Criminal Justice System: ಬೇಕಾಬಿಟ್ಟಿ ಬಂಧನ, ಜಾಮೀನು ಪಡೆಯಲು ಅಡೆತಡೆ, ಪ್ರಕ್ರಿಯೆಯೇ ಶಿಕ್ಷೆ ಎಂದ ಸಿಜೆಐ ರಮಣ
‘ದೇಶದ ವಿವಿಧ ಜೈಲುಗಳಲ್ಲಿ ಇರುವ 6.10 ಲಕ್ಷ ಕೈದಿಗಳ ಪೈಕಿ ಶೇ 80ರಷ್ಟು ಜನರು ವಿಚಾರಣಾಧೀನ ಕೈದಿಗಳೇ ಆಗಿದ್ದಾರೆ’ ಎಂದು ಮುಖ್ಯ ನ್ಯಾಯಮೂರ್ತಿ ಸಿ.ವಿ.ರಮಣ ಹೇಳಿದರು.
ದೆಹಲಿ: ವಿಚಾರಣಾಧೀನ ಕೈದಿಗಳ ಸಂಖ್ಯೆ ಹೆಚ್ಚಾಗಲು ಕಾರಣ ಮತ್ತು ಅಪರಾಧ ನ್ಯಾಯಿಕ ಪ್ರಕ್ರಿಯೆಗಳಲ್ಲಿ ಆಗುತ್ತಿರುವ ಅಡೆತಡೆಗೆ ಪ್ರತೀಕಾರ ರೂಪದ ಬೇಕಾಬಿಟ್ಟಿ ಬಂಧನ, ಜಾಮೀನು ಪಡೆಯಲು ಇರುವ ಅಡೆತಡೆಯೇ ಮುಖ್ಯ ಕಾರಣ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (Chief Justice of India) ಸಿ.ವಿ.ರಮಣ (C.V.Ramana) ಹೇಳಿದರು. ವಿಚಾರಣೆಯೇ ಇಲ್ಲದೇ ಸುದೀರ್ಘ ಅವಧಿಗೆ ಬಂಧನದಲ್ಲಿ ಇರಿಸಲು ಕಾರಣವಾಗುವ ಅಂಶಗಳ ಬಗ್ಗೆಯೂ ಅವರು ಪ್ರಶ್ನಿಸಿದರು. ‘ಅಪರಾಧ ನ್ಯಾಯಿಕ ವ್ಯವಸ್ಥೆಯಲ್ಲಿ ನ್ಯಾಯದಾನದ ಪ್ರಕ್ರಿಯೇ ದಂಡನೆ ಎನ್ನುವಂತೆ ಆಗಿದೆ. ವಿಚಾರಣಾಧೀನ ಕೈದಿಗಳ ಬಗ್ಗೆ ತಕ್ಷಣ ಗಮನಹರಿಸಬೇಕಿದೆ. ದೇಶದ ವಿವಿಧ ಜೈಲುಗಳಲ್ಲಿ ಇರುವ 6.10 ಲಕ್ಷ ಕೈದಿಗಳ ಪೈಕಿ ಶೇ 80ರಷ್ಟು ಜನರು ವಿಚಾರಣಾಧೀನ ಕೈದಿಗಳೇ ಆಗಿದ್ದಾರೆ’ ಎಂದು ಹೇಳಿದರು.
ಜೈಪುರದಲ್ಲಿ ನಡೆಯುತ್ತಿರುವ 18ನೇ ಅಖಿಲ ಭಾರತ ಕಾನೂನು ಸೇವೆಗಳ ಪ್ರಾಧಿಕಾರದ (National Legal Service Authorities – (NALSA) ಪ್ರತಿನಿಧಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಅಪರಾಧ ನ್ಯಾಯಿಕ ಪ್ರಕ್ರಿಯೆಗೆ ವೇಗ ನೀಡಲು ಅನುವಾಗುವಂಥ ಕ್ರಮಗಳನ್ನು ಬೇಗನೇ ತೆಗೆದುಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.
ಜೈಲುಗಳನ್ನು ‘ಕಪ್ಪು ಪೆಟ್ಟಿಗೆ’ಗಳು ಎಂದು ವ್ಯಾಖ್ಯಾನಿಸಿದ ಅವರು, ಜೈಲುವಾಸವು ಒಂದೊಂದು ವರ್ಗದ ಜನರ ಮೇಲೆ ಒಂದೊಂದು ರೀತಿಯ ಪರಿಣಾಮ ಬೀರುತ್ತದೆ. ನಿಮ್ನ ವರ್ಗದ ಜನರ ಮೇಲೆ ಜೈಲುಗಳು ಉಂಟು ಮಾಡುವ ಪರಿಣಾಮ ಕೆಟ್ಟದಾಗಿರುತ್ತದೆ ಎಂದು ವಿಶ್ಲೇಷಿಸಿದರು. ವಿಚಾರಣೆಯೇ ಇಲ್ಲದೆ ವರ್ಷಗಟ್ಟಲೆ ಜೈಲುಗಳಲ್ಲಿ ಇರುವವರ ಸ್ಥಿತಿಗತಿಯ ಬಗ್ಗೆ ನಾವು ತುರ್ತಾಗಿ ಗಮನ ಹರಿಸಬೇಕಿದೆ. ವಿಚಾರಣಾಧೀನ ಕೈದಿಗಳನ್ನು ಬಿಡುಗಡೆ ಮಾಡುವುದಕ್ಕೆ ಮಾತ್ರ ನಮ್ಮ ಗುರಿಗಳು ಸೀಮಿತವಾಗಿರಬಾರದು. ಅವರು ವಿಚಾರಣೆ ಪ್ರಕ್ರಿಯೆಗೆ ಒಳಗಾಗದೇ ಸುದೀರ್ಘ ಅವಧಿಗೆ ಏಕೆ ಬಂಧನದಲ್ಲಿ ಇರಬೇಕಾಯಿತು ಎನ್ನುವುದನ್ನು ಪರಿಶೀಲಿಸಬೇಕಿ ಎಂದು ಸಲಹೆ ಮಾಡಿದರು.
ಈ ಸುದ್ದಿಯನ್ನು ಇಂಗ್ಲಿಷ್ನಲ್ಲಿ ಓದಲು ಲಿಂಕ್: ‘Process is punishment’ in our criminal justice system’
ಈ ನಿಟ್ಟಿನಲ್ಲಿ ಪೊಲೀಸರಿಗೆ ವಿಶೇಷ ತರಬೇತಿ ನೀಡಬೇಕಿದೆ. ಅಪರಾಧ ಪ್ರಕರಣಗಳನ್ನು ವೇಗವಾಗಿ ನಿರ್ವಹಿಸಲು ಹಾಲಿ ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ಸುಧಾರಿಸಬೇಕಿದೆ. ನಾವು ಹೇಗೆ ಸಹಕರಿಸಬಹುದು ಎಂದು ಕಾನೂನು ಸೇವೆಗಳ ಪ್ರಾಧಿಕಾರ ಸಲಹೆ ಮಾಡಬೇಕಿದೆ ಎಂದು ನುಡಿದರು. ಸಣ್ಣಪುಟ್ಟ ಸಿವಿಲ್ ವ್ಯಾಜ್ಯಗಳು ಮತ್ತು ಕೌಟುಂಬಿಕ ಕಲಹಗಳನ್ನು ಪರ್ಯಾಯ ಮಾರ್ಗಗಳ ಮೂಲಕ ಪರಿಹರಿಸಬಹುದು. ಕಾನೂನು ಪ್ರಾಧಿಕಾರ ಮತ್ತು ಲೋಕ ಅದಾಲತ್ಗಳ ಮಧ್ಯಸ್ಥಿಕೆಯಿಂದ ಹಲವು ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಮಧ್ಯಸ್ಥಿಕೆ ಮಾರ್ಗದ ಅನುಸರಣೆಯಿಂದ ಸುಲಭವಾಗಿ ಮತ್ತು ಹೆಚ್ಚು ಖರ್ಚಿಲ್ಲದ ರೀತಿಯಲ್ಲಿ ವಿವಾದಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಿದೆ. ಈ ಕ್ರಮಗಳು ನ್ಯಾಯಾಲಯದ ಮೇಲೆ ಇರುವ ಹೊರೆಯನ್ನೂ ಕಡಿಮೆ ಮಾಡುತ್ತವೆ ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಕಾನೂನು ಸೇವಾ ಪ್ರಾಧಿಕಾರದ ವೆಬ್ಪೋರ್ಟಲ್, ಮೊಬೈಲ್ ಆ್ಯಪ್ ಮತ್ತು ಇ-ಪ್ರಿಸನ್ ಉಪಕ್ರಮಗಳಿಗೂ ಚಾಲನೆ ನೀಡಿದರು.
ಕಾನೂನು ನೆರವು ಪ್ರಕರಣಗಳ ನಿರ್ವಹಣಾ ವ್ಯವಸ್ಥೆ ಮತ್ತು ಮೊಬೈಲ್ ಆ್ಯಪ್ಗಳು ಫಲಾನುಭವಿಗಳಿಗೆ ಉತ್ತಮ ರೀತಿಯಲ್ಲಿ ನೆರವಾಗಲಿವೆ. ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಇದು ಅನುವು ಮಾಡಿಕೊಡುತ್ತದೆ. ಪಾರದರ್ಶಕ ಮತ್ತು ವಿಶ್ವಾಸಾರ್ಹ ರೀತಿಯಲ್ಲಿ ಪ್ರಕರಣ ನಿರ್ವಹಣೆಗೆ ನೆರವಾಗಲಿದೆ ಎಂದು ಹೇಳಿದರು.
Published On - 9:41 am, Sun, 17 July 22