಸಿಬಿ ತಂಡಗಳು ಜಂಟಿಯಾಗಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ಗುಜರಾತ್​ನ ಪೋರಬಂದರ್​ನ ಪಶ್ಚಿಮಕ್ಕೆ ಅರೇಬಿಯನ್ ಸಾಗರಲ್ಲಿ ಪಾಕಿಸ್ತಾನೀ ದೋಣಿಯನ್ನು ಹಿಡಿಯಲಾಯಿತು. ಇದರಲ್ಲಿ 14 ಮಂದಿ ಪಾಕಿಸ್ತಾನೀಯರು, 600 ಕೋಟಿ ರೂ ಮೌಲ್ಯದ 86 ಕಿಲೋ ನಾರ್ಕೋಟಿಕ್ಸ್ ಅನ್ನು ಜಫ್ತಿ ಮಾಡಲಾಯಿತು,’ ಎಂದು ಇಂಡಿಯನ್ ಕೋಸ್ಟಲ್ ಗಾರ್ಡ್ ತನ್ನ ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ ಪೋಸ್ಟ್ ಮಾಡಿದೆ.

ಇದನ್ನೂ ಓದಿ: ಗಾಜಿಯಾಬಾದ್: ಮಗಳ ಪ್ರಿಯಕರನನ್ನು ಹತ್ಯೆ ಮಾಡಿದ ನಿವೃತ್ತ ಬಿಎಸ್​ಎಫ್​ ಯೋಧ

ಈ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದ ಡ್ರಗ್ ಸಿಂಡಿಕೇಟ್​ಗೆ ಈ ಬೆಳವಣಿಗೆ ಹೊಡೆತ ಕೊಟ್ಟಿದೆ. ಹಡಗು ಮತ್ತು ವಿಮಾನಗಳ ಸಮನ್ವಯತೆಯೊಂದಿಗೆ ಇಂಡಿಯನ್ ಕೋಸ್ಟ್ ಗಾರ್ಡ್ ಪರಿಣಾಮಕಾರಿ ಕಾರ್ಯಾಚರಣೆ ಕೈಗೊಂಡು ಡ್ರಗ್ಸ್ ಸಾಗಣೆ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ ಎಂದೂ ಐಸಿಜಿ ಹೇಳಿದೆ.

ಸಮುದ್ರದ ಮೂಲಕ ಪಾಕಿಸ್ತಾನದಿಂದ ಭಾರತಕ್ಕೆ ಡ್ರಗ್ಸ್ ಸಾಗಣೆ ಆಗುತ್ತಿದೆ ಎಂದು ಗುಪ್ತಚರರಿಂದ ಮಾಹಿತಿ ಬಂದಿದ್ದು ಅದರ ಮೇರೆಗೆ ವಿವಿಧ ಇಲಾಖೆಗಳು ಸಮನ್ವಯತೆಯೊಂದಿಗೆ ಕಾರ್ಯಾಚರಣೆ ನಡೆಸಿದ್ದವು. ಪಾಕಿಸ್ತಾನದ ದೋಣಿ ತಪ್ಪಿಸಿಕೊಂಡು ಹೋಗಲು ಯತ್ನಿಸಿತಾದರೂ ಐಸಿಜಿ ಈ ದೋಣಿಯನ್ನು ಹಿಡಿಯುವಲ್ಲಿ ಸಫಲವಾಯಿತು.

ಇದನ್ನೂ ಓದಿ: ದೆಹಲಿ ವಿಮಾನ ನಿಲ್ದಾಣದಲ್ಲಿ ನಕಲಿ ಪೈಲಟ್​ನ ಬಂಧನ

ವಶಪಡಿಸಿಕೊಳ್ಳಲಾದ ದೋಣಿಯನ್ನು ಗುಜರಾತ್​ನ ಪೋರ್​ಬಂದರ್​ಗೆ ತರಲಾಗುತ್ತಿದೆ. ಅದರಲ್ಲಿರುವ 86 ಕಿಲೋ ಡ್ರಗ್ಸ್ ಹಾಗೂ 14 ಪಾಕ್ ನಾಗರಿಕರನ್ನೂ ಜೊತೆಯಲ್ಲಿ ತರಲಾಗುತ್ತಿದ್ದು, ಆರೋಪಿಗಳ ವಿಚಾರಣೆ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ