ಜಾರ್ಖಂಡ್​ನಲ್ಲಿ 17ನೇ ದಿನಕ್ಕೆ ಕಾಲಿಟ್ಟ ವಿದ್ಯಾರ್ಥಿಗಳ ಪ್ರತಿಭಟನೆ; ವಿಧಾನಸೌಧ ಮುತ್ತಿಗೆಗೆ ಯತ್ನ; ಜಲಫಿರಂಗಿಗೂ ಬೆದರದ ಯುವಜನರು

Jharkhand students protest enter 17th day: ಜಾರ್ಖಂಡ್​ನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳು ನಡೆದಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ಮುಂದುವರಿಸಿದ್ದಾರೆ. ಪ್ರತಿಭಟನೆಯ 17ನೇ ದಿನ ಉಗ್ರ ರೂಪ ಪಡೆದಿದ್ದು, ವಿದ್ಯಾರ್ಥಿಗಳು ವಿಧಾನಸೌಧ ಮುತ್ತಿಗೆಗೆ ಪ್ರಯತ್ನಿಸಿದ್ದಾರೆ. ಜಾರ್ಖಂಡ್ ಪೊಲೀಸರು ಜಲಫಿರಂಗಿ ಬಳಸಿ ವಿದ್ಯಾರ್ಥಿಗಳನ್ನು ತಡೆಯಲು ಯತ್ನಿಸುತ್ತಿದ್ದಾರೆ.

ಜಾರ್ಖಂಡ್​ನಲ್ಲಿ 17ನೇ ದಿನಕ್ಕೆ ಕಾಲಿಟ್ಟ ವಿದ್ಯಾರ್ಥಿಗಳ ಪ್ರತಿಭಟನೆ; ವಿಧಾನಸೌಧ ಮುತ್ತಿಗೆಗೆ ಯತ್ನ; ಜಲಫಿರಂಗಿಗೂ ಬೆದರದ ಯುವಜನರು
ವಿದ್ಯಾರ್ಥಿಗಳ ಪ್ರತಿಭಟನೆ
Image Credit source: PTI

Updated on: Aug 10, 2026 | 1:48 PM

ರಾಂಚಿ, ಆಗಸ್ಟ್ 10: ಪರೀಕ್ಷಾ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯನ್ನು ವಿರೋಧಿಸಿ ಜಾರ್ಖಂಡ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟ 17ನೇ ದಿನಕ್ಕೆ ಕಾಲಿಟ್ಟಿದ್ದು, ತೀವ್ರ ಸ್ವರೂಪ ಪಡೆದುಕೊಂಡಿದೆ. ಇಂದು ಸಾವಿರಾರು ವಿದ್ಯಾರ್ಥಿಗಳು ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ಮುರಿದು ಜಾರ್ಖಂಡ್ ವಿಧಾನಸಭೆಯತ್ತ ಮೆರವಣಿಗೆಯನ್ನು (Jharkhand Students Protest) ಮುಂದುವರಿಸಿದ್ದಾರೆ. ವಿದ್ಯಾರ್ಥಿಗಳು ಮುನ್ನುಗ್ಗುವುದನ್ನು ತಡೆಯಲು ಪೊಲೀಸರು ನೀರಿನ ಕ್ಯಾನಾನ್​ಗಳನ್ನು ಬಳಸಿ, ಗುಂಪು ಚದುರಿಸಲು ಯತ್ನಿಸುತ್ತಿದ್ಧಾರೆ. ಬೃಹತ್ ವಾಟರ್ ಗನ್​ಗಳಿಂದ ವೇಗವಾಗಿ ರಾಚುತ್ತಿರುವ ನೀರಿನ ಮಧ್ಯದಲ್ಲೇ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಡ್ಯಾನ್ಸ್ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ.

ಬ್ಯಾರಿಕೇಡ್ ಭೇದಿಸಿ ಮುನ್ನುಗ್ಗಿದ ವಿದ್ಯಾರ್ಥಿಗಳು

ರಾಜ್ಯದ ವಿವಿಧ ಜಿಲ್ಲೆಗಳಿಂದ ರೈಲು, ಬಸ್ ಮತ್ತು ಖಾಸಗಿ ವಾಹನಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳು ರಾಜಧಾನಿ ರಾಂಚಿಗೆ ಆಗಮಿಸಿದ್ದಾರೆ. ಕೈಯಲ್ಲಿ ತ್ರಿವರ್ಣ ಧ್ವಜ ಹಾಗೂ ಬ್ಯಾನರ್‌ಗಳನ್ನು ಹಿಡಿದು ‘ವಿಧಾನಸಭಾ ಚಲೋ’ ನಡೆಸುತ್ತಿರುವ ವಿದ್ಯಾರ್ಥಿಗಳು, ಪೊಲೀಸರ ತಡೆಯನ್ನು ಮೀರಿ ವಿಧಾನಸೌಧದತ್ತ ಹೆಜ್ಜೆ ಹಾಕುತ್ತಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆಗೆ ಕೈಜೋಡಿಸಿದ ದೇವೇಂದ್ರ ಮಹತೋ

ಪರೀಕ್ಷಾ ಅಕ್ರಮಗಳ ವಿರುದ್ಧ ಕಳೆದ 9 ದಿನಗಳಿಂದ ಉಪವಾಸ ನಿರಶನ ಕೂತಿದ್ದ ವಿದ್ಯಾರ್ಥಿ ಮುಖಂಡ ದೇವೇಂದ್ರ ಮಹತೋ ಅವರು ಆಂಬುಲೆನ್ಸ್ ಮೂಲಕ ಪ್ರತಿಭಟನಾ ಸ್ಥಳಕ್ಕೆ ಬಂದು, ವಿದ್ಯಾರ್ಥಿಗಳಿಗೆ ಸ್ಥೈರ್ಯ ತುಂಬಲು ಯತ್ನಿಸಿದ್ದಾರೆ. ಪೊಲೀಸರೊಂದಿಗೆ ವಾದ ಮಾಡಿ ಕಾಲಹರಣ ನಡೆಸದರೆ, ವಿಧಾನಸೌಧ ಪ್ರವೇಶಿಸಲು ಬೇರೆ ಬೇರೆ ಮಾರ್ಗಗಳನ್ನು ಹುಡುಕುವಂತೆ ಹುರಿದುಂಬಿಸುತ್ತಿರುವುದು ಕಂಡು ಬಂದಿತು.

ಇದನ್ನೂ ಓದಿ: ಜಾರ್ಖಂಡ್ ಪರೀಕ್ಷಾ ಅಕ್ರಮಗಳ ವಿರುದ್ಧ ಹೋರಾಟ; ಸರ್ಕಾರ-ವಿದ್ಯಾರ್ಥಿಗಳ ಮಾತುಕತೆ 2ನೇ ಸುತ್ತಿಗೆ; ವಿದ್ಯಾರ್ಥಿಗಳಿಗೆ ಸರ್ಕಾರದ ಭರವಸೆಗಳು

ಸರ್ಕಾರ ಮತ್ತು ವಿದ್ಯಾರ್ಥಿಗಳ ಮಾತುಕತೆ ವಿಫಲ

ಸರ್ಕಾರ ರಚಿಸಿದ ಸಮಿತಿ ಮತ್ತು ವಿದ್ಯಾರ್ಥಿ ಸಂಘಟನೆಗಳ ನಡುವೆ ನಡೆದ 6 ನೇ ಸುತ್ತಿನ ಮಾತುಕತೆಯೂ ವಿಫಲವಾಗಿದೆ. ಸರ್ಕಾರವು ಶೇ. 98 ರಷ್ಟು ಬೇಡಿಕೆಗಳನ್ನು ಈಡೇರಿಸಲು ಸಿದ್ಧವಿದ್ದು, 3 ಪರೀಕ್ಷೆಗಳನ್ನು ರದ್ದುಗೊಳಿಸಲು ಒಪ್ಪಿದೆ ಎಂದು ಹೇಳಿದೆ. ಆದರೆ ವಿದ್ಯಾರ್ಥಿಗಳು 13 ಪರೀಕ್ಷೆಗಳನ್ನು ರದ್ದುಗೊಳಿಸಬೇಕು ಮತ್ತು ಅಕ್ರಮದ ಕುರಿತು ಸಿಬಿಐ (CBI) ತನಿಖೆ ನಡೆಸಬೇಕೆಂದು ಪಟ್ಟು ಹಿಡಿದಿದ್ದಾರೆ.

JPSC ಯಲ್ಲಿ ಪ್ರಮುಖ ರಾಜೀನಾಮೆಗಳು

ಅಕ್ರಮಗಳ ತನಿಖೆಗೆ ಸಂಬಂಧಿಸಿದಂತೆ ಸಿಐಡಿ (CID) ಸಮನ್ಸ್ ನೀಡಿದ ಬೆನ್ನಲ್ಲೇ ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗದ (JPSC) ಮೂವರು ಸದಸ್ಯರು ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಮುನ್ನ ಜುಲೈ 22 ರಂದು ಜೆಪಿಎಸ್‌ಸಿ ಅಧ್ಯಕ್ಷ ಎಲ್. ಖಿಯಾಂಗ್ತೆ ಕೂಡ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಇದನ್ನೂ ಓದಿ: ಬೆಂಗಳೂರು-ಮುಂಬೈ ಮಾರ್ಗಕ್ಕೆ ವಂದೇ ಭಾರತ್ ಸ್ಲೀಪರ್ ಸಿದ್ಧ: ಬೆಂಗಳೂರಿನಲ್ಲೇ ತಯಾರಾದ ರೈಲಿನ ಪ್ರಾಯೋಗಿಕ ಸಂಚಾರ ಶೀಘ್ರ

ರಾಂಚಿ ನಗರದಲ್ಲಿ ಬಿಗಿ ಭದ್ರತೆ

  • ಸಂಚಾರ ಮತ್ತು ಶಾಲಾ ಬಂದ್: ಮುನ್ನೆಚ್ಚರಿಕಾ ಕ್ರಮವಾಗಿ ರಾಂಚಿಯ ಪ್ರಮುಖ ಶಾಲೆಗಳನ್ನು ಮುಚ್ಚಲಾಗಿದೆ. ಜಿಲ್ಲಾ ಗಡಿಗಳಲ್ಲಿ ಮತ್ತು ಹೆದ್ದಾರಿಗಳಲ್ಲಿ ಪೊಲೀಸರು ವಾಹನಗಳನ್ನು ತೀವ್ರ ತನಿಖೆಗೆ ಒಳಪಡಿಸುತ್ತಿದ್ದಾರೆ.
  • ಸತ್ಯಾಗ್ರಹ ಮತ್ತು ಉಪವಾಸ: ಪ್ರತಿಭಟನೆಯ ಭಾಗವಾಗಿ ಆರು ಪ್ರಮುಖ ವಿದ್ಯಾರ್ಥಿ ನಾಯಕರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದಾರೆ.
  • ಬಿಜೆಪಿ ಪ್ರತಿಭಟನೆ: ಇತ್ತ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿ ಬಿಜೆಪಿ ನಾಯಕರು ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಅಧಿಕೃತ ನಿವಾಸದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಅಕ್ರಮ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಭರವಸೆ ನೀಡಿದ್ದರೂ, ಸಿಬಿಐ ತನಿಖೆಗೆ ಆದೇಶಿಸುವವರೆಗೆ ಹೋರಾಟ ಹಿಂಪಡೆಯುವುದಿಲ್ಲ ಎಂದು ‘JPSC-JSSC ಸುಧಾರಣಾ ಮಂಚ್’ ನಾಯಕ ರವೀಂದ್ರ ಪಾಸ್ವಾನ್ ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us