ಕೊವಿಡ್ ಲಸಿಕೆ ನೀಡಿಕೆಯಲ್ಲಿ 200 ಕೋಟಿ ಮೈಲುಗಲ್ಲು ದಾಟಿದ ಭಾರತ

| Updated By: ರಶ್ಮಿ ಕಲ್ಲಕಟ್ಟ

Updated on: Jul 17, 2022 | 12:45 PM

Covid-19 vaccination ಕಳೆದ ವರ್ಷ ಸೆಪ್ಟೆಂಬರ್ 17ರಂದು ಒಂದೇ ದಿನ 2.5 ಕೋಟಿ ಲಸಿಕೆ ನೀಡಲಾಗಿದ್ದು, ಇದು ಇಲ್ಲಿಯವರೆಗೆ ಅತೀ ಹೆಚ್ಚು ಲಸಿಕೆ ನೀಡಿದ ದಿನವಾಗಿದೆ

ಕೊವಿಡ್ ಲಸಿಕೆ ನೀಡಿಕೆಯಲ್ಲಿ 200 ಕೋಟಿ ಮೈಲುಗಲ್ಲು ದಾಟಿದ ಭಾರತ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: 2021 ಜನವರಿ 16ರಂದು ದೇಶದಲ್ಲಿ ಕೋವಿಡ್-19 ಲಸಿಕೆ (Covid-19 vaccination) ನೀಡಿಕೆ ಆರಂಭವಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಅಂದರೆ 18 ತಿಂಗಳ ಅವಧಿಯಲ್ಲಿ ಭಾರತದಲ್ಲಿ 200 ಕೋಟಿ ಡೋಸ್ ಕೋವಿಡ್ ಲಸಿಕೆ ಡೋಸ್ ನೀಡಲಾಗಿದೆ. ಶನಿವಾರದ ರಾತ್ರಿವರೆಗೆ 199.97 ಕೋಟಿ ಕೋವಿಡ್ (Covid-19) ಲಸಿಕೆ ನೀಡಲಾಗಿದ್ದು ಇದರಲ್ಲಿ 5.48 ಕೋಟಿ ಮುಂಜಾಗ್ರತಾ ಲಸಿಕೆ ಸೇರಿದೆ. 100 ಕೋಟಿ ಡೋಸ್ ಲಸಿಕೆ ನೀಡಲು 277 ದಿನಗಳು ಬೇಕಾಯಿತು. ಕಳೆದ ವರ್ಷ ಸೆಪ್ಟೆಂಬರ್ 17ರಂದು ಒಂದೇ ದಿನ 2.5 ಕೋಟಿ ಲಸಿಕೆ ನೀಡಲಾಗಿದ್ದು, ಇದು ಇಲ್ಲಿಯವರೆಗೆ ಅತೀ ಹೆಚ್ಚು ಲಸಿಕೆ ನೀಡಿದ ದಿನವಾಗಿದೆ. CoWIN ಪ್ರಕಾರ ದೇಶದಾದ್ಯಂತ 14,000ಕ್ಕಿಂತಲೂ ಹೆಚ್ಚು ಸ್ಥಳಗಳಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತದೆ. ದೇಶದಲ್ಲಿ ಶೇ 96ರಷ್ಟು ಜನರು ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದು, ಶೇ 87ರಷ್ಟು ಮಂದಿ ಎರಡೂ ಡೋಸ್ ಪಡೆದಿದ್ದಾರೆ. ಅವರ್ ವರ್ಲ್ಡ್ ಇನ್ ಡೇಟಾದ (Our World in Data) ಪ್ರಕಾರ ಜಗತ್ತಿನ ಶೇ 62.1 ಜನರು ಎರಡೂ ಲಸಿಕೆಗಳನ್ನು ಪಡೆದಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯವು ಈ ವಾರ 18 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಜನರಿಗೆ ದೇಶದಾದ್ಯಂತ ಉಚಿತ ಮುಂಜಾಗ್ರತಾ ಡೋಸ್ ನೀಡಲು 75 ದಿನಗಳ ಲಸಿಕೆ ಅಭಿಯಾನ ಆರಂಭಿಸಿದೆ. ಇಲ್ಲಿಯವರೆಗೆ 18-58ರ ನಡುವಿನ ವಯಸ್ಸಿನ 77.10 ಕೋಟಿ ಜನಸಂಖ್ಯೆಯಲ್ಲಿ ಶೇ 1ಕ್ಕಿಂತ ಕಡಿಮೆ ಜನರು ಬೂಸ್ಟರ್ ಡೋಸ್ ಪಡೆದಿದ್ದಾರೆ .


ಆರೋಗ್ಯ ಸಚಿವಾಲಯವು ಕಳೆದ ವಾರ ಎರಡನೇ ಡೋಸ್ ಮತ್ತು ಬೂಸ್ಟರ್ ಡೋಸ್ ನ ಅಂತರವನ್ನು 9 ತಿಂಗಳಿನಿಂದ 6 ತಿಂಗಳಿಗೆ ಇಳಿಸಿತ್ತು. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಭಾರತದಲ್ಲಿನ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 1,43,449 ಆಗಿದೆ.

Published On - 12:43 pm, Sun, 17 July 22