ವಿಶೇಷ ಚೇತನ ಮಗುವಿಗೆ ವಿಮಾನ ಹತ್ತಲು ಬಿಡದ ಇಂಡಿಗೋ ಸಿಬ್ಬಂದಿ: ತನಿಖೆಗೆ ಆದೇಶಿಸಿದ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ
ರಾಂಚಿ ವಿಮಾನ ನಿಲ್ದಾಣದಲ್ಲಿ ವಿಶೇಷ ಚೇತನ ಮಗುವನ್ನು ವಿಮಾನ ಹತ್ತಲು ಬಿಡದ ಇಂಡಿಗೋ ವಿಮಾನಯಾನ ಸಂಸ್ಥೆಯ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ದೆಹಲಿ: ರಾಂಚಿ ವಿಮಾನ ನಿಲ್ದಾಣದಲ್ಲಿ ವಿಶೇಷ ಚೇತನ ಮಗುವನ್ನು ವಿಮಾನ ಹತ್ತಲು ಬಿಡದ ಇಂಡಿಗೋ ವಿಮಾನಯಾನ ಸಂಸ್ಥೆಯ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವಾರಾಂತ್ಯ ಸಂಭ್ರಮದಲ್ಲಿದ್ದ ಕುಟುಂಬದೊಂದಿಗೆ ಈ ಮಗುವು ಬೇರೆ ಊರಿಗೆ ತೆರಳಬೇಕಿತ್ತು. ‘ಇಂಥ ನಡವಳಿಕೆ ಬಗ್ಗೆ ನಮ್ಮದು ಶೂನ್ಯ ಸಹಿಷ್ಣುತೆ. ಯಾವುದೇ ಮನುಷ್ಯ ಇಂಥ ಪರಿಸ್ಥಿತಿ ಎದುರಿಸಬಾರದು. ಈ ವಿಚಾರದ ಬಗ್ಗೆ ಸ್ವತಃ ನಾನೇ ವಿಚಾರಣೆ ನಡೆಸುತ್ತಿದ್ದೇನೆ. ವಿಚಾರಣೆಯ ನಂತರ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಟ್ವೀಟ್ ಮಾಡಿದ್ದಾರೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯದ ಪ್ರಧಾನ ನಿರ್ದೇಶಕರು (Directorate General of Civil Aviation – DGCA) ಸಹ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಕೇಳಿದ್ದಾರೆ. ಕುಟುಂಬವೊಂದರ ಸಂಕಷ್ಟವು ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ಹಂಚಿಕೊಂಡಿದ್ದರು. ಈ ಪೋಸ್ಟ್ ವೈರಲ್ ಆಗುವುದರೊಂದಿಗೆ ಘಟನೆಯ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಘಟನೆಯ ಕುರಿತು ಸ್ಪಷ್ಟನೆ ನೀಡಿರುವ ಇಂಡಿಗೊ, ಈ ಮಗುವು ಇತರ ಪ್ರಯಾಣಿಕರ ಸುರಕ್ಷೆಗೆ ಆತಂಕ ಉಂಟು ಮಾಡಿತ್ತು ಎಂದು ತನ್ನ ಸಿಬ್ಬಂದಿಯನ್ನು ಸಮರ್ಥಿಸಿಕೊಂಡಿದೆ. ಎಲ್ಲರನ್ನೂ ಒಳಗೊಳ್ಳುವ ರೀತಿಯ ನಡವಳಿಕೆಯ ಧ್ಯೇಯವನ್ನು ನಮ್ಮ ಸಂಸ್ಥೆ ಹೊಂದಿದೆ. ಅದು ನಮಗೆ ಹೆಮ್ಮೆಯೂ ಹೌದು ಎಂದು ಹೇಳಿದೆ.
There is zero tolerance towards such behaviour. No human being should have to go through this! Investigating the matter by myself, post which appropriate action will be taken. https://t.co/GJkeQcQ9iW
— Jyotiraditya M. Scindia (@JM_Scindia) May 9, 2022
‘ಪ್ರಯಾಣಿಕರ ಹಿತದೃಷ್ಟಿಯಿಂದ ವಿಶೇಷ ಚೇತನ ಮಗುವೊಂದಕ್ಕೆ ವಿಮಾನ ಏರಲು ಅವಕಾಶ ನಿರಾಕರಿಸಬೇಕಾಯಿತು. ಆ ಹುಡುಗ ಹೆದರಿದ್ದ. ಅವನು ಸಮಾಧಾನಗೊಳ್ಳಲಿ ಎಂದು ಕೊನೆಯ ಕ್ಷಣದವರೆಗೂ ಸಿಬ್ಬಂದಿ ಕಾದರು. ಆದರೆ ಪ್ರಯೋಜನವಾಗಲಿಲ್ಲ’ ಎಂದು ವಿಮಾನಯಾನ ಸಂಸ್ಥೆಯು ತಿಳಿಸಿದೆ. ಘಟನೆಗೆ ಸಾಕ್ಷಿಯಾಗಿದ್ದ ಪ್ರಯಾಣಿಕರಾದ ಮನಿಶ ಗುಪ್ತಾ ಘಟನೆಯ ಕುರಿತು ಫೇಸ್ಬುಕ್ನಲ್ಲಿ ಸುದೀರ್ಘ ಪೋಸ್ಟ್ ಹಾಕಿದ್ದಾರೆ. ಇಂಡಿಗೊದ ಮ್ಯಾನೇಜರ್ ಒಬ್ಬರು ‘ಈ ಮಗುವನ್ನು ಹಿಡಿಯಲು ಆಗಲ್ಲ’ ಎಂದು ಕೂಗಾಡುತ್ತಿದ್ದರು. ಈ ವೇಳೆ ಅಲ್ಲಿಯೇ ಇದ್ದ ಪ್ರಯಾಣಿಕರೊಬ್ಬರು, ‘ಹಿಡಿಯಲು ಆಗದಿರುವುದು, ಹೆದರಿದ್ದುದು ನಿಮ್ಮನ್ನು ಮಾತ್ರ’ ಎಂದು ಟೀಕಿಸಿದ್ದಾಗಿ ಗುಪ್ತಾ ತಮ್ಮ ಪೋಸ್ಟ್ನಲ್ಲಿ ಹೇಳಿದ್ದಾರೆ.
ವಿಮಾನಯಾನ ಸಂಸ್ಥೆಯು ನಮಗೆ ಹೊಟೆಲ್ನಲ್ಲಿ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿತ್ತು. ಮಾರನೇ ದಿನ ನಾವು ಹೋಗಬೇಕಿದ್ದ ಸ್ಥಳಕ್ಕೆ ವಿಮಾನದಲ್ಲಿಯೇ ಹೋದೆವು. ಕೆಲ ವೈದ್ಯರು ಸಹ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಮಾರ್ಗಮಧ್ಯೆ ಮಗುವಿಗೆ ಏನಾದರೂ ತೊಂದರೆಯಾದರೆ ಅಗತ್ಯ ನೆರವು ಒದಗಿಸುವುದಾಗಿ ಅವರು ಭರವಸೆ ನೀಡಿದರು ಎಂದು ಗುಪ್ತಾ ಹೇಳಿದರು.
ಕೆಲ ಪ್ರಯಾಣಿಕರು ಸಹ ಈ ಕುಟುಂಬದ ನೆರವಿಗೆ ಬಂದಿದ್ದರು. ಅವರು ತಮ್ಮ ಮೊಬೈಲ್ ಫೋನ್ಗಳನ್ನು ತೆರೆದು ಅಂಗವಿಕಲರ ವಿಚಾರವಾಗಿ ತಾರತಮ್ಯ ತೋರಿಸಬಾರದು ಎನ್ನುವ ಟ್ವಿಟರ್ ಪೋಸ್ಟ್ ಮತ್ತು ಲೇಖನಗಳನ್ನು ತೋರಿಸಿದರು. ಸುಮಾರು 45 ನಿಮಿಷಗಳ ವರೆಗೆ ನಡೆದ ಭಾವೋದ್ರೇಕದ ಮಾತುಕತೆಯ ಸಂದರ್ಭದಲ್ಲಿ ಒಮ್ಮೆಯಾದರೂ ಆ ಕುಟುಂಬದ ಮೂವರ ಪೈಕಿ ಯಾರೊಬ್ಬರೂ ದನಿ ಏರಿಸಿ ಮಾತನಾಡಲಿಲ್ಲ. ಅಶ್ಲೀಲ ಪದ ಬಳಸಲಿಲ್ಲ ಎಂದು ಮನಿಶ ಗುಪ್ತಾ ಹೇಳಿದರು.
ಇದನ್ನೂ ಓದಿ: ಪ್ರಯಾಣಿಕರಿಗೆ ಸಿಹಿ ಸುದ್ದಿ; ಮಂಗಳೂರು-ಹುಬ್ಬಳ್ಳಿ ಮಧ್ಯೆ ಇಂಡಿಗೋ ವಿಮಾನ ಸಂಚಾರ ಆರಂಭ
ಇದನ್ನೂ ಓದಿ: Qantas Airways: ಬೆಂಗಳೂರಿನಿಂದ ಸಿಡ್ನಿಗೆ ತಡೆರಹಿತ ವಿಮಾನ ಹಾರಾಟ! ಕ್ವಂಟಾಸ್‌ನಿಂದ ಇಂಡಿಗೊ ಸಹಯೋಗದಲ್ಲಿ ನೇರ ವಿಮಾನ
Published On - 11:46 am, Mon, 9 May 22