ಜಾರ್ಖಂಡ್‌ನಲ್ಲಿ ಪರೀಕ್ಷಾ ಹಗರಣಕ್ಕೆ ಬ್ರೇಕ್: 39 ನೇಮಕಾತಿ ಪರೀಕ್ಷೆಗಳು ರದ್ದು, 6 ಪರೀಕ್ಷೆಗಳು ಮುಂದೂಡಿಕೆ

ಜಾರ್ಖಂಡ್‌ನಲ್ಲಿ ವ್ಯಾಪಕ ನೇಮಕಾತಿ ಹಗರಣ ಹಾಗೂ ಅಕ್ರಮಗಳ ಹಿನ್ನೆಲೆಯಲ್ಲಿ, ಹೇಮಂತ್ ಸೊರೆನ್ ಸರ್ಕಾರವು 39 ಪರೀಕ್ಷೆಗಳನ್ನು ರದ್ದುಗೊಳಿಸಿ, 6 ಪರೀಕ್ಷೆಗಳನ್ನು ಮುಂದೂಡಿದೆ. ವಿದ್ಯಾರ್ಥಿ ಸಮುದಾಯದ ಹೋರಾಟಕ್ಕೆ ಮಣಿದ ಸರ್ಕಾರವು, JPSC ಮತ್ತು JSSC ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಪಾರದರ್ಶಕತೆ ತರಲು ಫಾಸ್ಟ್ ಟ್ರ್ಯಾಕ್ ಕೋರ್ಟ್ ಹಾಗೂ ಆಂತರಿಕ ವಿಜಿಲೆನ್ಸ್ ಕೋಶ ಸ್ಥಾಪಿಸಲು ನಿರ್ಧರಿಸಿದೆ.

ಜಾರ್ಖಂಡ್‌ನಲ್ಲಿ ಪರೀಕ್ಷಾ ಹಗರಣಕ್ಕೆ ಬ್ರೇಕ್: 39 ನೇಮಕಾತಿ ಪರೀಕ್ಷೆಗಳು ರದ್ದು, 6 ಪರೀಕ್ಷೆಗಳು ಮುಂದೂಡಿಕೆ
ಹೇಮಂತ್ ಸೊರೆನ್

Updated on: Aug 19, 2026 | 8:53 AM

ರಾಂಚಿ, ಆಗಸ್ಟ್​ 19: ನೇಮಕಾತಿ ಪರೀಕ್ಷೆ(Exams)ಗಳಲ್ಲಿ ವ್ಯಾಪಕ ಅಕ್ರಮ ಹಾಗೂ ಭ್ರಷ್ಟಾಚಾರ ನಡೆದಿರುವ ದೂರುಗಳ ಹಿನ್ನೆಲೆಯಲ್ಲಿ, ಜಾರ್ಖಂಡ್ ಸರ್ಕಾರವು ಬರೋಬ್ಬರಿ 45 ಪ್ರಮುಖ ನೇಮಕಾತಿ ಪರೀಕ್ಷೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ವಿದ್ಯಾರ್ಥಿ ಸಮುದಾಯದ ತೀವ್ರ ಪ್ರತಿಭಟನೆ ಹಾಗೂ ಬೇಡಿಕೆಗಳಿಗೆ ಮಣಿದ ಮುಖ್ಯಮಂತ್ರಿ ಹೇಮಂತ್ ಸೊರೆನ್ ನೇತೃತ್ವದ ರಾಜ್ಯ ಸರ್ಕಾರವು, 39 ಪರೀಕ್ಷೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿದ್ದು, ಇತರ 6 ಪರೀಕ್ಷೆಗಳನ್ನು ಮುಂದಿನ ಆದೇಶದವರೆಗೆ ಮುಂದೂಡಿದೆ.

ರದ್ದಾದ ಪ್ರಮುಖ ಹುದ್ದೆಗಳ ಪರೀಕ್ಷೆಗಳು

ಉನ್ನತ ಹುದ್ದೆಗಳ ನೇಮಕಾತಿ ರದ್ದು: ಜಾರ್ಖಂಡ್ ಲೋಕಸೇವಾ ಆಯೋಗ (JPSC) ಮತ್ತು ಜಾರ್ಖಂಡ್ ಸಿಬ್ಬಂದಿ ನೇಮಕಾತಿ ಆಯೋಗ (JSSC) ಮೂಲಕ ನಡೆದಿದ್ದ ಡೆಪ್ಯೂಟಿ ಕಲೆಕ್ಟರ್, ಸಿವಿಲ್ ಜಡ್ಜ್, ಅಸಿಸ್ಟೆಂಟ್ ಪ್ರೊಫೆಸರ್, ಡ್ರಗ್ ಇನ್‌ಸ್ಪೆಕ್ಟರ್, ದಂತ ವೈದ್ಯರು, ಸಹಾಯಕ ಎಂಜಿನಿಯರ್, ಫಾರೆಸ್ಟ್ ರೇಂಜ್ ಆಫೀಸರ್ ಹಾಗೂ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಗಳ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ.

ಹೊರಗುತ್ತಿಗೆ ಸಂಸ್ಥೆಯ (TDPL) ಫಲಿತಾಂಶ ರದ್ದು: 2014 ರಿಂದ ಪರೀಕ್ಷೆಗಳನ್ನು ನಡೆಸುತ್ತಿದ್ದ ‘ಟಿಎಸ್‌ಆರ್ ಡೇಟಾ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್’ (TDPL) ಎಂಬ ಹೊರಗುತ್ತಿಗೆ ಸಂಸ್ಥೆ ನಡೆಸಿದ ಎಲ್ಲಾ ಪರೀಕ್ಷೆಗಳು ಹಾಗೂ ಪ್ರಕಟಿಸಿದ ಫಲಿತಾಂಶಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

ಮತ್ತಷ್ಟು ಓದಿ: UGC-NET 2026: ಪ್ರಶ್ನೆಪತ್ರಿಕೆಗಳಲ್ಲಿ ದೋಷ; ಮೂರು ವಿಷಯಗಳ ಮರುಪರೀಕ್ಷೆ ಘೋಷಿಸಿದ ಎನ್​ಟಿಎ

ಸಿಜಿಎಲ್ ಪರೀಕ್ಷೆ ರದ್ದು: ರಾಜ್ಯಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಸಂಯೋಜಿತ ಪದವಿ ಹಂತದ (CGL) ಪರೀಕ್ಷೆಯನ್ನು ಸರ್ಕಾರ ಈಗಾಗಲೇ ರದ್ದುಪಡಿಸಿದೆ.

ತನಿಖೆ ಮತ್ತು ಪಾರದರ್ಶಕತೆಗೆ ಸರ್ಕಾರದ ಹೆಜ್ಜೆಗಳು

ಫಾಸ್ಟ್‌ ಟ್ರ್ಯಾಕ್ ಕೋರ್ಟ್ ಮನವಿ: ಪರೀಕ್ಷಾ ಅಕ್ರಮ ಹಾಗೂ ಭ್ರಷ್ಟಾಚಾರದಲ್ಲಿ ಭಾಗಿಯಾದವರ ವಿರುದ್ಧ ತ್ವರಿತ ವಿಚಾರಣೆ ನಡೆಸಲು ಪ್ರತ್ಯೇಕ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ ಸ್ಥಾಪಿಸುವಂತೆ ಹೈಕೋರ್ಟ್‌ಗೆ ಕೋರಲು ಸರ್ಕಾರ ನಿರ್ಧರಿಸಿದೆ.

ಆಂತರಿಕ ವಿಜಿಲೆನ್ಸ್ ಕೋಶ: ಜೆಪಿಎಸ್​ಸಿ ಮತ್ತು ಜೆಎಸ್​ಎಸ್​ಸಿ ಆಯೋಗಗಳ ಒಳಗೆ ಅಕ್ರಮಗಳನ್ನು ತಡೆಯಲು ಆಂತರಿಕ ಮೇಲ್ವಿಚಾರಣಾ ಕೋಶ ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ. ಹಿರಿಯ ಐಎಎಸ್ ಅಧಿಕಾರಿ ಅಮಿತಾಭ್ ಕೌಶಲ್ ಅವರ ನೇತೃತ್ವದಲ್ಲಿ ಸುಧಾರಣಾ ಸಮಿತಿ ರಚಿಸಲಾಗಿದ್ದು, ಈ ಸಮಿತಿಯು 2 ತಿಂಗಳಲ್ಲಿ ಸಮಗ್ರ ವರದಿ ನೀಡಲಿದೆ.

ಜಾರ್ಖಂಡ್‌ನಲ್ಲಿ ಕಳೆದ ಹಲವು ವರ್ಷಗಳಿಂದ ಪೇಪರ್ ಸೋರಿಕೆ, ಪ್ರಶ್ನೆಪತ್ರಿಕೆ ಅಕ್ರಮ ಹಾಗೂ ನೇಮಕಾತಿ ವಿಳಂಬದ ವಿರುದ್ಧ ಲಕ್ಷಾಂತರ ಆಕಾಂಕ್ಷಿಗಳು ರಾಂಚಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದರು. ರದ್ದಾದ ಎಲ್ಲಾ ಪರೀಕ್ಷೆಗಳನ್ನು ಪಾರದರ್ಶಕವಾಗಿ, ಹೊಸ ನಿಯಮಾವಳಿಗಳ ಅಡಿಯಲ್ಲಿ ಮರುಪರೀಕ್ಷೆ ನಡೆಸಿ ನೈಜ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವುದಾಗಿ ಸರ್ಕಾರ ಸ್ಪಷ್ಟಪಡಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us