ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟಲು ಸರ್ಕಾರ ಉತ್ತೇಜನ ನೀಡಲಿ: ಸಂಸದೆ ಸುಧಾಮೂರ್ತಿ
ಗರ್ಭಕೋಶ ಕ್ಯಾನ್ಸರ್ ಈಗ ಮಾರಣಾಂತಿಕವಾಗಿದೆ. ಗರ್ಭಕೋಶ ಕ್ಯಾನ್ಸರ್ ವಿರುದ್ಧ ಹೋರಾಡಲು ಸರ್ಕಾರಿ ಪ್ರಾಯೋಜಿತ ಲಸಿಕೆ ಕಾರ್ಯಕ್ರಮ ಪ್ರಾರಂಭ ಮಾಡಬೇಕು ಎಂದು ಇನ್ಫೋಸಿಸ್ ಪ್ರತಿಷ್ಠಾನದ ಸಂಸ್ಥಾಪಕಿ, ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಸದನದ ಗಮನಕ್ಕೆ ತಂದರು.
ನವದೆಹಲಿ, ಜುಲೈ 03: ಗರ್ಭಕೋಶದ ಕ್ಯಾನ್ಸರ್ (Cancer of Uterus) ತಡೆಗಟ್ಟಲು ಲಸಿಕೆ ಹಾಗೂ ಕರ್ನಾಟಕ ಸೇರಿದಂತೆ ದೇಶದ ಪ್ರವಾಸೋದ್ಯಮದ ಏಳಿಗೆಯ ಬಗ್ಗೆ ಇನ್ಫೋಸಿಸ್ ಪ್ರತಿಷ್ಠಾನದ ಸಂಸ್ಥಾಪಕಿ, ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ (Rajya Sabha Member Sudha Murthy) ಸದನದ ಗಮನಕ್ಕೆ ತಂದರು. ರಾಜ್ಯಸಭೆಯಲ್ಲಿ ನಾಮನಿರ್ದೇಶನಗೊಂಡಿರುವ ಸುಧಾಮೂರ್ತಿ ಅವರು ಇದೇ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಭಾಷಣ ಮಾಡಿದರು. “ನಾನು ರಾಜಕಾರಣಿಯಲ್ಲ. ನನಗೆ ಹೆಚ್ಚು ಮತ್ತು ರಾಜಕೀಯ ಮಾತುಗಳನ್ನು ಆಡಲು ಬರುವುದಿಲ್ಲ” ಎನ್ನುತ್ತಲೆ ಭಾಷಣ ಆರಂಭಿಸಿದ ಅವರು ಈ ಎರಡು ಪ್ರಮುಖ ವಿಚಾರಗಳನ್ನು ಸದನದಲ್ಲಿ ಪ್ರಸ್ತಾಪಿಸಿದರು.
ಗರ್ಭಕೋಶ ಕ್ಯಾನ್ಸರ್ ಈಗ ಮಾರಣಾಂತಿಕವಾಗಿದೆ. ಗರ್ಭಕೋಶ ಕ್ಯಾನ್ಸರ್ ವಿರುದ್ಧ ಹೋರಾಡಲು ಸರ್ಕಾರಿ ಪ್ರಾಯೋಜಿತ ಲಸಿಕೆ ಕಾರ್ಯಕ್ರಮ ಪ್ರಾರಂಭ ಮಾಡಬೇಕು. ತಾಯಿ ಮೃತಪಟ್ಟರೆ ಮಕ್ಕಳು ಜೀವನ ಪೂರ್ತಿ ಅನಾಥರಾಗುತ್ತಾರೆ. ಹೀಗಾಗಿ, ಗರ್ಭಕೋಶ ಕ್ಯಾನ್ಸರ್ಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಬೇಕು. ಈಗ ಲಸಿಕೆಗೆ 1,300-1,400 ರೂ. ಆಗುತ್ತದೆ. ಸರ್ಕಾರ ಮಧ್ಯಪ್ರವೇಶಿಸಿದರೆ ಅದನ್ನು 800 ರೂ.ಗೆ ಹೆಣ್ಣುಮಕ್ಕಳಿಗೆ ಲಸಿಕೆ ಕೊಡಬಹುದು ಎಂದರು.
9-14 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಗರ್ಭಕೋಶ ಲಸಿಕೆ ಇದ್ದು, ಇದನ್ನು ತೆಗೆದುಕೊಂಡರೆ ಕ್ಯಾನ್ಸರ್ ಅನ್ನು ತಡೆಗಟ್ಟಬಹುದು. ನಮ್ಮ ಹೆಣ್ಣುಮಕ್ಕಳ ಒಳಿತಿಗಾಗಿ ಈ ಲಸಿಕೆ ನೀಡಲು ನಾವು ಉತ್ತೇಜನ ನೀಡಬೇಕು ಎಂದು ಹೇಳಿದರು.
ಇದನ್ನೂ ಓದಿ: ಡಾ ಮಂಜುನಾಥ್ ಗೆಲುವಿಗೆ ಹರಕೆ ಹೊತ್ತ ಸುಧಾಮೂರ್ತಿ, ಆ ಹರಕೆ ಏನು ಗೊತ್ತಾ?
ಭಾರತದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ದೇಶದಲ್ಲಿ 42 ಪ್ರವಾಸಿ ತಾಣಗಳು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿವೆ. ಇನ್ನೂ 57 ತಾಣಗಳು ಪೆಂಡಿಂಗ್ ಲಿಸ್ಟ್ನಲ್ಲಿವೆ. ಇವುಗಳ ಕುರಿತು ಹೆಚ್ಚಿನ ಆದ್ಯತೆ ನೀಡಬೇಕು. ಕರ್ನಾಟಕದ ಶ್ರವಣಬೆಳಗೋಳದಲ್ಲಿನ ಬಾಹುಬಲಿಯ ಮೂರ್ತಿ, ಬದಾಮಿ, ಐಹೊಳೆ, ಮಧ್ಯಪ್ರದೇಶದ ಮಾಂಡು, ದೇಶದ ಗುಹೆಗಳು, ಲಿಂಗರಾಜ ದೇವಾಲಯಗಳು ದೇಶದ ಸಂಸ್ಕೃತಿಯ ತಾಣಗಳಾಗಿವೆ. ಇವುಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿದರು.
ಅಂತರಾಷ್ಟ್ರೀಯ ಮಹಿಳಾ ದಿನದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲೇಖಕಿ ಸುಧಾಮೂರ್ತಿ ಅವರನ್ನು ಮೇಲ್ಮನೆಗೆ ನಾಮನಿರ್ದೇಶನ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:20 am, Wed, 3 July 24