ನೆಹರು ತೆಗೆದುಕೊಂಡ ಸಿಂಧೂ ಜಲ ಒಪ್ಪಂದದ ನಿರ್ಧಾರ ಅತಿ ದೊಡ್ಡ ಪ್ರಮಾದ; ಜೆಪಿ ನಡ್ಡಾ ಆಕ್ರೋಶ

ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಮೂಲಕ ಪ್ರಧಾನಿ ಮೋದಿ ಕಾಂಗ್ರೆಸ್ ಮಾಡಿದ ಮತ್ತೊಂದು ಗಂಭೀರ ಐತಿಹಾಸಿಕ ತಪ್ಪನ್ನು ಸರಿಪಡಿಸಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ. 1960ರ ಸಿಂಧೂ ಜಲ ಒಪ್ಪಂದವು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ವೈಯಕ್ತಿಕ ಮಹತ್ವಾಕಾಂಕ್ಷೆಗಳಿಗಾಗಿ ರಾಷ್ಟ್ರೀಯ ಹಿತಾಸಕ್ತಿಯ ಜೊತೆ ರಾಜಿ ಮಾಡಿಕೊಂಡ ದೊಡ್ಡ ಪ್ರಮಾದಗಳಲ್ಲಿ ಒಂದಾಗಿದೆ ಎಂದಿದ್ದಾರೆ.

ನೆಹರು ತೆಗೆದುಕೊಂಡ ಸಿಂಧೂ ಜಲ ಒಪ್ಪಂದದ ನಿರ್ಧಾರ ಅತಿ ದೊಡ್ಡ ಪ್ರಮಾದ; ಜೆಪಿ ನಡ್ಡಾ ಆಕ್ರೋಶ
Jp Nadda

Updated on: Aug 18, 2025 | 5:50 PM

ನವದೆಹಲಿ, ಆಗಸ್ಟ್ 18: ಪಾಕಿಸ್ತಾನದ ಜೊತೆ ಭಾರತ ಮಾಡಿಕೊಂಡ ಸಿಂಧೂ ಜಲ ಒಪ್ಪಂದದ (Indus Waters Treaty) ನಿರ್ಧಾರ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಮಾಡಿದ ಅತಿ ದೊಡ್ಡ ಪ್ರಮಾದಗಳಲ್ಲಿ ಒಂದು. ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಪಾಕಿಸ್ತಾನದೊಂದಿಗೆ (Pakistan) ಸಿಂಧೂ ಜಲ ಒಪ್ಪಂದಕ್ಕೆ ಸಹಿ ಹಾಕಿದಾಗ, ಅವರು ಏಕಪಕ್ಷೀಯವಾಗಿ ಸಿಂಧೂ ಜಲಾನಯನ ಪ್ರದೇಶದ ನೀರಿನ ಶೇ. 80ರಷ್ಟನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿದರು. ಇದರಿಂದಾಗಿ ಭಾರತಕ್ಕೆ ಕೇವಲ ಶೇ. 20ರಷ್ಟು ಪಾಲು ಮಾತ್ರ ಸಿಕ್ಕಿತು. ಇದು ಭಾರತದ ನೀರಿನ ಭದ್ರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯನ್ನು ಶಾಶ್ವತವಾಗಿ ರಾಜಿ ಮಾಡಿಕೊಂಡ ನಿರ್ಧಾರವಾಗಿತ್ತು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಹೇಳಿದ್ದಾರೆ.

1960ರ ಸಿಂಧೂ ಜಲ ಒಪ್ಪಂದವು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಅತಿದೊಡ್ಡ ಪ್ರಮಾದಗಳಲ್ಲಿ ಒಂದಾಗಿದೆ ಎಂದು ಬಿಜೆಪಿ ಮುಖ್ಯಸ್ಥ ಜೆ.ಪಿ. ನಡ್ಡಾ ಹೇಳಿದ್ದಾರೆ. ಈ ಬಗ್ಗೆ ಎಕ್ಸ್​​ನಲ್ಲಿ ಸರಣಿ ಪೋಸ್ಟ್‌ಗಳನ್ನು ಮಾಡಿರುವ ಜೆಪಿ ನಡ್ಡಾ, “ಮಾಜಿ ಪ್ರಧಾನಿ ಪಂಡಿತ್ ನೆಹರು ಏಕಪಕ್ಷೀಯವಾಗಿ ಸಿಂಧೂ ಜಲಾನಯನ ಪ್ರದೇಶದ ನೀರಿನ ಶೇ. 80ರಷ್ಟು ಭಾಗವನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿದರು. ಇದರಿಂದಾಗಿ ಭಾರತಕ್ಕೆ ಕೇವಲ ಶೇ. 20ರಷ್ಟು ಪಾಲು ಮಾತ್ರ ಸಿಕ್ಕಿತು. ಅತ್ಯಂತ ಭಯಾನಕ ಅಂಶವೆಂದರೆ ನೆಹರು ಭಾರತೀಯ ಸಂಸತ್ತನ್ನು ಸಂಪರ್ಕಿಸದೆ ಈ ನಿರ್ಧಾರ ತೆಗೆದುಕೊಂಡರು. ಈ ಒಪ್ಪಂದಕ್ಕೆ ಸೆಪ್ಟೆಂಬರ್ 1960ರಲ್ಲಿ ಸಹಿ ಹಾಕಲಾಯಿತು. ಆದರೆ ಅದನ್ನು ಎರಡು ತಿಂಗಳ ನಂತರ ಅಂದರೆ ನವೆಂಬರ್‌ನಲ್ಲಿ ಕೇವಲ 2 ಗಂಟೆಗಳ ಸಾಂಕೇತಿಕ ಚರ್ಚೆಗಾಗಿ ಸಂಸತ್ತಿನ ಮುಂದೆ ಇಡಲಾಯಿತು” ಎಂದು ಟೀಕಿಸಿದ್ದಾರೆ.


ಇದನ್ನೂ ಓದಿ: ಸಿಂಧೂ ಜಲ ಒಪ್ಪಂದ; ಮತ್ತೆ ನೀರು ಬಿಡಲು ಭಾರತಕ್ಕೆ ಪಾಕಿಸ್ತಾನ ಮನವಿ


“ಇತಿಹಾಸವು ನೆಹರು ಅವರ ಆ ನಿರ್ಧಾರವನ್ನು ಏನೆಂದು ಕರೆಯಬೇಕು? ಅದು ನೆಹರೂ ಅವರ ಹಿಮಾಲಯನ್ ಪ್ರಮಾದ” ಎಂದು ಜೆಪಿ ನಡ್ಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸಂಸತ್ತನ್ನು ಕಡೆಗಣಿಸಿದ, ಹಲವು ತಲೆಮಾರುಗಳಿಂದ ಭಾರತದ ಕೈಗಳನ್ನು ಕಟ್ಟಿಹಾಕಿದ ಪ್ರಧಾನಿ ನೆಹರು. ಪ್ರಧಾನಿ ಮೋದಿಯವರ ದಿಟ್ಟ ನಾಯಕತ್ವ ಮತ್ತು ರಾಷ್ಟ್ರ ಮೊದಲು ಎಂಬ ಬದ್ಧತೆ ಇಲ್ಲದಿದ್ದರೆ ಇಂದಿಗೂ ಭಾರತ ನೆಹರು ಎಂಬ ಒಬ್ಬ ವ್ಯಕ್ತಿಯ ತಪ್ಪಾದ ಆದರ್ಶವಾದಕ್ಕೆ ಬೆಲೆ ತೆರುತ್ತಲೇ ಇರುತ್ತಿತ್ತು” ಎಂದು ನಡ್ಡಾ ಹೇಳಿದ್ದಾರೆ.


ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಮೂಲಕ ಪ್ರಧಾನಿ ಮೋದಿ ಕಾಂಗ್ರೆಸ್ ಮಾಡಿದ ಮತ್ತೊಂದು ಗಂಭೀರ ಐತಿಹಾಸಿಕ ತಪ್ಪನ್ನು ಸರಿಪಡಿಸಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಹೇಳಿದ್ದಾರೆ. ಏಪ್ರಿಲ್ 22ರಂದು 26 ಜೀವಗಳನ್ನು ಬಲಿ ಪಡೆದ ಪಹಲ್ಗಾಮ್ ದಾಳಿಯ ನಂತರ ಭಾರತ ಮೊದಲ ಬಾರಿಗೆ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 5:48 pm, Mon, 18 August 25