ರಾಷ್ಟ್ರೀಯ ಭದ್ರತೆಗೆ ವಿರುದ್ಧವಾಗಿ ವರ್ತಿಸಿದರೆ ಪತ್ರಕರ್ತರ ಮಾನ್ಯತೆ ರದ್ದು; ಕೇಂದ್ರ ಸರ್ಕಾರದಿಂದ ನೂತನ ಮಾರ್ಗಸೂಚಿ ಬಿಡುಗಡೆ
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಬಿಡುಗಡೆ ಮಾಡಿರುವ ‘ಕೇಂದ್ರೀಯ ಮಾಧ್ಯಮ ಮಾನ್ಯತೆ ಮಾರ್ಗಸೂಚಿಗಳು-2022’ರಲ್ಲಿ ಉಲ್ಲೇಖಿಸಿರುವ ನೂತನ ಮಾರ್ಗಸೂಚಿಗಳ ಮಾಹಿತಿ ಹೀಗಿದೆ.
ನವದೆಹಲಿ: ಪತ್ರಕರ್ತರು “ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ರಾಜ್ಯದ ಭದ್ರತೆ, ಅನ್ಯ ರಾಜ್ಯಗಳೊಂದಿಗೆ ಸೌಹಾರ್ದ ಸಂಬಂಧ, ಸಾರ್ವಜನಿಕ ಸುವ್ಯವಸ್ಥೆ, ಸಭ್ಯತೆ ಅಥವಾ ನೈತಿಕತೆ ಅಥವಾ ನ್ಯಾಯಾಂಗ ನಿಂದನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಭದ್ರತೆಗೆ ವಿರುದ್ಧವಾಗಿ ಅಥವಾ ಪೂರ್ವಾಗ್ರಹ ಪೀಡಿತವಾಗಿ ವರ್ತಿಸಿದರೆ ಅವರ ಮಾನ್ಯತೆಯನ್ನು ರದ್ದುಗೊಳಿಸಲು ಅವಕಾಶವಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧೀನ ಏಜೆನ್ಸಿಯಾದ PIB ತಿಳಿಸಿದೆ.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಬಿಡುಗಡೆ ಮಾಡಿರುವ ‘ಕೇಂದ್ರೀಯ ಮಾಧ್ಯಮ ಮಾನ್ಯತೆ ಮಾರ್ಗಸೂಚಿಗಳು-2022’ರಲ್ಲಿ ಉಲ್ಲೇಖಿಸಿರುವ ನೂತನ ಮಾರ್ಗಸೂಚಿಗಳಲ್ಲಿ ಈ ವಿಷಯವನ್ನು ತಿಳಿಸಲಾಗಿದೆ. ಮಿತ್ರ ರಾಷ್ಟ್ರಗಳೊಂದಿಗಿನ ಸಂಬಂಧಗಳ ಮೇಲೆ ಪರಿಣಾಮ ಬೀರುವುದು, ನ್ಯಾಯಾಂಗ ನಿಂದನೆ, ಮಾನನಷ್ಟ ಅಥವಾ ಅಪರಾಧಕ್ಕೆ ಪ್ರಚೋದಿಸುವಂತಹ ವಿಷಯಗಳಲ್ಲಿ ಪತ್ರಕರ್ತರು ಪೂರ್ವಗ್ರಹಪೀಡಿತರಂತೆ ವರ್ತಿಸಬಾರದು. ಒಂದುವೇಳೆ ಇಂತಹ ನಡವಳಿಕೆ ಕಂಡುಬಂದರೆ ಅವರಿಗೆ ನೀಡಿರುವ ಮಾನ್ಯತೆಯನ್ನು ರದ್ದುಗೊಳಿಸಬಹುದಾಗಿದೆ’ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳ ಅಡಿಯಲ್ಲಿ ತಮ್ಮ ವಿವರಗಳನ್ನು ಸಚಿವಾಲಯದೊಂದಿಗೆ ದಾಖಲಿಸಿರುವ ಮತ್ತು ಸಂಗ್ರಾಹಕರಲ್ಲದ ಡಿಜಿಟಲ್ ಮಾಧ್ಯಮ ಸುದ್ದಿ ಪ್ರಕಾಶಕರಿಗಾಗಿ ಕೆಲಸ ಮಾಡುವ ಪತ್ರಕರ್ತರು ಈಗ ಮಾನ್ಯತೆಗೆ ಅರ್ಹರಾಗಿರುತ್ತಾರೆ. ಮಾನ್ಯತೆ ಪಡೆಯಲು ಅವರು ಕನಿಷ್ಠ ಐದು ವರ್ಷಗಳ ಅನುಭವವನ್ನು ಹೊಂದಿರಬೇಕು. ವೆಬ್‌ಸೈಟ್ ಕನಿಷ್ಠ ಒಂದು ವರ್ಷ ಹಳೆಯದಾಗಿರಬೇಕು ಮತ್ತು ಒಬ್ಬ ಪತ್ರಕರ್ತ ಮಾನ್ಯತೆ ಪಡೆಯಲು ಹಿಂದಿನ ಆರು ತಿಂಗಳುಗಳಲ್ಲಿ ಕನಿಷ್ಠ ಒಂದು ಮಿಲಿಯನ್‌ನಿಂದ ಐದು ಮಿಲಿಯನ್ ವ್ಯೂಗಳನ್ನು ಹೊಂದಿರಬೇಕು.
ಇದರ ಜೊತೆಗೆ ಆನ್‌ಲೈನ್ ಸುದ್ದಿ ವೇದಿಕೆಗಳಲ್ಲಿ ಕಾರ್ಯ ನಿರ್ವಹಿಸುವ ಪತ್ರಕರ್ತರಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಲಾಗಿದೆ. ಸುದ್ದಿಗಳನ್ನು ಸಂಗ್ರಹಿಸಿ, ಜನರಿಗೆ ಒದಗಿಸುವ ಕಾರ್ಯದಲ್ಲಿ ನಿರತರಾದವರನ್ನು ಮಾನ್ಯತೆಗಾಗಿ ಪರಿಗಣಿಸುವುದಿಲ್ಲ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ನಾಳೆಯಿಂದ 3 ದಿನ ಶಾಲೆ-ಕಾಲೇಜುಗಳಿಗೆ ರಜೆ; ಕರ್ನಾಟಕ ಸರ್ಕಾರದಿಂದ ಘೋಷಣೆ