- Kannada News Photo gallery NDA Floor Leaders meeting at Union Minister Pralhad Joshi residence over Vice Presidential election
ಗರಿಗೆದರಿದ ಉಪರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನಿವಾಸದಲ್ಲಿ ಸಭೆ
ಉಪರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ತನ್ನ ಅಭ್ಯರ್ಥಿಯ ಹೆಸರನ್ನು ಘೋಷಿಸಿದೆ. ಮಹಾರಾಷ್ಟ್ರದ ರಾಜ್ಯಪಾಲ ಹಾಗೂ ಬಿಜೆಪಿ ಹಿರಿಯ ನಾಯಕ ಸಿ.ಪಿ. ರಾಧಾಕೃಷ್ಣನ್ ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಇದರ ನಂತರ ಈಗ ಚುನಾವಣೆಯಲ್ಲಿ ಸಿ.ಪಿ ರಾಧಾಕೃಷ್ಣನ್ ಅವರ ಗೆಲುವಿಗಾಗಿ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಅಲ್ಲದೆ, ಇದಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮಾತನಾಡಿದ್ದಾರೆ.
Updated on: Aug 18, 2025 | 7:02 PM

ಎನ್ಡಿಎಯಿಂದ ಉಪರಾಷ್ಟ್ರಪತಿ ಚುನಾವಣೆಗೆ ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ ಅವರ ಹೆಸರನ್ನು ಘೋಷಿಸಲಾಗಿದೆ. ಇಂಡಿಯಾ ಬಣದಿಂದ ಇನ್ನೂ ಯಾವುದೇ ಹೆಸರನ್ನು ಘೋಷಿಸಿಲ್ಲ. ಈಗಾಗಲೇ ಎನ್ಡಿಎ ಬಣದಲ್ಲಿ ಉಪರಾಷ್ಟ್ರಪತಿ ಚುನಾವಣೆಯ ಪ್ರಕ್ರಿಯೆಗಳು ಗರಿಗೆದರಿವೆ. ಈಗಾಗಲೇ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನಿವಾಸದಲ್ಲಿ ಎನ್ ಡಿಎ ನಾಯಕರ ಪ್ರಮುಖ ಸಭೆ ನಡೆಯುತ್ತಿದೆ.

ದೆಹಲಿಗೆ ಆಗಮಿಸಿರುವ ರಾಧಾಕೃಷ್ಣನ್ ಅವರನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ನಿವಾಸದಲ್ಲಿ ಸಭೆ ನಡೆಯುತ್ತಿದ್ದು, ಇದರಲ್ಲಿ ಬಿಜೆಪಿ ನಾಯಕರು ಹಾಗೂ ಮಿತ್ರಪಕ್ಷಗಳ ನಾಯಕರು ಭಾಗವಹಿಸಿದ್ದಾರೆ.

ಉಪ ರಾಷ್ಟ್ರಪತಿ ಹುದ್ದೆಯ ಎನ್ಡಿಎ ಅಭ್ಯರ್ಥಿ ಸಿ.ಪಿ ರಾಧಾಕೃಷ್ಣನ್ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಪ್ರಲ್ಹಾದ್ ಜೋಶಿಯವರ ನಿವಾಸದಲ್ಲಿ ಉಳಿದುಕೊಳ್ಳಲಿದ್ದಾರೆ. ಇಂದಿನ ಸಭೆಯಲ್ಲಿ ಉಪರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಯಲಿದೆ. ಈ ಸಭೆಯಲ್ಲಿ, ಉಪರಾಷ್ಟ್ರಪತಿ ಚುನಾವಣೆಗೆ ಸಿಪಿ ರಾಧಾಕೃಷ್ಣನ್ ಅವರ ನಾಮನಿರ್ದೇಶನಕ್ಕೆ ಕಾರ್ಯತಂತ್ರ ರೂಪಿಸಲಾಗುವುದು.

ಪ್ರಲ್ಹಾದ್ ಜೋಶಿ ಅವರನ್ನು ಉಪರಾಷ್ಟ್ರಪತಿ ಚುನಾವಣೆಗೆ ಸಂಯೋಜಕರನ್ನಾಗಿ ಮಾಡಲಾಗಿದೆ. ಇಂದಿನ ಸಭೆಯಲ್ಲಿ ನಾಮಪತ್ರ ಸಲ್ಲಿಕೆ ಯಾವಾಗ ನಡೆಯುತ್ತದೆ, ಯಾರು ಪ್ರಸ್ತಾಪಕರು, ಈ ಎಲ್ಲಾ ವಿಷಯಗಳನ್ನು ಚರ್ಚಿಸಲಾಗುವುದು. ಇಂದು ಬೆಳಗ್ಗೆ ಪ್ರಧಾನಿ ಮೋದಿ ಅವರನ್ನು ಸಿಪಿ ರಾಧಾಕೃಷ್ಣನ್ ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಉಪರಾಷ್ಟ್ರಪತಿ ಚುನಾವಣೆ ಸೆಪ್ಟೆಂಬರ್ 9ರಂದು ನಡೆಯಲಿದೆ. ಅದೇ ದಿನ ಮತದಾನ ಹಾಗೂ ಮತ ಎಣಿಕೆಯೂ ನಡೆಯಲಿದೆ. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 21 ಆಗಿದ್ದು, ಅಭ್ಯರ್ಥಿಗಳು ಆಗಸ್ಟ್ 25ರವರೆಗೆ ತಮ್ಮ ನಾಮಪತ್ರವನ್ನು ಹಿಂಪಡೆಯಬಹುದು.

ಎನ್‌ಡಿಎಯ ಉಪರಾಷ್ಟ್ರಪತಿ ಅಭ್ಯರ್ಥಿ ರಾಧಾಕೃಷ್ಣನ್ ಮಹಾರಾಷ್ಟ್ರದ 24ನೇ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಈ ಹಿಂದೆ ಫೆಬ್ರವರಿ 2023ರಿಂದ ಜುಲೈ 2024ರವರೆಗೆ ಜಾರ್ಖಂಡ್ ರಾಜ್ಯಪಾಲರ ಜವಾಬ್ದಾರಿಯನ್ನು ಸಹ ನಿರ್ವಹಿಸಿದ್ದಾರೆ. ಅವರು ತೆಲಂಗಾಣ ರಾಜ್ಯಪಾಲ ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಹೆಚ್ಚುವರಿ ಜವಾಬ್ದಾರಿಯನ್ನು ಸಹ ನಿರ್ವಹಿಸಿದ್ದಾರೆ. ಹಿರಿಯ ಬಿಜೆಪಿ ನಾಯಕ ರಾಧಾಕೃಷ್ಣನ್ ಕೊಯಮತ್ತೂರಿನಿಂದ ಎರಡು ಬಾರಿ ಸಂಸದರಾಗಿದ್ದಾರೆ. ಇದಕ್ಕೂ ಮೊದಲು ಅವರು ತಮಿಳುನಾಡು ಬಿಜೆಪಿಯ ರಾಜ್ಯ ಅಧ್ಯಕ್ಷರೂ ಆಗಿದ್ದರು.




