ರಸ್ತೆಗಳನ್ನು ಕಂಗನಾ ಕೆನ್ನೆಗಿಂತ ಸುಗಮವಾಗಿಸುತ್ತೇನೆ: ಜಾರ್ಖಂಡ್ ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ ವಿವಾದಿತ ಹೇಳಿಕೆ
Dr Irfan Ansari | Kangana Ranaut: ರಾಜಕೀಯ ಪ್ರಭಾವಿಗಳು ತಮ್ಮ ಕ್ಷೇತ್ರದ ರಸ್ತೆಯ ಅಭಿವೃದ್ಧಿ ಬಗ್ಗೆ ಜನರಿಗೆ ಆಶ್ವಾಸನೆ ನೀಡುವಾಗ ನಟಿಯರ ಕೆನ್ನೆಗಳನ್ನು ಹೋಲಿಸುವ ವಿವಾದಿತ ಟ್ರೆಂಡ್ ಮುಂದುವರೆದಿದೆ. ಈ ಬಾರಿ ಜಾರ್ಖಂಡ್ನ ಕಾಂಗ್ರೆಸ್ ಶಾಸಕರೊಬ್ಬರು ನಟಿ ಕಂಗನಾ ರಣಾವತ್ ಕೆನ್ನೆಯನ್ನು ರಸ್ತೆಗಳಿಗೆ ಹೋಲಿಸಿದ್ದಾರೆ.
ಜಾರ್ಖಂಡ್: ಬಾಲಿವುಡ್ ನಟಿಯರು ಉತ್ತರ ಭಾರತದ ರಾಜಕಾರಣಿಗಳಿಗೆ ಹೋಲಿಕೆಯಾಗುವ ಪರಂಪರೆ ಇಂದು ನಿನ್ನೆಯದಲ್ಲ. ಲಾಲು ಪ್ರಸಾದ್ ಯಾದವ್ (Lalu Prasad Yadav) ಪ್ರಾರಂಭಿಸಿದ್ದ ಈ ಮಾದರಿಯ ಹೇಳಿಕೆಗಳನ್ನು ಈಗಿನ ರಾಜಕಾರಣಿಗಳೂ ಮುಂದುವರೆಸಿದ್ದಾರೆ. ಇತ್ತೀಚೆಗೆ ಜಾರ್ಖಂಡ್ನ (Jharkhand) ಕಾಂಗ್ರೆಸ್ ಶಾಸಕರೊಬ್ಬರು ಇದೇ ಮಾದರಿಯ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ. ಪ್ರಸ್ತುತ ವೈರಲ್ ಆಗಿರುವ ವಿಡಿಯೋ ಶಾಸಕ ಡಾ.ಇರ್ಫಾನ್ ಅನ್ಸಾರಿಯವರೇ (Dr Irfan Ansari) ರೆಕಾರ್ಡ್ ಮಾಡಿರುವ ಮಾದರಿಯಲ್ಲಿದೆ. ಅವರ ಕ್ಷೇತ್ರದ ರಸ್ತೆಗಳನ್ನು ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಕೆನ್ನೆಗಿಂತ ಸುಗಮವಾಗಿಸುತ್ತೇನೆ ಎಂದು ಅವರು ವಿಡಿಯೋದಲ್ಲಿ ಹೇಳಿರುವುದು ದಾಖಲಾಗಿದೆ. ಅಂತಹ ರಸ್ತೆಗಳಲ್ಲಿ ಬುಡಕಟ್ಟು ಸಮುದಾಯದ ಮಕ್ಕಳು ಹಾಗೂ ರಾಜ್ಯದ ಯುವಕರು ಓಡಾಡಬಹುದು. ಅಂತಹ ಹದಿನಾಲ್ಕು ರಸ್ತೆಗಳ ನಿರ್ಮಾಣ ಸದ್ಯದಲ್ಲೇ ಆರಂಭವಾಗಲಿದೆ ಎಂದು ಶಾಸಕ ಅನ್ಸಾರಿ ಹೇಳಿದ್ದಾರೆ. ಜಾರ್ಖಂಡ್ನ ಜಮ್ತಾರಾ ಕ್ಷೇತ್ರವನ್ನು ಅವರು ಪ್ರತಿನಿಧಿಸುತ್ತಿದ್ದಾರೆ.
#WATCH | Jharkhand: I assure you that roads of Jamtara “will be smoother than cheeks of film actress Kangana Ranaut”; construction of 14 world-class roads will begin soon..: Dr Irfan Ansari, Congress MLA, Jamtara
(Source: Self-made video dated January 14) pic.twitter.com/MRpMYF5inW
— ANI (@ANI) January 15, 2022
ಶಾಸಕ ಡಾ.ಇರ್ಫಾನ್ ಅನ್ಸಾರಿ ವೈದ್ಯ ವೃತ್ತಿಯ ಹಿನ್ನೆಲೆಯವರು. ಈ ಹಿಂದೆ ಕೂಡ ವಿವಾದಿತ ಹೇಳಿಕೆಗಳನ್ನು ನೀಡಿ ಸುದ್ದಿಯಾಗಿದ್ದರು. ಮಾಸ್ಕ್ಗಳನ್ನು ಹೆಚ್ಚುಕಾಲ ಧರಿಸಬೇಕಾಗಿಲ್ಲ ಎಂಬರ್ಥದ ಹೇಳಿಕೆಗಳನ್ನು ಅವರು ನೀಡಿದ್ದರು. ‘‘ಮಾಸ್ಕ್ಗಳನ್ನು ದೀರ್ಘಕಾಲ ಧರಿಸಬಾರದು. ವೃತ್ತಿಯಲ್ಲಿ ವೈದ್ಯನಾಗಿರುವ ನಾನೇ ಹೇಳುತ್ತಿದ್ದೇನೆ- ಮಾಸ್ಕ್ ದೀರ್ಘಕಾಲ ಧರಿಸಬೇಡಿ. ಸಾರ್ವಜನಿಕ ಸ್ಥಳಗಳಲ್ಲಿ ಧರಿಸಿ. ಕೊವಿಡ್ ಮೂರನೇ ಅಲೆಯ ಬಗ್ಗೆ ಭಯಬೇಡ. ಐದಾರು ದಿನದಲ್ಲಿ ಕೊವಿಡ್ ಸೊಂಕು ದೂರಾಗುತ್ತವೆ’’ ಎಂದು ಹೇಳಿಕೆ ನೀಡಿದ್ದರು. ಸಮಾರಂಭವೊಂದರಲ್ಲಿ ಮಾಸ್ಕ್ ಧರಿಸದ ಅನ್ಸಾರಿ, ಅದಕ್ಕೆ ಕಾರಣವನ್ನು ಕೇಳಿದಾಗ ಮೇಲಿನ ಉತ್ತರ ನೀಡಿದ್ದರು.
ಇತ್ತೀಚೆಗಷ್ಟೇ ಶಿವಸೇನೆ ನಾಯಕ, ಮಹಾರಾಷ್ಟ್ರ ಸಚಿವ ಗುಲಾಬ್ರಾವ್ ಪಾಟೀಲ್ ರಸ್ತೆಗಳನ್ನು ಹೇಮಾ ಮಾಲಿನಿ ಕೆನ್ನೆಗಳಿಗೆ ಹೋಲಿಸಿದ್ದರು. ನಂತರ ಹೇಳಿಕೆ ವಿವಾದ ಪಡೆಯುತ್ತಿದ್ದಂತೆ ಕ್ಷಮೆ ಕೋರಿದ್ದರು. ರಾಜಸ್ಥಾನ ಸಚಿವ ರಾಜೇಂದ್ರ ಸಿಂಗ್ ತಮ್ಮ ಕ್ಷೇತ್ರದ ರಸ್ತೆಗಳನ್ನು ಕತ್ರಿನಾ ಕೈಫ್ ಕೆನ್ನೆಯಂತೆ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದ್ದು ಕೂಡ ಇತ್ತೀಚೆಗೆ ವಿವಾದ ಸೃಷ್ಟಿಸಿತ್ತು. ನಂತರ ಅವರೂ ಕ್ಷಮೆ ಕೋರಿದ್ದರು.
ಈ ಹಿಂದೆ ಬಿಹಾರದ ಮುಖ್ಯಮಂತ್ರಿಯಾಗಿದ್ದ ಲಾಲು ಪ್ರಸಾದ್ ಯಾದವ್ ರಸ್ತೆಗಳನ್ನು ನಟಿ ಹೇಮಾ ಮಾಲಿನಿ ಕೆನ್ನೆಗಳಿಗೆ ಹೋಲಿಸಿದ್ದರು. ಈ ಹೋಲಿಕೆಯನ್ನು ಈಗಿನ ರಾಜಕೀಯ ಮುಖಂಡರು ಮುಂದುವರೆಸಿದ್ದಾರೆ. ಅಂತಹ ಹೇಳಿಕೆಗಳ ಕುರಿತು ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ಮಥುರಾ ಕ್ಷೇತ್ರದ ಸಂಸದೆ ಹೇಮಾ ಮಾಲಿನಿ, ‘‘ನನ್ನ ಕೆನ್ನೆಗಳನ್ನು ಸರಿಯಾಗಿ, ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಉತ್ತಮ’’ ಎಂದು ಮಾರ್ಮಿಕವಾಗಿ ಹೇಳಿದ್ದರು.
ಇಂತಹ ಹೇಳಿಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಹೇಮಾ ಮಾಲಿನಿ, ‘‘ಇಂಥದ್ದು ಆಗಬಾರದು’’ ಎಂದು ಹೇಳಿದ್ದರು. ಅಂತಹ ಹೇಳಿಕೆಗಳನ್ನು ಸಾರ್ವಜನಿಕರು ಹೇಳಿದರೆ ನಿರ್ಲಕ್ಷಿಸಬಹುದು. ಆದರೆ ರಾಜಕೀಯ ಮುಖಂಡರು, ಸಂಸತ್ ಸದಸ್ಯರು ಇಂತಹ ಹೇಳಿಕೆಗಳನ್ನು ನೀಡಿದರೆ ಅದು ಉತ್ತಮ ಅಭಿರುಚಿಯಲ್ಲಿದೆ ಎಂದು ತಮಗನ್ನಿಸುವುದಿಲ್ಲ ಎಂದು ಅವರು ಹೇಳಿದ್ದರು. ಅಲ್ಲದೇ ಇಂತಹ ಪದಪ್ರಯೋಗ ಬಳಸುವ ಮುನ್ನ ಎಚ್ಚರಿಕೆಯಿಂದಿರಬೇಕು ಎಂದಿದ್ದ ಅವರು, ‘‘ಯಾವುದೇ ಮಹಿಳೆಗೆ ಅಂತಹ ವಿಷಯಗಳನ್ನು ಹೋಲಿಸಿ ಮಾತನಾಡಬಾರದು’’ ಎಂದು ರಾಜಕೀಯ ನಾಯಕರಿಗೆ ಕಿವಿಮಾತು ಹೇಳಿದ್ದರು.
ಇದನ್ನೂ ಓದಿ:
ಕತ್ರೀನಾ ಕೈಫ್ ಕೆನ್ನೆಯಂತಹ ನುಣುಪಾದ ರಸ್ತೆ ನಿರ್ಮಿಸಬೇಕು; ವಿವಾದಾತ್ಮಕ ಹೇಳಿಕೆ ನೀಡಿದ ರಾಜಸ್ಥಾನ ಸಚಿವ
Hema Malini: ಕೆನ್ನೆಯನ್ನು ರಸ್ತೆಗೆ ಹೋಲಿಸುತ್ತಿರುವ ರಾಜಕೀಯ ನಾಯಕರ ವಿರುದ್ಧ ಕಿಡಿಕಾರಿದ ಸಂಸದೆ ಹೇಮಾ ಮಾಲಿನಿ
Published On - 2:15 pm, Sat, 15 January 22