ಪುನರ್ಜನ್ಮದ ನಂಬಿಕೆಯಿಂದ ತಂದೆಯ ಮೃತದೇಹವನ್ನು 4 ವರ್ಷ ಫ್ರೀಜರ್‌ನಲ್ಲಿಟ್ಟ ಮಗಳು; ತಿಂಗಳಿಗೆ 1.6 ಲಕ್ಷ ವೆಚ್ಚ!
ಮುಂಬೈನ ಮಲಾಡ್‌ನ ಕೊಂಕಣಿ ಪಾಡಾ ಪ್ರದೇಶದಲ್ಲಿರುವ ಡೇ ಕೇರ್ ಸೆಂಟರ್ ಒಂದರಲ್ಲಿ 78 ವರ್ಷದ ವೃದ್ಧರೊಬ್ಬರ ಮೃತದೇಹವನ್ನು ಕಳೆದ 4 ವರ್ಷಗಳಿಂದ ಫ್ರೀಜರ್‌ನಲ್ಲಿ ಇರಿಸಲಾಗಿತ್ತು. ಈ ಘಟನೆಗೆ ಇಡೀ ನಗರವೇ ಬೆಚ್ಚಿಬಿದ್ದಿದೆ. ಕಟ್ಟಡದಿಂದ ಭಾರಿ ಪ್ರಮಾಣದ ದುರ್ವಾಸನೆ ಬರುತ್ತಿದೆ ಎಂದು ಸೋಮವಾರ ಸಂಜೆ ಸ್ಥಳೀಯರು ನೀಡಿದ ದೂರಿನ ಮೇರೆಗೆ ಕುರಾರ್ ಪೊಲೀಸ್ ಠಾಣೆಯ ತಂಡವು ಪರಿಶೀಲನೆ ನಡೆಸಿದಾಗ ಈ ಭೀಕರ ಸತ್ಯ ಬಯಲಾಗಿದೆ. ಅಷ್ಟಕ್ಕೂ ಆ ಮೃತದೇಹವನ್ನು ಫ್ರೀಜರ್‌ನಲ್ಲಿ ಇಟ್ಟಿದ್ದೇಕೆ? ಎಂಬ ಕುರಿತಾದ ಮಾಹಿತಿ ಇಲ್ಲಿದೆ.

ಮುಂಬೈ, ಸೆಪ್ಟೆಂಬರ್ 30: ಮುಂಬೈನ ಮಲಾಡ್‌ನಲ್ಲಿರುವ ಡೇ ಕೇರ್ ಸೆಂಟರ್ ಒಂದರಲ್ಲಿ 78 ವರ್ಷದ ವೃದ್ಧರೊಬ್ಬರ ಮೃತದೇಹವು ಕಳೆದ 4 ವರ್ಷಗಳಿಂದ ಫ್ರೀಜರ್‌ನಲ್ಲಿ ಸಂರಕ್ಷಿಸಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದೆ. ಕುರಾರ್ ವಿಲೇಜ್‌ನ ಕೊಂಕಣಿ ಪಾಡಾದಲ್ಲಿರುವ ಡೇ ಕೇರ್ ಸೆಂಟರ್‌ನಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಸೋಮವಾರ ಸಂಜೆ ಸ್ಥಳೀಯರು ನೀಡಿದ ದೂರಿನ ಮೇರೆಗೆ ಪೊಲೀಸರು ಪರಿಶೀಲನೆ ನಡೆಸಿದಾಗ ಈ ಬೆಚ್ಚಿಬೀಳಿಸುವ ಸತ್ಯ ಬಯಲಾಗಿದೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು 2022ರ ಜೂನ್ 9ರಂದು ಮೃತಪಟ್ಟಿದ್ದರು.
ಪೊಲೀಸ್ ಮೂಲಗಳ ಪ್ರಕಾರ, ವೃದ್ಧ 2022ರ ಜೂನ್ 9ರಂದು ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು. ಸಾವು ಸಂಭವಿಸಿದ ದಿನದಿಂದಲೂ ಅವರ ಮೃತದೇಹವನ್ನು ಡೇ ಕೇರ್ ಸೆಂಟರ್‌ನ ಫ್ರೀಜರ್‌ನಲ್ಲಿ ಇಟ್ಟು ಸಂರಕ್ಷಿಸಲಾಗುತ್ತಿತ್ತು. ಮೃತನಿಗೆ ಮುಂಬೈನಲ್ಲಿರುವ ಒಬ್ಬ ಮಗ ಹಾಗೂ ಅಮೆರಿಕದಲ್ಲಿ ನೆಲೆಸಿರುವ ಒಬ್ಬ ಮಗಳಿದ್ದಾರೆ. ತಂದೆಯ ಮೇಲೆ ಅಪಾರ ಪ್ರೀತಿ ಹೊಂದಿದ್ದ ಮಗಳಿಗೆ ಪುನರ್ಜನ್ಮ ಮತ್ತು ಮರುಜೀವದ ಪರಿಕಲ್ಪನೆಯಲ್ಲಿ ತೀವ್ರ ನಂಬಿಕೆಯಿತ್ತು. ತಂದೆಯನ್ನು ಹೇಗಾದರೂ ಮಾಡಿ ಮತ್ತೆ ಜೀವಂತವಾಗಿ ತರಬಹುದು ಎಂಬ ಆಸೆಯಿಂದ ಮಕ್ಕಳಿಬ್ಬರೂ ಶವವನ್ನು ಸಂರಕ್ಷಿಸಿಡಲು ನಿರ್ಧರಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಪತ್ನಿಗೆ ವಿಷದ ಇಂಜೆಕ್ಷನ್ ಕೊಡಿಸಿ ಕೊಲೆ ಯತ್ನ: ಹೆಂಡ್ತಿ ಬದುಕುಳಿಯುತ್ತಿದ್ದಂತೆಯೇ ಪ್ರೇಯಸಿ ಜತೆ ಪತಿ ಆತ್ಮಹತ್ಯೆ
ಈ ಮೃತದೇಹವನ್ನು ಡೇ ಕೇರ್ ಸೆಂಟರ್‌ನಲ್ಲಿ ಇರಿಸಲು ಕುಟುಂಬವು ಪ್ರತಿ ತಿಂಗಳು ಸುಮಾರು 1.6 ಲಕ್ಷ ಶುಲ್ಕ ಪಾವತಿಸುತ್ತಿತ್ತು. ಸಂಬಂಧಿಕರು ವೃದ್ಧರ ಸಾವು ಕಾನೂನುಬದ್ಧವಾಗಿದೆ ಎಂಬುದಕ್ಕೆ ಸಂಬಂಧಿಸಿದ ಮರಣ ಪ್ರಮಾಣಪತ್ರ ಹಾಗೂ ಬೃಹನ್‌ಮುಂಬೈ ಮಹಾನಗರ ಪಾಲಿಕೆಗೆ ಸಲ್ಲಿಸಿದ್ದ ದಾಖಲೆಗಳನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಶವವನ್ನು ಯಾವಾಗ ಮತ್ತು ಹೇಗೆ ತರಲಾಯಿತು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶವ ಪತ್ತೆಯಾಗುವ 3 ತಿಂಗಳ ಮುಂಚೆಯೇ ಈ ಡೇ ಕೇರ್ ಸೆಂಟರ್ ಅನ್ನು ಬಿಎಂಸಿ ಅಧಿಕಾರಿಗಳು ಸೀಲ್ ಮಾಡಿದ್ದರು! ಆದರೆ, ಕಟ್ಟಡವನ್ನು ಸೀಲ್ ಮಾಡುವಾಗ ಒಳಗಡೆ ಸೂಕ್ತ ಪರಿಶೀಲನೆ ನಡೆಸದಿರುವುದಕ್ಕೆ ಮಾಜಿ ಕಾರ್ಪೊರೇಟರ್ ವಿನೋದ್ ಮಿಶ್ರಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಫ್ರೀಜರ್‌ನಲ್ಲಿ ಶವ ಇರುವುದು ಬಿಎಂಸಿ ಅಧಿಕಾರಿಗಳಿಗೆ ತಿಳಿದಿತ್ತೇ ಅಥವಾ ಇಲ್ಲವೇ ಎಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ.
ಇದನ್ನೂ ಓದಿ: ಬೆಂಗಳೂರು: ಬಾಲಕನ ಅಪಹರಣ, ಕೊಲೆ ಕೇಸ್; ತನಿಖೆ ವೇಳೆ ಭಾಸ್ಕರ್‌ನ ಮಾಸ್ಟರ್ ಪ್ಲಾನ್ ಬಯಲು!
ಮೃತದೇಹದ ಪ್ರಸ್ತುತ ಸ್ಥಿತಿ ಮತ್ತು ಅದನ್ನು ಇಷ್ಟೊಂದು ಸುದೀರ್ಘ ಅವಧಿಗೆ ಹೇಗೆ ಸಂರಕ್ಷಿಸಿಡಲಾಗಿತ್ತು ಎಂಬುದನ್ನು ತಿಳಿಯಲು ಪೊಲೀಸರು ಮುಂಬೈನ ಕೂಪರ್ ಆಸ್ಪತ್ರೆಯ ತಜ್ಞ ವೈದ್ಯರ ನೆರವು ಪಡೆದಿದ್ದಾರೆ. ಈ ರೀತಿ ಮೃತದೇಹವನ್ನು ಇಡುವುದರಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿದೆಯೇ ಹಾಗೂ ಡೇ ಕೇರ್ ಸೆಂಟರ್ ಆಡಳಿತ ಮಂಡಳಿಯ ಪಾತ್ರವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.
ಮೃತದೇಹದ ಪ್ರಸ್ತುತ ಸ್ಥಿತಿ ಮತ್ತು ಅದನ್ನು ಸಂರಕ್ಷಿಸಲು ಬಳಸಲಾದ ವೈಜ್ಞಾನಿಕ ವಿಧಾನಗಳನ್ನು ಅರ್ಥಮಾಡಿಕೊಳ್ಳಲು ಪೊಲೀಸರು ಮುಂಬೈನ ಕೂಪರ್ ಆಸ್ಪತ್ರೆಯ ತಜ್ಞ ವೈದ್ಯರ ನೆರವು ಪಡೆದಿದ್ದಾರೆ. ಈ ರೀತಿ ಮೃತದೇಹವನ್ನು ಕಾಯ್ದಿರಿಸುವುದರಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿದೆಯೇ ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ಪಾತ್ರವೇನು ಎಂಬುದನ್ನು ತನಿಖೆ ಮಾಡಲಾಗುತ್ತಿದೆ. ಇನ್ನೊಂದೆಡೆ, ಮೃತರ ಮಗಳು ಪ್ರಕರಣವನ್ನು ಕಾನೂನುಬದ್ಧವಾಗಿ ಎದುರಿಸಲು ವಕೀಲರನ್ನು ನೇಮಿಸಿಕೊಂಡಿದ್ದಾರೆ. ಕುರಾರ್ ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




