ನವದೆಹಲಿ: ಜಗತ್ತಿನ ಬಹುತೇಕ ಕಡೆ ಇನ್ನೂ ಕೊರೋನಾ ಅಟ್ಟಹಾಸ ಕಡಿಮೆಯಾಗಿಲ್ಲ. ಭಾರತದಲ್ಲೂ ಕೋವಿಡ್ ಮಾತ್ರವಲ್ಲದೆ ರೂಪಾಂತರಿ ವೈರಸ್ಗಳ ಹಾವಳಿಯೂ ಶುರುವಾಗಿದೆ. ಹೀಗಾಗಿ, 3ನೇ ಅಲೆಯ ಕೊರೋನಾ ಹರಡುವಿಕೆಯನ್ನು ನಿಯಂತ್ರಿಸಲು ಸಲುವಾಗಿ ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರದ ಮೇಲೆ ವಿಧಿಸಿದ್ದ ನಿಷೇಧವನ್ನು ಆ.31ರವರೆಗೂ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಜುಲೈ 31ರವರೆಗೆ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಗಳ ಮೇಲಿನ ನಿರ್ಬಂಧವನ್ನು ಆ. 31ರವರೆಗೂ ವಿಸ್ತರಿಸಿರುವುದಾಗಿ ಏವಿಯೇಷನ್ ರೆಗ್ಯುಲೇಟರ್ ಡೈರೆಕ್ಟೊರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಘೋಷಿಸಿದೆ.
ಇಂದು ಈ ಬಗ್ಗೆ ಸುತ್ತೋಲೆಯನ್ನು ಹೊರಡಿಸಲಾಗಿದ್ದು, ಇದು ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಗಳಿಗೆ ಮಾತ್ರ ಅನ್ವಯವಾಗಲಿದೆ. ಡಿಜಿಸಿಎಯಿಂದ ಅನುಮತಿ ಪಡೆದಿರುವ ಕಾರ್ಗೋ ವಿಮಾನಗಳ ಸಂಚಾರಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ತಿಳಿಸಲಾಗಿದೆ. ಕಳೆದ ವರ್ಷದಿಂದ ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಗಳಿಗೆ ನಿಷೇಧ ವಿಧಿಸಲಾಗಿದೆ. 2020ರ ಮಾರ್ಚ್ 23ರಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಭಾರತದಲ್ಲಿ ನಿಷೇಧ ಹೇರಲಾಗಿದೆ.
2020ರ ಮೇ ತಿಂಗಳಿನಿಂದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಮತ್ತು ಜುಲೈನಿಂದ ಆಯ್ದ ದೇಶಗಳೊಂದಿಗೆ ದ್ವಿಪಕ್ಷೀಯ ‘ಏರ್ ಬಬಲ್’ ವ್ಯವಸ್ಥೆಗಳ ಅಡಿಯಲ್ಲಿ ವಿಶೇಷ ಅಂತರಾಷ್ಟ್ರೀಯ ವಿಮಾನಯಾನಕ್ಕೆ ಅನುಮತಿ ನೀಡಲಾಗಿತ್ತು. ಭಾರತವು ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್ಡಮ್, ಯುನೈಟೆಡ್ ಅರಬ್ ಎಮಿರೇಟ್ಸ್, ಕೀನ್ಯಾ, ಭೂತಾನ್ ಮತ್ತು ಫ್ರಾನ್ಸ್ ಸೇರಿದಂತೆ ಹಲವಾರು ದೇಶಗಳೊಂದಿಗೆ ಏರ್ ಬಬಲ್ ಒಪ್ಪಂದಗಳನ್ನು ಮಾಡಿಕೊಂಡಿದೆ.
ಈ ದೇಶಗಳ ಪೈಕಿ ಎರಡೂ ದೇಶಗಳ ನಡುವಿನ ಏರ್ ಬಬಲ್ ಒಪ್ಪಂದದಡಿಯಲ್ಲಿ, ವಿಶೇಷ ಅಂತರಾಷ್ಟ್ರೀಯ ವಿಮಾನಗಳನ್ನು ತಮ್ಮ ವಿಮಾನಯಾನ ಸಂಸ್ಥೆಗಳು ಪ್ರಾಂತ್ಯಗಳ ನಡುವೆ ನಿರ್ವಹಿಸಬಹುದು. ಇದಲ್ಲದೆ, ಡೊಮೆಸ್ಟಿಕ್ ಅಥವಾ ದೇಶೀಯ ವಿಮಾನಗಳಲ್ಲೂ ಹಲವು ರಾಜ್ಯಗಳು ಆರ್ಟಿ-ಪಿಸಿಆರ್ ನೆಗೆಟಿವ್ ರಿಪೋರ್ಟ್ ಇರುವವರಿಗೆ ಮಾತ್ರ ವಿಮಾನ ಪ್ರಯಾಣಕ್ಕೆ ಅವಕಾಶ ಕಲ್ಪಿಸುತ್ತಿದೆ.
ಇದನ್ನೂ ಓದಿ: ಸೈಬೀರಿಯಾ ಬಳಿ ನಾಪತ್ತೆಯಾಗಿದ್ದ ರಷ್ಯಾದ ವಿಮಾನ ಪತ್ತೆ; 18 ಪ್ರಯಾಣಿಕರೂ ಸೇಫ್
Swami Ramdev: ಅಲೋಪಥಿ ಬಗ್ಗೆ ವಿವಾದಿತ ಹೇಳಿಕೆ; ದೆಹಲಿ ಹೈಕೋರ್ಟ್ನಿಂದ ಬಾಬಾ ರಾಮ್ದೇವ್ಗೆ ನೋಟಿಸ್ ಜಾರಿ
(International Passengers Flights Suspension Extended till August 31 in India DGCA announces)
Published On - 4:19 pm, Fri, 30 July 21