ನವದೆಹಲಿ/ಬೆಂಗಳೂರು, ಏಪ್ರಿಲ್ 08: ಕೇಂದ್ರ ಸರ್ಕಾರದಿಂದ (Union Government) ಬರ ಪರಿಹಾರ ಕೊಡಿಸುವಂತೆ ಕರ್ನಾಟಕ ಸರ್ಕಾರ (Karnataka Government) ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, “ಎಲ್ಲ ವಿಚಾರಗಳಿಗೂ ರಾಜ್ಯಗಳು ಸುಪ್ರೀಂಕೋರ್ಟ್ಗೆ ಬರಬೇಕಾ?” ಎಂದು ಕೇಂದ್ರ ಸರ್ಕಾರಕ್ಕೆ ಖಾರವಾಗಿ ಪ್ರಶ್ನಿಸಿತು. ಇದಕ್ಕೆ, “ಎರಡು ವಾರದಲ್ಲಿ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ” ಎಂದು ಕೇಂದ್ರ ಸರ್ಕಾರ ಪರವಾಗಿ ವಾದ ಮಂಡಿಸಿದ ವಕೀಲ ಎಸ್‌ಜಿ ಮೆಹ್ತಾ ಕೋರ್ಟ್ ತಿಳಿಸಿದರು.
ಕರ್ನಾಟಕ ಸರ್ಕಾರ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ: ಬರ ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಕಳೆದ ವರ್ಷ ಡಿಸೆಂಬರ್ನಲ್ಲೇ ಕರ್ನಾಟಕ ಸರ್ಕಾರ ಮನವಿ ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡಿಲ್ಲ. ಹೀಗಾಗಿ ಸುಪ್ರೀಂಕೋರ್ಟ್ನಲ್ಲಿ ಕರ್ನಾಟಕ ಸರ್ಕಾರ ಅರ್ಜಿ ಸಲ್ಲಿಸಿದೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್: ಎಲ್ಲ ವಿಚಾರಗಳಿಗೂ ರಾಜ್ಯಗಳು ಸುಪ್ರೀಂಕೋರ್ಟ್ಗೆ ಬರಬೇಕಾ? ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿತು.
ಕೇಂದ್ರ ಸರ್ಕಾರದ ಪರ ವಕೀಲರ ವಾದ: ಎರಡು ವಾರದಲ್ಲಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ನ್ಯಾಯ ಪೀಠಕ್ಕೆ ತಿಳಿಸಿದರು.
ವಾದ ಬಗೆಹರಿಸುತ್ತೇವೆ ಎಂದು ಸುಪ್ರೀಂಕೋರ್ಟ್ನಲ್ಲಿ ಕೇಂದ್ರ ಸರ್ಕಾರ ಹೇಳಿದೆ. ಅಟಾರ್ನಿ ಜನರಲ್, ಸಾಲಿಸಿಟರ್ ಜನರಲ್ ಹಾಜರಾಗಿದ್ದರು. ಎರಡು ವಾರದಲ್ಲಿ ಪ್ರತಿಕ್ರಿಯೆ ನೀಡುತ್ತೇವೆ ಎಂದಿದ್ದಾರೆ. ನೋಟಿಸ್ ಕೊಡಬೇಡಿ ಅಂತ ಕೂಡ ಕೇಳಿಕೊಂಡಿದ್ದಾರೆ. ಎಲ್ಲಿ ಕೇಂದ್ರಕ್ಕೆ ಮುಜುಗರ ಆಗುತ್ತೋ ಎಂಬ ಆತಂಕವಿದೆ. ಹಾಗಾಗಿ ನೋಟಿಸ್ ಕೊಡಬೇಡಿ ಎಂದು ಕೇಂದ್ರ ಕೇಳಿದೆ ಎಂದು ದೆಹಲಿಯಲ್ಲಿ ಸಚಿವ ಕೃಷ್ಣಭೈರೇಗೌಡ ಹೇಳಿದರು.
ಇದನ್ನೂ ಓದಿ: 5, 8, 9, 11ನೇ ತರಗತಿ ಬೋರ್ಡ್ ಪರೀಕ್ಷೆ: ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ
ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಮಹಾನ್ ಸುಳ್ಳುಗಾರರು. ಕರ್ನಾಟಕ ತಡವಾಗಿ ಅರ್ಜಿ ಸಲ್ಲಿಸಿತು ಅಂತ ಅಮಿತ್ ಶಾ ಹೇಳಿದರು. ಆ ವಾದವನ್ನು ಅಮಿತ್ ಶಾ ಕೋರ್ಟ್ ಮುಂದೆ ಮಂಡಿಸಬೇಕು. ಅಮಿತ್ ಶಾ ರಾಜ್ಯಕ್ಕೆ ಬಂದು ಭಾಷಣ ಮಾಡುವುದಲ್ಲ ಅಫಿಡವಿಟ್ ಸಲ್ಲಿಸಲಿ. ಕೇಂದ್ರ ಸಚಿವ ಅಮಿತ್ ಶಾ ಸತ್ಯ ಒಪ್ಪಿಕೊಂಡರೆ ಜನರು ಕ್ಷಮಿಸುತ್ತಾರೆ. ಇದೊಂದು ಮಲತಾಯಿ ಧೋರಣೆ ಅನ್ನೋದು ಜನರಿಗೆ ಗೊತ್ತಾಗಿದೆ. ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಆರ್.ಅಶೋಕ್, ಬಿಜೆಪಿಯವರು ಇದ್ದಾರೆ. ವಿರೋಧ ಪಕ್ಷದ ನಾಯಕ ಅಶೋಕ್ಗೆ ಜ್ಞಾನದ ಕೊರತೆ ಇದೆ. ಹೀಗೆ ಮಾತನಾಡಿದರೆ ವಿಪಕ್ಷ ಸ್ಥಾನಕ್ಕೂ ಮರ್ಯಾದೆ ಇರಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:25 pm, Mon, 8 April 24