ಹೈಡ್ರೋಜನ್ ರೈಲು ಟ್ರಯಲ್ ರನ್ ಯಶಸ್ವಿ: ದೆಹಲಿ-ಜಿಂದ್ ನಡುವೆ ಚಲಿಸಲಿದೆ ದೇಶದ ಮೊದಲ ಮಾಲಿನ್ಯ ರಹಿತ ರೈಲು

ದೆಹಲಿ-ಜಿಂದ್ ನಡುವೆ ಭಾರತದ ಮೊದಲ ಹೈಡ್ರೋಜನ್ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. ವಾಯು ಮತ್ತು ಶಬ್ದ ಮಾಲಿನ್ಯ ರಹಿತ ಈ ರೈಲು ಹಸಿರು ಇಂಧನ ತಂತ್ರಜ್ಞಾನ ಆಧರಿಸಿದ್ದು, ನೀರು ಮತ್ತು ಹಬೆಯನ್ನು ಮಾತ್ರ ಹೊರಹಾಕುತ್ತದೆ. ಸುರಕ್ಷತಾ ಮಾನದಂಡಗಳನ್ನು ಪಾಸು ಮಾಡಿರುವ ಈ ರೈಲು, ಮುಂದಿನ ತಿಂಗಳಿನಿಂದ ಹರಿಯಾಣದ ಜಿಂದ್ ಮತ್ತು ಸೋನಿಪತ್ ನಡುವೆ ವಾಣಿಜ್ಯ ಸಂಚಾರ ಆರಂಭಿಸುವ ನಿರೀಕ್ಷೆಯಿದೆ. ಇದು ಭಾರತೀಯ ರೈಲ್ವೆಯ ಮಹತ್ವದ ಹೆಜ್ಜೆಯಾಗಿದೆ.

ಹೈಡ್ರೋಜನ್ ರೈಲು ಟ್ರಯಲ್ ರನ್ ಯಶಸ್ವಿ: ದೆಹಲಿ-ಜಿಂದ್ ನಡುವೆ  ಚಲಿಸಲಿದೆ ದೇಶದ ಮೊದಲ ಮಾಲಿನ್ಯ ರಹಿತ ರೈಲು
ರೈಲು

Updated on: Jun 27, 2026 | 7:31 AM

ನವದೆಹಲಿ, ಜೂನ್ 27: ದೇಶದಲ್ಲಿ ವಾಯು ಹಾಗೂ ಶಬ್ದ ಮಾಲಿನ್ಯ ರಹಿತ ಹಸಿರು ಇಂಧನ ಆಧರಿತ ರೈಲುಗಳ ಕಾರ್ಯಾಚರಣೆಗೆ ಚಾಲನೆ ನೀಡುವ ಭಾರತೀಯ ರೈಲ್ವೆ(Indian Railway)ಯ ಮಹತ್ವಾಕಾಂಕ್ಷಿ ಯೋಜನೆಗೆ ದೊಡ್ಡ ಯಶಸ್ಸು ಸಿಕ್ಕಿದೆ. ಭಾರತದ ಮೊದಲ ‘ಹೈಡ್ರೋಜನ್ ರೈಲು’ ದೆಹಲಿ ಮತ್ತು ಹರಿಯಾಣದ ಜಿಂದ್ ನಡುವಿನ ಅಂತಿಮ ಹಂತದ ಹೈಸ್ಪೀಡ್ ಪ್ರಾಯೋಗಿಕ ಸಂಚಾರವನ್ನು ಶುಕ್ರವಾರ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಹೈಡ್ರೋಜನ್ ಚಾಲಿತ ರೈಲನ್ನು ಜಿಂದ್-ಸೋನಿಪತ್-ದೆಹಲಿ ಮಾರ್ಗದಲ್ಲಿ ಗಂಟೆಗೆ 120 ಕಿ.ಮೀ ಗರಿಷ್ಠ ವೇಗದಲ್ಲಿ ಓಡಿಸಿ ಪರೀಕ್ಷಿಸಲಾಯಿತು. ಸಂಶೋಧನಾ ವಿನ್ಯಾಸಗಳು ಮತ್ತು ಮಾನದಂಡಗಳ ಸಂಸ್ಥೆಯ (RDSO) ತಾಂತ್ರಿಕ ತಂಡದ ಮೇಲ್ವಿಚಾರಣೆಯಲ್ಲಿ ಈ ಪರೀಕ್ಷೆ ನಡೆದಿದೆ.

ಪ್ರಾಯೋಗಿಕ ಸಂಚಾರದ ಸಮಯದಲ್ಲಿ ರೈಲ್ವೆ ಉನ್ನತಾಧಿಕಾರಿಗಳ ತಂಡವು ರೈಲಿನ ಬ್ರೇಕಿಂಗ್ ಸಿಸ್ಟಮ್, ಎಂಜಿನ್ ಕಾರ್ಯಕ್ಷಮತೆ, ಟ್ರ್ಯಾಕ್ ಸ್ಥಿರತೆ ಮತ್ತು ಕಂಪನ ಮಟ್ಟವನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಿದ್ದು, ರೈಲು ಎಲ್ಲಾ ಸುರಕ್ಷತಾ ಮಾನದಂಡಗಳನ್ನು ಯಶಸ್ವಿಯಾಗಿ ಪಾಸ್ ಮಾಡಿದೆ.

ಹೊಗೆ ಇಲ್ಲ, ಮಾಲಿನ್ಯವಿಲ್ಲ, ಇದು ಕಂಪ್ಲೀಟ್ ಹಸಿರು ತಂತ್ರಜ್ಞಾನ

ನೀರು ಮತ್ತು ಹಬೆ ಮಾತ್ರ ರಿಲೀಸ್: ಈ ರೈಲು ಇಂಧನ ಕೋಶ ತಂತ್ರಜ್ಞಾನದ ಮೇಲೆ ಕಾರ್ಯನಿರ್ವಹಿಸುತ್ತದೆ. ಹೈಡ್ರೋಜನ್ ಅನಿಲವು ಗಾಳಿಯಲ್ಲಿರುವ ಆಮ್ಲಜನಕದೊಂದಿಗೆ ಸೇರಿ ವಿದ್ಯುತ್ ಉತ್ಪಾದಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಹಾನಿಕಾರಕ ಹೊಗೆ ಹೊರಬರುವುದಿಲ್ಲ, ಕೇವಲ ನೀರು ಮತ್ತು ಉಗಿ (ಹಬೆ) ಮಾತ್ರ ಬಿಡುಗಡೆಯಾಗುತ್ತದೆ.

ಈ 10-ಕೋಚ್ ಡೆಮು ರೈಲು ಚಲಿಸಲು ಡೀಸೆಲ್ ಅಥವಾ ಓವರ್‌ಹೆಡ್ ಎಲೆಕ್ಟ್ರಿಕ್ ಲೈನ್‌ಗಳ ಅಗತ್ಯವಿಲ್ಲ. ಇದು 1,200 kW ಹೈಡ್ರೋಜನ್ ಇಂಧನ ಕೋಶ ಪ್ರೊಪಲ್ಷನ್ ವ್ಯವಸ್ಥೆಯನ್ನು ಬಳಸುತ್ತದೆ. ರೈಲಿನ ಇಂಜಿನ್ ಶಕ್ತಿಯು ಒಂದೇ ಕಡೆ ಕೇಂದ್ರೀಕೃತವಾಗದೆ ‘DPRS’ ತಂತ್ರಜ್ಞಾನದಡಿ ಎಲ್ಲಾ ಕೋಚ್‌ಗಳಿಗೂ ಸಮನಾಗಿ ವಿತರಣೆಯಾಗುತ್ತದೆ.

ಮತ್ತಷ್ಟು ಓದಿ: ಭುವನೇಶ್ವರ-ಯಶವಂತಪುರ ವೀಕ್ಲಿ ಸ್ಪೆಷಲ್ ರೈಲುಗಳ ಸಂಚಾರ ಅವಧಿ ವಿಸ್ತರಣೆ: ಇಲ್ಲಿದೆ ವೇಳಾಪಟ್ಟಿ

ರೈಲ್ವೆ ಸಚಿವಾಲಯ ಹಾಗೂ ‘PESO’ ಪರವಾನಗಿ
ರೈಲ್ವೆ ಸುರಕ್ಷತಾ ಆಯುಕ್ತರು (CCRS) ಮತ್ತು ಪೆಟ್ರೋಲಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯು (PESO) ಹರಿಯಾಣದ ಜಿಂದ್‌ನಲ್ಲಿ ಹೈಡ್ರೋಜನ್ ಅನಿಲವನ್ನು ಸಂಗ್ರಹಿಸಲು ಮತ್ತು ರೈಲಿಗೆ ಇಂಧನ ತುಂಬಿಸಲು ಈಗಾಗಲೇ ಅಧಿಕೃತ ಪರವಾನಗಿ ನೀಡಿವೆ. ಒಂದೇ ಬಾರಿ ಇಂಧನ ತುಂಬಿಸಿಕೊಂಡರೆ ಈ ರೈಲು ನೂರಾರು ಕಿಲೋಮೀಟರ್ ಓಡುವ ಸಾಮರ್ಥ್ಯ ಹೊಂದಿದೆ.

ಮುಂದಿನ ತಿಂಗಳಿನಿಂದ ಹಳಿಗಳ ಮೇಲೆ ನೀಲಿ ರೈಲು
ಪ್ರಾಯೋಗಿಕ ಓಟ ಯಶಸ್ವಿಯಾಗಿದ್ದರೂ, ತಕ್ಷಣವೇ ರೈಲು ಸಾರ್ವಜನಿಕ ಸೇವೆಗೆ ಬರುವುದಿಲ್ಲ. ಉತ್ತರ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಅವರು ಅಂತಾರಾಷ್ಟ್ರೀಯ ಸುರಕ್ಷತಾ ತಪಾಸಣಾ ಸಂಸ್ಥೆಗಳು ನಿಗದಿಪಡಿಸಿದ ಎಲ್ಲಾ ನಿಯಮಗಳ ಪಾಲನಾ ವರದಿಯನ್ನು ಸಚಿವಾಲಯಕ್ಕೆ ಸಲ್ಲಿಸಬೇಕಿದೆ.

ಈ ಎಲ್ಲಾ ಕಾರ್ಯಾಚರಣೆಯ ಔಪಚಾರಿಕತೆಗಳು ಮುಗಿದ ತಕ್ಷಣ, ದೇಶದ ಮೊದಲ ಹೈಡ್ರೋಜನ್ ರೈಲು ಹರಿಯಾಣದ ಜಿಂದ್ ಮತ್ತು ಸೋನಿಪತ್ ನಡುವೆ ಅಧಿಕೃತವಾಗಿ ವಾಣಿಜ್ಯ ಸಂಚಾರ ಆರಂಭಿಸಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ತಿಂಗಳಿನಿಂದಲೇ ಈ ಆಕರ್ಷಕ ನೀಲಿ ಬಣ್ಣದ ರೈಲು ಹಳಿಗಳ ಮೇಲೆ ಓಡುವುದನ್ನು ಸಾರ್ವಜನಿಕರು ನೋಡಬಹುದಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us