ಆಂಬ್ಯುಲೆನ್ಸ್ ನೀಡಲು ನಿರಾಕರಣೆ: ಕಣ್ಣೀರು ಹಾಕುತ್ತ ಮಗುವಿನ ಮೃತ ದೇಹವನ್ನು ರಟ್ಟಿನ ಪೆಟ್ಟಿಗೆಯಲ್ಲಿ ಕೊಂಡೊಯ್ದ ತಂದೆ

ಜಾರ್ಖಂಡ್‌ನ ಸರ್ಕಾರಿ ಆಸ್ಪತ್ರೆಯೊಂದರ ನಿರ್ಲಕ್ಷ್ಯಕ್ಕೆ ಸಾಕ್ಷಿಯೆಂಬಂತೆ ಆಘಾತಕಾರಿ ಘಟನೆ ನಡೆದಿದೆ. ಆಸ್ಪತ್ರೆ ಆಂಬ್ಯುಲೆನ್ಸ್ ನೀಡಲು ನಿರಾಕರಿಸಿದ ಕಾರಣ, ಒಬ್ಬ ತಂದೆ ತನ್ನ ಮೃತ ಮಗುವಿನ ದೇಹವನ್ನು ರಟ್ಟಿನ ಪೆಟ್ಟಿಗೆಯಲ್ಲಿ ಹಾಕಿ ಅಳುತ್ತಲೇ ಮನೆಗೆ ಕೊಂಡೊಯ್ದಿದ್ದಾರೆ. ಈ ಅಮಾನವೀಯ ಘಟನೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಲೋಪಗಳನ್ನು ಎತ್ತಿ ತೋರಿಸಿದ್ದು, ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.

ಆಂಬ್ಯುಲೆನ್ಸ್ ನೀಡಲು ನಿರಾಕರಣೆ: ಕಣ್ಣೀರು ಹಾಕುತ್ತ ಮಗುವಿನ ಮೃತ ದೇಹವನ್ನು ರಟ್ಟಿನ ಪೆಟ್ಟಿಗೆಯಲ್ಲಿ ಕೊಂಡೊಯ್ದ ತಂದೆ
ವೈರಲ್​​ ಪೋಸ್ಟ್​

Updated on: Mar 09, 2026 | 7:19 PM

ಚಕ್ರಧರಪುರ ಮಾ.9: ಸರ್ಕಾರಿ ಆಸ್ಪತ್ರೆ ಎಂದು ಮೂಗು ಮುರಿಯಲು ಇಂತಹ ಕೆಲವೊಂದು ಅಮಾನವೀಯ ಘಟನೆಗಳೇ ಕಾರಣ, ಇದೀಗ ಸರ್ಕಾರಿ ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯೆಂಬಂತೆ ಜಾರ್ಖಂಡ್‌ನಲ್ಲಿ (Jharkhand) ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಆಸ್ಪತ್ರೆಯು ಆಂಬ್ಯುಲೆನ್ಸ್ ನೀಡಲು ನಿರಾಕರಿಸಿದ ಕಾರಣ, ತಂದೆಯೊಬ್ಬರು ತನ್ನ ಮೃತ ಮಗುವಿನ ದೇಹವನ್ನು ಹಳೆಯ ರಟ್ಟಿನ ಪೆಟ್ಟಿಗೆಯಲ್ಲಿ ಹಾಕಿ ಅಳುತ್ತಲೇ ಊರಿಗೆ ಕೊಂಡೊಯ್ದಿದ್ದಾರೆ.ರಾಮಕೃಷ್ಣ ಹೇಂಬ್ರಾಮ್ ಎಂಬವರು ಮಾರ್ಚ್ 5 ರಂದು ತಮ್ಮ ಗರ್ಭಿಣಿ ಪತ್ನಿ ರೀತಾ ತಿರಿಯಾ (28) ಅವರನ್ನು ಚಕ್ರಧರಪುರದ ಉಪವಿಭಾಗದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ದುರದೃಷ್ಟವಶಾತ್ ಮಹಿಳೆ ಮೃತ ಶಿಶುವಿಗೆ ಜನ್ಮ ನೀಡಿದ್ದರು.

ಮೃತ ಮಗುವನ್ನು 12 ಕಿ.ಮೀ ದೂರದಲ್ಲಿರುವ ಬಂಗಾರಸಾಯಿ ಗ್ರಾಮಕ್ಕೆ ಕೊಂಡೊಯ್ಯಲು ತಂದೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವಂತೆ ಆಸ್ಪತ್ರೆ ಸಿಬ್ಬಂದಿಯನ್ನು ಅಂಗಲಾಚಿದ್ದಾರೆ. ಆದರೆ, ಆಸ್ಪತ್ರೆ ಆಡಳಿತ ಮಂಡಳಿ ಇದಕ್ಕೆ ಸ್ಪಂದಿಸಲಿಲ್ಲ ಎಂದು ಹೇಂಬ್ರಾಮ್ ಆರೋಪಿಸಿದ್ದಾರೆ. ಆಸ್ಪತ್ರೆಯ ವಾರ್ಡ್ ಬಾಯ್‌ಗಳು “ಶವವನ್ನು ಶೀಘ್ರವೇ ಇಲ್ಲಿಂದ ಹೊರಗೊಯ್ಯಿರಿ” ಎಂದು ಒತ್ತಡ ಹೇರಿದ್ದಾರೆ. ಬೇರೆ ದಾರಿ ಇಲ್ಲದೆ, ಹೇಂಬ್ರಾಮ್ ಅವರು ಆಸ್ಪತ್ರೆ ಆವರಣದಲ್ಲಿ ಬಿದ್ದಿದ್ದ ರಟ್ಟಿನ ಪೆಟ್ಟಿಗೆಯನ್ನು ತೆಗೆದುಕೊಂಡು, ಅದರಲ್ಲಿ ಮಗುವಿನ ದೇಹವನ್ನಿಟ್ಟು, ದಿನಸಿ ಚೀಲದಲ್ಲಿ ಪ್ಯಾಕ್ ಮಾಡಿ ರಿಕ್ಷಾ ಮೂಲಕ ಗ್ರಾಮಕ್ಕೆ ತೆರಳಿದ್ದಾರೆ.

ಇದನ್ನೂ ಓದಿ; ಸ್ಕೂಟರ್ ನೀಡಲು ನಿರಾಕರಿಸಿದ್ದಕ್ಕೆ ಗೆಳತಿ ಮತ್ತು ಆಕೆಯ ಪೋಷಕರ ಮೇಲೆ ಬೆಂಕಿ ಹಚ್ಚಿದ ಬೆಂಗಳೂರಿನ ವ್ಯಕ್ತಿ

ಆಸ್ಪತ್ರೆಯ ಇನ್‌ಚಾರ್ಜ್ ಡಾ. ಅಂಶುಮಾನ್ ಶರ್ಮಾ ಅವರು ಈ ಆರೋಪವನ್ನು ನಿರಾಕರಿಸಿದ್ದಾರೆ. “ರೋಗಿಯ ಕುಟುಂಬದವರು ಆಂಬ್ಯುಲೆನ್ಸ್‌ಗಾಗಿ ಯಾವುದೇ ವಿನಂತಿ ಮಾಡಿರಲಿಲ್ಲ. ಕೇಳಿದ್ದರೆ ಖಂಡಿತ ವ್ಯವಸ್ಥೆ ಮಾಡುತ್ತಿದ್ದೆವು” ಎಂದಿದ್ದಾರೆ. ಆದರೆ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ) ಅಜಯ್ ಕುಮಾರ್ ಸಿಂಗ್ ಅವರು ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.ಕಳೆದ ಡಿಸೆಂಬರ್‌ನಲ್ಲಿ ಇದೇ ಜಿಲ್ಲೆಯಲ್ಲಿ 4 ತಿಂಗಳ ಮಗುವಿನ ಶವವನ್ನು ತಂದೆಯೊಬ್ಬರು ಪ್ಲಾಸ್ಟಿಕ್ ಚೀಲದಲ್ಲಿ ಕೊಂಡೊಯ್ದಿದ್ದ ಘಟನೆಯೂ ವರದಿಯಾಗಿತ್ತು.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us