ವೆನೆಜುವೆಲಾದಲ್ಲಿ ಭಾರತೀಯ ನಾವಿಕನ ನಿಗೂಢ ಸಾವು; ಶವದಲ್ಲಿ ಹೃದಯ, ಮೆದುಳು, ಶ್ವಾಸಕೋಶಗಳೇ ಇಲ್ಲ ಎಂದ ಕುಟುಂಬಸ್ಥರು!

ವೆನೆಜುವೆಲಾದಲ್ಲಿ ಮೃತಪಟ್ಟ ಭಾರತೀಯ ನಾವಿಕನ ಸಾವಿನ ಪ್ರಕರಣವು ಭೀಕರ ತಿರುವು ಪಡೆದುಕೊಂಡಿದೆ. ಭಾರತದಲ್ಲಿ ನಡೆಸಲಾದ ಎರಡನೇ ಮರಣೋತ್ತರ ಪರೀಕ್ಷೆಯಲ್ಲಿ ಆತನ ದೇಹದ ಹಲವು ಆಂತರಿಕ ಅಂಗಾಂಗಗಳು ನಾಪತ್ತೆಯಾಗಿರುವುದು ಪತ್ತೆಯಾಗಿದೆ. ಮರ್ಚೆಂಟ್ ನೇವಿ ಹಡಗಿನಲ್ಲಿ ಕೆಲಸ ಮಾಡುತ್ತಿದ್ದ ಚೌಹಾಣ್, ಕಳೆದ ಮೇ ತಿಂಗಳಲ್ಲಿ ವೆನೆಜುವೆಲಾದಲ್ಲಿ ಹೃದಯಾಘಾತದಿಂದ ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅವರ ಮೃತದೇಹವನ್ನು ಭಾರತಕ್ಕೆ ಮರಳಿ ಕಳುಹಿಸಿದಾಗ, ಸಾವಿಗೆ ಕಾರಣವನ್ನು ವಿವರಿಸುವ ಯಾವುದೇ ಶವಪರೀಕ್ಷೆಯ ವರದಿ ಅಥವಾ ಅಧಿಕೃತ ವಿವರಗಳನ್ನು ನೀಡಲಾಗಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ವೆನೆಜುವೆಲಾದಲ್ಲಿ ಭಾರತೀಯ ನಾವಿಕನ ನಿಗೂಢ ಸಾವು; ಶವದಲ್ಲಿ ಹೃದಯ, ಮೆದುಳು, ಶ್ವಾಸಕೋಶಗಳೇ ಇಲ್ಲ ಎಂದ ಕುಟುಂಬಸ್ಥರು!
Rakesh Chauhan
Image Credit source: TV9

Updated on: Jul 01, 2026 | 3:33 PM

ಮುಖ್ಯಾಂಶಗಳು

  • ಕೊನೆಗೂ ಭಾರತಕ್ಕೆ ಬಂದಿತು ವೆನೆಜುವೆಲಾದಲ್ಲಿ ಮೃತಪಟ್ಟ ನಾವಿಕನ ಶವ
  • ಆ ಶವದಲ್ಲಿ ಅಂಗಾಂಗಳೇ ಮಾಯವಾಗಿತ್ತು
  • ಹೃದಯ, ಮೆದುಳು, ಶ್ವಾಸಕೋಶಗಳಿಲ್ಲದ ಶವ ಕಳುಹಿಸಿದ ವೆನೆಜುವೆಲಾ

ನವದೆಹಲಿ, ಜುಲೈ 1: ವೆನೆಜುವೆಲಾದಲ್ಲಿ (Venezuela) ನಿಗೂಢವಾಗಿ ಸಾವನ್ನಪ್ಪಿದ 33 ವರ್ಷದ ಭಾರತೀಯ ನಾವಿಕನ (ನೌಕಾಪಡೆಯ ಉದ್ಯೋಗಿ) ಮೃತದೇಹವು ಭಾರತಕ್ಕೆ ತಲುಪಿದ ನಂತರ ಭೀಕರ ಸತ್ಯವೊಂದು ಬೆಳಕಿಗೆ ಬಂದಿದೆ. ಮೃತ ನಾವಿಕನ ದೇಹದಲ್ಲಿ ಹೃದಯ, ಮೆದುಳು ಮತ್ತು ಶ್ವಾಸಕೋಶಗಳು ಸೇರಿದಂತೆ ಪ್ರಮುಖ ಅಂಗಾಗಗಳೇ ನಾಪತ್ತೆಯಾಗಿವೆ ಎಂದು ಕುಟುಂಬಸ್ಥರು ಗಂಭೀರವಾಗಿ ಆರೋಪಿಸಿದೆ. ಈ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ.

ಅಲ್ಲದೆ, ದೇಹದ ಮೇಲೆ ವ್ಯಾಪಕವಾದ ಹೊಲಿಗೆಗಳಿದ್ದವು. ಕತ್ತಿನಿಂದ ಪ್ಯುಬಿಕ್ ಸಿಂಫಿಸಿಸ್‌ವರೆಗೆ (ಹೊಟ್ಟೆಯ ಕೆಳಭಾಗ) 22 ಹೊಲಿಗೆಗಳು ಮತ್ತು ಒಂದು ಕಿವಿಯಿಂದ ಇನ್ನೊಂದು ಕಿವಿಯವರೆಗೆ 21 ಹೊಲಿಗೆಗಳನ್ನು ಹಾಕಲಾಗಿತ್ತು ಎಂದು 2ನೇ ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗವಾಗಿದೆ. ಮೃತದೇಹವನ್ನು ಸುಮಾರು ಒಂದು ತಿಂಗಳ ಕಾಲ ಕೋಲ್ಡ್ ಸ್ಟೋರೇಜ್‌ನಲ್ಲಿ ಇಡಲಾಗಿತ್ತು. ಸಾವಿಗೆ ಮುನ್ನ ಸಂಭವಿಸಿದ ಯಾವುದೇ ಗಾಯಗಳು ದೇಹದ ಮೇಲಿರಲಿಲ್ಲ. ಎಲ್ಲಾ ಆಂತರಿಕ ಅಂಗಗಳು ನಾಪತ್ತೆಯಾಗಿದ್ದರಿಂದ ಸಾವಿಗೆ ನಿಖರವಾದ ಕಾರಣವನ್ನು ನಿರ್ಧರಿಸಲು ಸಾಧ್ಯವಾಗಲಿಲ್ಲ ಎಂದು ವರದಿ ತಿಳಿಸಿದೆ. ವಿದೇಶದಲ್ಲಿ ಭಾರತೀಯ ಕಾರ್ಮಿಕರನ್ನು ನಡೆಸಿಕೊಳ್ಳುವ ವಿಧಾನ ಮತ್ತು ಸಂಬಂಧಪಟ್ಟ ವಿದೇಶಿ ಅಧಿಕಾರಿಗಳ ಜವಾಬ್ದಾರಿಯ ಬಗ್ಗೆ ಈ ಘಟನೆಯು ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ಇದನ್ನೂ ಓದಿ: ವೆನೆಜುವೆಲಾ ದರೋಡೆಕೋರನ ಮೇಲಿನ ವೈಮಾನಿಕ ದಾಳಿಯ ವಿಡಿಯೋ ಹಂಚಿಕೊಂಡ ಟ್ರಂಪ್

ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯ ನಿವಾಸಿಯಾದ ರಾಕೇಶ್ ಚೌಹಾಣ್ ಅವರ ಕುಟುಂಬಸ್ಥರು ಈ ನಿಗೂಢ ಸಾವಿನ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ. ವಾಣಿಜ್ಯ ಹಡಗಿನಲ್ಲಿ ಕೆಲಸ ಮಾಡುತ್ತಿದ್ದ ಇವರು ವೆನೆಜುವೆಲಾ ಕರಾವಳಿಯ ಬಳಿ ಇದ್ದಾಗ ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂದು ಹಡಗಿನ ಕಂಪನಿಯು ಕುಟುಂಬಕ್ಕೆ ಮಾಹಿತಿ ನೀಡಿತ್ತು. ಪ್ರಾಥಮಿಕ ವರದಿಗಳಲ್ಲಿ ಇದು ನೈಸರ್ಗಿಕ ಸಾವು ಅಥವಾ ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಲಾಗಿತ್ತು ಎನ್ನಲಾಗಿದೆ. ಆದರೆ, ಕಾನೂನು ಪ್ರಕ್ರಿಯೆಗಳು ಮತ್ತು ದೀರ್ಘಕಾಲದ ಕಾಯುವಿಕೆಯ ನಂತರ ನಾವಿಕನ ಮೃತದೇಹವನ್ನು ಭಾರತಕ್ಕೆ ತಾಯ್ನಾಡಿಗೆ ತಂದಾಗ ಅಸಲಿ ಕತೆ ಶುರುವಾಗಿದೆ.


ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದ್ದೇನು?:

ವೆನೆಜುವೆಲಾದಲ್ಲಿ ನಡೆದ ತನಿಖೆಯ ಬಗ್ಗೆ ತೃಪ್ತಿಯಿಲ್ಲದ ಕಾರಣ ಮತ್ತು ಸಾವಿನ ಬಗ್ಗೆ ಅನುಮಾನಗಳಿದ್ದರಿಂದ ಆ ನಾವಿಕನ ಕುಟುಂಬಸ್ಥರು ಭಾರತಕ್ಕೆ ಶವ ಬಂದ ತಕ್ಷಣ ಇಲ್ಲಿನ ಆಸ್ಪತ್ರೆಯಲ್ಲಿ ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸುವಂತೆ ವಿನಂತಿಸಿದರು. ಭಾರತದ ವೈದ್ಯರು ಶವ ಪರೀಕ್ಷೆ ನಡೆಸಿದಾಗ ಅವರಿಗೆ ಭಾರಿ ಆಘಾತ ಕಾದಿತ್ತು. ಮೃತದೇಹದ ಒಳಗಿನ ಪ್ರಮುಖ ಅಂಗಗಳಾದ ಹೃದಯ, ಮೆದುಳು ಮತ್ತು ಶ್ವಾಸಕೋಶಗಳು ನಾಪತ್ತೆಯಾಗಿದ್ದವು. ವೈದ್ಯಕೀಯ ವರದಿಯಲ್ಲಿ ಈ ಅಂಗಗಳು ದೇಹದಲ್ಲಿ ಇರಲಿಲ್ಲ ಎಂಬುದು ದೃಢಪಟ್ಟಿದೆ.

ಇದನ್ನೂ ಓದಿ: ವೆನೆಜುವೆಲಾದಲ್ಲಿ ಪ್ರಬಲ ಭೂಕಂಪಗಳು; 164 ಜನ ಸಾವು, 971 ಜನರಿಗೆ ಗಂಭೀರ ಗಾಯ

ಅಂಗಾಂಗ ಕಳ್ಳಸಾಗಣೆ ದಂಧೆಯ ಶಂಕೆ:

ಈ ಆಘಾತಕಾರಿ ಬೆಳವಣಿಗೆಯಿಂದ ಕಂಗಾಲಾಗಿರುವ ಕುಟುಂಬಸ್ಥರು, ತಮ್ಮ ಮಗನನ್ನು ವೆನೆಜುವೆಲಾದಲ್ಲಿ ಕೊಲೆ ಮಾಡಲಾಗಿದೆ, ಅಂತಾರಾಷ್ಟ್ರೀಯ ಅಂಗಾಂಗಗಳ ಕಳ್ಳಸಾಗಣೆ ದಂಧೆಗೆ ಆತ ಬಲಿಯಾಗಿದ್ದಾನೆ ಎಂದು ಆರೋಪಿಸಿದ್ದಾರೆ. “ಯಾವುದೇ ಅಂಗಾಗಗಳಿಲ್ಲದೆ ಕೇವಲ ಖಾಲಿ ದೇಹವನ್ನು ನಮಗೆ ಕಳುಹಿಸಿಕೊಡಲಾಗಿದೆ. ಆತನ ಸಾವಿಗೆ ನಿಜವಾದ ಕಾರಣವೇನು ಎಂದು ತಿಳಿಯಲು ನಮಗೆ ಈಗ ಯಾವುದೇ ಪುರಾವೆಗಳೂ ಸಿಗದಂತೆ ಮಾಡಲಾಗಿದೆ” ಎಂದು ಕುಟುಂಬದ ಸದಸ್ಯರು ಕಣ್ಣೀರಿಟ್ಟಿದ್ದಾರೆ.

ಭಾರತ ಸರ್ಕಾರದ ಹಸ್ತಕ್ಷೇಪಕ್ಕೆ ಆಗ್ರಹ:

ನಾವಿಕನ ಕುಟುಂಬಸ್ಥರು ಈ ವಿಷಯದಲ್ಲಿ ಭಾರತದ ವಿದೇಶಾಂಗ ಸಚಿವಾಲಯ (MEA) ಮತ್ತು ವೆನೆಜುವೆಲಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ. ಹಡಗಿನ ಆಡಳಿತ ಮಂಡಳಿ, ಅಲ್ಲಿನ ಸ್ಥಳೀಯ ಆಸ್ಪತ್ರೆ ಮತ್ತು ವೆನೆಜುವೆಲಾ ಸರ್ಕಾರದ ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ. ಸದ್ಯಕ್ಕೆ ಈ ವಿಷಯದ ಕುರಿತು ಭಾರತೀಯ ತನಿಖಾ ಸಂಸ್ಥೆಗಳು ಮತ್ತು ವಿದೇಶಾಂಗ ಇಲಾಖೆಯು ವೆನೆಜುವೆಲಾದ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us