IndiGo: ತಾಂತ್ರಿಕ ವೈಫಲ್ಯದಿಂದ ಕರಾಚಿಯಲ್ಲಿ ಇಂಡಿಗೊ ವಿಮಾನ ತುರ್ತು ಭೂಸ್ಪರ್ಶ: ಪ್ರಯಾಣಿಕರು ಸುರಕ್ಷಿತ
‘ಇಂಡಿಗೊ ವಿಮಾನಯಾನ ಸಂಸ್ಥೆಯ 6E-1406 ವಿಮಾನವು ಶಾರ್ಜಾದಿಂದ ಹೈದರಾಬಾದ್ಗೆ ಬರಬೇಕಿತ್ತು‘.
ದೆಹಲಿ: ಶಾರ್ಜಾದಿಂದ ಹೈದರಾಬಾದ್ಗೆ ಬರಬೇಕಿದ್ದ ‘ಇಂಡಿಗೊ’ (IndiGo) ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ (Karachi) ತುರ್ತು ಭೂಸ್ಪರ್ಶ ಮಾಡಿತು. ಎಲ್ಲ ಪ್ರಯಾಣಿಕರು ಕ್ಷೇಮವಾಗಿದ್ದಾರೆ. ತಾಂತ್ರಿಕ ಸಮಸ್ಯೆ ಇರುವ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೈದರಾಬಾದ್ಗೆ (Hyderabad) ಕರೆತರಲು ಮತ್ತೊಂದು ವಿಮಾನವನ್ನು ಕಳಿಸಲಾಗುವುದು ಎಂದು ಇಂಡಿಗೊ ಹೇಳಿದೆ.
‘ಇಂಡಿಗೊ ವಿಮಾನಯಾನ ಸಂಸ್ಥೆಯ 6E-1406 ವಿಮಾನವು ಶಾರ್ಜಾದಿಂದ ಹೈದರಾಬಾದ್ಗೆ ಬರಬೇಕಿತ್ತು. ತಾಂತ್ರಿಕ ವೈಫಲ್ಯವನ್ನು ಪೈಲಟ್ ಗುರುತಿಸಿದ ಹಿನ್ನೆಲೆಯಲ್ಲಿ ವಿಮಾನವನ್ನು ತಕ್ಷಣ ಕರಾಚಿಗೆ ಕೊಂಡೊಯ್ಯುವಂತೆ ಸೂಚಿಸಲಾಯಿತು’ ಎಂದು ಇಂಡಿಗೊ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ವಿಮಾನದ 2ನೇ ಎಂಜಿನ್ನ (ಬಲಗಡೆಯ ಎಂಜಿನ್) ಕಾರ್ಯಾಚರಣೆ ವ್ಯವಸ್ಥೆಯಲ್ಲಿ ವೈಫಲ್ಯ ಎದುರಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕರಾಚಿಯಲ್ಲಿ ಇಳಿಸಲಾಗಿದೆ ಎಂದು ಕೇಂದ್ರ ಸರ್ಕಾರದ ನಾಗರಿಕ ವಿಮಾನಯಾನ ಖಾತೆ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ಎನ್ಡಿಟಿವಿ ವರದಿ ಮಾಡಿದೆ. ಕಳೆದ ಎರಡು ವಾರಗಳಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ತಾಂತ್ರಿಕ ವೈಫಲ್ಯದ ಕಾರಣಕ್ಕೆ ಲ್ಯಾಂಡ್ ಆದ ಎರಡನೇ ವಿಮಾನ ಇದು.
IndiGo flight 6E-1406, operating from Sharjah to Hyderabad was diverted to Karachi. The pilot observed a technical defect: Indigo airlines statement
— Sidhant Sibal (@sidhant) July 17, 2022
ಈ ತಿಂಗಳ ಆರಂಭದಲ್ಲಿ ದೆಹಲಿಯಿಂದ ದುಬೈಗೆ ತೆರಳುತ್ತಿದ್ದ ಸ್ಪೈಸ್ಜೆಟ್ ವಿಮಾನವು ಕಾಕ್ಪಿಟ್ನ ಇಂಡಿಕೇಟರ್ ಲೈಟ್ನಲ್ಲಿ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕರಾಚಿಗೆ ಮಾರ್ಗಬದಲಾವಣೆ ಮಾಡಿಕೊಂಡು, ಲ್ಯಾಂಡ್ ಆಗಿತ್ತು. ನಂತರ ಭಾರತದಿಂದ ಮತ್ತೊಂದು ವಿಮಾನವನ್ನು ಕಳಿಸಿ, 138 ಪ್ರಯಾಣಿಕರನ್ನು ದುಬೈಗೆ ತಲುಪಿಸಲಾಯಿತು. ಪರ್ಯಾಯ ವಿಮಾನಕ್ಕೆ ಟೇಕಾಫ್ ಆಗಲು ಅನುಮತಿ ನೀಡಲು ಪಾಕಿಸ್ತಾನ ಸರ್ಕಾರವು ಹಲವು ಗಂಟೆಗಳನ್ನು ತೆಗೆದುಕೊಂಡಿತ್ತು.
Published On - 10:34 am, Sun, 17 July 22