
ಭವಿಷ್ಯದ ದಿನಗಳಲ್ಲಿ ಮನೆಯ ಕೆಲಸಗಳನ್ನು ಸುಲಭವಾಗಿ ನಿಭಾಯಿಸಬಲ್ಲ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಚಾಲಿತ ರೋಬೋಟ್‌ಗಳ ಅಭಿವೃದ್ಧಿಯಲ್ಲಿ ಭಾರತೀಯರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ತಲೆಗೆ ಸ್ಮಾರ್ಟ್‌ಫೋನ್ ಅಥವಾ ಕ್ಯಾಮೆರಾ ಕಟ್ಟಿಕೊಂಡು ದೈನಂದಿನ ಕೆಲಸಗಳನ್ನು ವಿಡಿಯೋ ರೂಪದಲ್ಲಿ ದಾಖಲಿಸುವ ಮೂಲಕ ಮಹಿಳೆಯರು ರೋಬೋಟ್‌ಗಳಿಗೆ ಮನುಷ್ಯರಂತೆ ಕೆಲಸ ಮಾಡುವ ತರಬೇತಿ ನೀಡುತ್ತಿದ್ದಾರೆ.
ಅಲ್ ಜಜೀರಾ ವರದಿಯ ಪ್ರಕಾರ, ತಮಿಳುನಾಡಿನ ರಾಜಧಾನಿ ಚೆನ್ನೈನ ಗೃಹಿಣಿಯೊಬ್ಬರು ಅಡುಗೆ ಮನೆಯಲ್ಲಿನ ತಮ್ಮ ದಿನನಿತ್ಯದ ಕೆಲಸಗಳನ್ನು ತಲೆಗೆ ಫೋನ್ ಕಟ್ಟಿಕೊಂಡೇ ವಿಡಿಯೋ ಮಾಡುತ್ತಿದ್ದಾರೆ. ಒಂದು ಗಂಟೆಯ ವಿಡಿಯೋ ರೆಕಾರ್ಡಿಂಗ್‌ಗೆ ಅವರಿಗೆ ₹250 (ಸುಮಾರು 2.6 ಡಾಲರ್) ಪಾವತಿಸಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, “ಮನೆಯ ಕೆಲಸಗಳನ್ನು ಮಾಡುತ್ತಾ ವಿಡಿಯೋ ರೆಕಾರ್ಡ್ ಮಾಡಲು ಗಂಟೆಗೆ ₹250 ನೀಡುತ್ತಾರೆ ಎಂದರೆ ಯಾರಿಗೆ ಇಷ್ಟವಾಗುವುದಿಲ್ಲ? ಭವಿಷ್ಯದಲ್ಲಿ ಇದೇ ಹಣದಿಂದ ನಾನು ಒಂದು ರೋಬೋಟ್ ಖರೀದಿಸಿದರೂ ಆಶ್ಚರ್ಯವಿಲ್ಲ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯ ವಿಡಿಯೋಗಳಂತೆ ಕಾಣುವ ಈ ದೃಶ್ಯಗಳು ಜಾಗತಿಕ ಟೆಕ್ ಕಂಪನಿಗಳಿಗೆ ಅತ್ಯಮೂಲ್ಯ ಡೇಟಾವಾಗಿ ಪರಿಣಮಿಸಿವೆ. ಮಹಿಳೆಯರು ಸರಿಯಾಗಿ ವಿಡಿಯೋ ರೆಕಾರ್ಡ್ ಮಾಡದಿದ್ದರೆ, ಆ್ಯಪ್‌ನಲ್ಲಿ “Hands Not Detected” ಎಂಬ ಎಚ್ಚರಿಕೆ ಸಂದೇಶ ಕೂಡ ಬರುತ್ತದೆ. ಮನುಷ್ಯರ ಕೈಗಳ ಚಲನೆ, ಕೆಲಸ ಮಾಡುವ ವಿಧಾನ ಹಾಗೂ ವಸ್ತುಗಳನ್ನು ಬಳಸುವ ರೀತಿಯನ್ನು ರೋಬೋಟ್‌ಗಳು ಈ ವಿಡಿಯೋಗಳ ಮೂಲಕ ಕಲಿಯುತ್ತವೆ. ಈ ಮಾಹಿತಿಯನ್ನು ಭಾರತ ಹಾಗೂ ಅಮೆರಿಕದಲ್ಲಿ ಕಚೇರಿಗಳನ್ನು ಹೊಂದಿರುವ ಪ್ರಮುಖ ಎಐ ಡೇಟಾ ಕಂಪನಿಗಳಿಗೆ ವಿಶೇಷ ಆ್ಯಪ್ ಮೂಲಕ ರವಾನಿಸಲಾಗುತ್ತಿದೆ.
ಇದನ್ನೂ ಓದಿ ಅಹಮದಾಬಾದ್ ಏರ್ ಇಂಡಿಯಾ ವಿಮಾನ ಪತನಕ್ಕೆ ಕೊನೆಗೂ ಕಾರಣ ಪತ್ತೆ: ಪ್ರಾಥಮಿಕ ವರದಿಯಲ್ಲಿ ಆಘಾತಕಾರಿ ಅಂಶ
ಹ್ಯೂಮನಾಯ್ಡ್ (ಮನುಷ್ಯರಂತಿರುವ) ರೋಬೋಟ್‌ಗಳ ಮಾರುಕಟ್ಟೆ ಪ್ರಸ್ತುತ ವೇಗವಾಗಿ ವಿಸ್ತರಿಸುತ್ತಿದೆ. ಅಂದಾಜುಗಳ ಪ್ರಕಾರ, 2050ರ ವೇಳೆಗೆ ವಿಶ್ವದಾದ್ಯಂತ 100 ಕೋಟಿಗೂ ಹೆಚ್ಚು ರೋಬೋಟ್‌ಗಳು ಬಳಕೆಗೆ ಬರಲಿವೆ. ಇವುಗಳಲ್ಲಿ ಬಹುತೇಕ ರೋಬೋಟ್‌ಗಳನ್ನು ಕೈಗಾರಿಕೆ, ವಾಣಿಜ್ಯ ಹಾಗೂ ಸೇವಾ ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ.
ಚೆನ್ನೈನ ಗೃಹಿಣಿ ಮಾತ್ರವಲ್ಲದೆ, ಬೆಂಗಳೂರಿನಲ್ಲಿ ಕಳೆದ ಹತ್ತು ವರ್ಷಗಳಿಂದ ರಸ್ತೆ ಬದಿಯಲ್ಲಿ ಹೂವಿನ ಹಾರಗಳನ್ನು ಕಟ್ಟುವ 55 ವರ್ಷದ ಪೊನ್ನಿ ಎಂಬ ಮಹಿಳೆಯೂ ತಲೆಗೆ ಫೋನ್ ಕಟ್ಟಿಕೊಂಡು ಹೂ ಕಟ್ಟುವ ವಿಡಿಯೋಗಳನ್ನು ಮಾಡಿ ಸಂಭಾವನೆ ಪಡೆಯುತ್ತಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:27 pm, Sat, 13 June 26