ಕಚೇರಿಗೆ ಮಗುವನ್ನು ಕರೆತರುವ ವಿಚಾರದಲ್ಲಿ ಗಲಾಟೆ; ಕಥುವಾದಲ್ಲಿ ಸಿಐಎಸ್‌ಎಫ್ ಶೂಟೌಟ್‌ಗೆ ಇದೇ ಕಾರಣ
ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ನಡೆದ ಭೀಕರ ಶೂಟೌಟ್ ಪ್ರಕರಣಕ್ಕೆ ಕಾರಣ ಬೆಳಕಿಗೆ ಬಂದಿದೆ. ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಜಲವಿದ್ಯುತ್ ಯೋಜನೆ ಆವರಣಕ್ಕೆ ಮಗುವನ್ನು ಕರೆತರುವ ವಿಚಾರದಲ್ಲಿ ನಡೆದ ಮಾತಿನ ಚಕಮಕಿಯೇ ಈ ಸರಣಿ ಹತ್ಯೆಗೆ ಕಾರಣ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಹೆಡ್ ಕಾನ್ಸ್‌ಟೇಬಲ್ ಅವಧೇಶ್ ಕುಮಾರ್ ಸಿಂಗ್ ತಮ್ಮ ಸೇವಾ ಎಕೆ-47 ರೈಫಲ್‌ನಿಂದ 18 ಸುತ್ತು ಗುಂಡು ಹಾರಿಸಿ, ಅಸಿಸ್ಟೆಂಟ್ ಕಮಾಂಡೆಂಟ್ ಅಂಕಿತ ಕುಮಾರ್ ಪಾಂಡೆ, ಸಬ್-ಇನ್ಸ್‌ಪೆಕ್ಟರ್ ಲಕ್ಷ್ಮಣ್ ಸಿಂಗ್, ಕಾನ್ಸ್‌ಟೇಬಲ್ ರಫೀಕ್ ಅಹಮದ್ ಹಾಗೂ ಕಾನ್ಸ್‌ಟೇಬಲ್ ಸಂದೀಪ್ ಕುಮಾರ್ ಅವರನ್ನು ಸ್ಥಳದಲ್ಲೇ ಕೊಂದಿದ್ದರು.

ಕಥುವಾ, ಸೆಪ್ಟೆಂಬರ್ 30: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಬಶೋಲಿಯಲ್ಲಿರುವ ‘ಸೇವಾ 2 ಜಲವಿದ್ಯುತ್ ಯೋಜನೆ’ ಯೂನಿಟ್‌ನಲ್ಲಿ ಮಂಗಳವಾರ ಸಂಜೆ ಅತ್ಯಂತ ದಾರುಣ ಘಟನೆ ಸಂಭವಿಸಿತ್ತು. ಕರ್ತವ್ಯದ ಸ್ಥಳಕ್ಕೆ ಪುಟ್ಟ ಮಗುವನ್ನು ಕರೆತರುವ ವಿಚಾರದಲ್ಲಿ ನಡೆದ ಮಾತಿನ ಚಕಮಕಿಯ ನಂತರ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಹೆಡ್ ಕಾನ್ಸ್‌ಟೇಬಲ್ ತನ್ನ ಸೇವಾ ಎಕೆ-47 ಬಂದೂಕಿನಿಂದ ಗುಂಡಿನ ದಾಳಿ ನಡೆಸಿ ಅಸಿಸ್ಟೆಂಟ್ ಕಮಾಂಡೆಂಟ್ ದರ್ಜೆಯ ಅಧಿಕಾರಿ ಸೇರಿದಂತೆ ನಾಲ್ವರು ಸಹೋದ್ಯೋಗಿಗಳನ್ನು ಹತ್ಯೆಗೈದಿದ್ದರು.
ಮಂಗಳವಾರ ಸಂಜೆ ಸುಮಾರು 6.40ರ ವೇಳೆಗೆ ಕಥುವಾದ ಬಶೋಲಿಯ ಮಷ್ಕಾ ಗ್ರಾಮದಲ್ಲಿರುವ ಪ್ರಾಜೆಕ್ಟ್ ಸೈಟ್‌ನಲ್ಲಿ ಈ ದುರಂತ ಸಂಭವಿಸಿದೆ. ಬಂಧಿತ ಆರೋಪಿಯನ್ನು ಹೆಡ್ ಕಾನ್ಸ್‌ಟೇಬಲ್ ಅವಧೇಶ್ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ. ಈತನ ಪತ್ನಿಯೂ ಸಹ ಸಿಐಎಸ್‌ಎಫ್‌ನಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದ ಕಥುವಾದಲ್ಲಿ ಸಹೋದ್ಯೋಗಿಯಿಂದಲೇ ಗುಂಡಿನ ದಾಳಿ; ನಾಲ್ವರು ಸಿಐಎಸ್‌ಎಫ್ ಸಿಬ್ಬಂದಿ ದಾರುಣ ಸಾವು
ಶೂಟೌಟ್‌ಗೆ ಪ್ರಚೋದನೆ ಏನು?:
ಆರೋಪಿ ಅವಧೇಶ್ ಸಿಂಗ್ ಮತ್ತು ಆತನ ಪತ್ನಿ ಹೆಡ್ ಕಾನ್ಸ್‌ಟೇಬಲ್ ಪೂಜಾ ದೇವಿ ಇಬ್ಬರೂ ಒಂದೇ ಜಲವಿದ್ಯುತ್ ಯೋಜನಾ ಸ್ಥಳದಲ್ಲಿ ಬೇರೆ ಬೇರೆ ಶಿಫ್ಟ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಒಬ್ಬರು ಕರ್ತವ್ಯಕ್ಕೆ ಹಾಜರಾದಾಗ ಮತ್ತೊಬ್ಬರು ಮನೆಗೆ ಮರಳಬೇಕಿದ್ದರಿಂದ, ಪುಟ್ಟ ಮಗುವನ್ನು ಕಚೇರಿಗೆ ಕರೆತಂದು ಒಬ್ಬರ ಶಿಫ್ಟ್ ಮುಗಿದ ಬಳಿಕ ಇನ್ನೊಬ್ಬರಿಗೆ ಹಸ್ತಾಂತರಿಸಿಕೊಳ್ಳುತ್ತಿದ್ದರು. ಸೂಕ್ಷ್ಮ ಸ್ಥಳವಾದ್ದರಿಂದ ಆ ಮಗುವನ್ನು ಸಂವೇದನಶೀಲ ಪ್ರಾಜೆಕ್ಟ್ ಸೈಟ್‌ಗೆ ಹಾಗೂ ‘ಕ್ವಾರ್ಟರ್ ಗಾರ್ಡ್’ ಪ್ರದೇಶಕ್ಕೆ ಕರೆತರದಂತೆ ದಂಪತಿಗೆ ಹಲವು ದಿನಗಳಿಂದ ಆಕ್ಷೇಪ ವ್ಯಕ್ತಪಡಿಸಿ ನಿರ್ಬಂಧಿಸಿತ್ತು.
ಮಂಗಳವಾರವೂ ಸಹ ದಂಪತಿಗಳಲ್ಲಿ ಒಬ್ಬರು ಮಗುವನ್ನು ಕರೆತಂದಾಗ, ಸಹೋದ್ಯೋಗಿಯೊಬ್ಬರು ಅಸಿಸ್ಟೆಂಟ್ ಕಮಾಂಡೆಂಟ್ ಅಂಕಿತ ಕುಮಾರ್ ಪಾಂಡೆ ಅವರಿಗೆ ದೂರು ನೀಡಿದ್ದರು. ಇದರಿಂದ ತೀವ್ರ ಕೋಪಗೊಂಡ ಅವಧೇಶ್ ಸಿಂಗ್ ಅಧಿಕಾರಿಗಳೊಂದಿಗೆ ಜಗಳವಾಡಿದ್ದರು. ಮಾತಿನ ಚಕಮಕಿಯ ನಂತರ ತೀವ್ರ ಆಕ್ರೋಶಗೊಂಡ ಅವಧೇಶ್ ಸಿಂಗ್, ಅವರ ಮೇಲೂ ಗುಂಡು ಹಾರಿಸಿ, ಮುಖ್ಯ ದ್ವಾರದ ಬಳಿಯಿರುವ ಆಪರೇಷನ್ಸ್ ಸೆಕ್ಷನ್ ಆಫೀಸ್‌ಗೆ ನುಗ್ಗಿ, ಅಲ್ಲಿದ್ದ ಮೂವರ ಮೇಲೆಯೂ ಎಕೆ-47ನಿಂದ ಸಾಲು ಸಾಲು ಗುಂಡು ಹಾರಿಸಿದ್ದರು.
ಗುಂಡಿನ ಸೌಂಡ್ ಕೇಳಿದ ತಕ್ಷಣವೇ ಧಾವಿಸಿದ ಇತರ ಸಿಐಎಸ್‌ಎಫ್ ಸಿಬ್ಬಂದಿ ಅವಧೇಶ್ ಸಿಂಗ್‌ನನ್ನು ನಿಯಂತ್ರಿಸಿ, ಆತನನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕೃತ್ಯದ ಸಮಯದಲ್ಲಿ ಆತನ ಬಳಿ 150 ಜೀವಂತ ಗುಂಡುಗಳು ಇದ್ದವು. ಆತನ ಸರ್ವಿಸ್ ರೈಫಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೃತ ಸಿಬ್ಬಂದಿಯ ವಿವರ:
ಈ ದುರಂತದಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಅಂಕಿತ ಕುಮಾರ್ ಪಾಂಡೆ, ಸಬ್-ಇನ್ಸ್‌ಪೆಕ್ಟರ್ ಲಕ್ಷ್ಮಣ್ ಸಿಂಗ್, ಕಾನ್ಸ್‌ಟೇಬಲ್ ಸಂಜೀವ್ ಕುಮಾರ್ ಹಾಗೂ ಕಾನ್ಸ್‌ಟೇಬಲ್ ಮೊಹಮ್ಮದ್ ರಫೀಕ್ ಮೃತಪಟ್ಟಿದ್ದಾರೆ. ಸಿಐಎಸ್‌ಎಫ್ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಆರೋಪಿ ಅವಧೇಶ್ ಸಿಂಗ್‌ನನ್ನು ಬಂಧಿಸಿದ್ದು, ಜಲವಿದ್ಯುತ್ ಯೋಜನಾ ಆವರಣವನ್ನು ಸಂಪೂರ್ಣವಾಗಿ ಭದ್ರತಾ ಪಡೆಗಳ ವಶಕ್ಕೆ ಪಡೆಯಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




