ಕರೂರು ಕಾಲ್ತುಳಿತ ಘಟನೆಗೆ ಪೊಲೀಸರೇ ಹೊಣೆ; ಸಿಬಿಐ ತನಿಖೆ ಆಗಲಿ: ಅಣ್ಣಾಮಲೈ
K Annamalai on TVK Thalapathy Vijay and Karur stampede incident: ದಳಪತಿ ವಿಜಯ್ ಅವರ ಟಿವಿಕೆ ಪಕ್ಷದ ಸಮಾವೇಶದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಗೆ ಪೊಲೀಸರೇ ಹೊಣೆ ಎಂದು ಬಿಜೆಪಿಯ ಅಣ್ಣಾಮಲೈ ಆರೋಪಿಸಿದ್ದಾರೆ. ಘಟನೆಗೆ ವಿಜಯ್ ಅವರನ್ನು ನೇರವಾಗಿ ದೂಷಿಸುವುದಿಲ್ಲ. ಪೊಲೀಸರು ಜನರ ಗುಂಪನ್ನು ನಿಯಂತ್ರಿಸಲು ವಿಫಲರಾಗಿದ್ದಾರೆ ಎಂದು ಬಿಜೆಪಿ ಮುಖಂಡ ಹೇಳಿದ್ದಾರೆ. ಸೆ. 27ರಂದು ಸಂಭವಿಸಿದ ಈ ಘಟನೆಯ ತನಿಖೆಯನ್ನು ಸಿಬಿಐಗೆ ವಹಿಸಿದರೆ ಸತ್ಯಾಂಶ ಸಿಗುತ್ತದೆ ಎಂದಿದ್ದಾರೆ.

ಚೆನ್ನೈ, ಸೆಪ್ಟೆಂಬರ್ 28: ನಿನ್ನೆ ಶನಿವಾರ ತಮಿಳುನಾಡಿನ ಕರೂರಿನಲ್ಲಿ 40ಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡು ಕಾಲ್ತುಳಿತ ಪ್ರಕರಣದಲ್ಲಿ (Stampede incident) ಅಲ್ಲಿಯ ಪೊಲೀಸರು ದಳಪತಿ ವಿಜಯ್ ಅವರ ಟಿವಿಕೆ ಪಕ್ಷದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ರ್ಯಾಲಿ (Karur Rally) ಆಯೋಜಕರು ಸರಿಯಾಗಿ ನಿಯಮಗಳನ್ನು ಪಾಲಿಸದೇ ಇದ್ದದ್ದು ನೂಕುನುಗ್ಗಲಿಗೆ ಕಾರಣವಾಯಿತು ಎಂದು ಎಡಿಜಿಪಿ ಹೇಳಿದ್ದಾರೆ. ಇದೇ ವೇಳೆ, ಬಿಜೆಪಿ ನಾಯಕ ಕೆ ಅಣ್ಣಾಮಲೈ (K Annamalai) ಅವರು ಕಾಲ್ತುಳಿತ ಘಟನೆಗೆ ಪೊಲೀಸರೇ ಕಾರಣ ಎಂದು ಆರೋಪಿಸಿದ್ದಾರೆ.
ವಿಜಯ್ ವಿರುದ್ಧ ಈ ಹಿಂದೆ ಸಾಕಷ್ಟು ಬಾರಿ ಹರಿಹಾಯ್ದಿದ್ದ ಅಣ್ಣಾಮಲೈ ಅವರು ಈ ಪ್ರಕರಣದಲ್ಲಿ ದಳಪತಿಯ ದೂಷಣೆ ಮಾಡಲಿಲ್ಲ. ತಾನು ವಿಜಯ್ ಅವರನ್ನು ನೇರವಾಗಿ ದೂಷಿಸುತ್ತಿಲ್ಲ ಎಂದೇ ಅಣ್ಣಾಮಲೈ ಹೇಳಿದ್ದಾರೆ. ಘಟನೆಯ ಸಿಬಿಐ ತನಿಖೆ ಆಗಬೇಕೆಂದೂ ಅಣ್ಣಾಮಲೈ ಈ ವೇಳೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ನಟ ವಿಜಯ್ ರ‍್ಯಾಲಿಯಲ್ಲಿ ಕಲ್ಲು ತೂರಾಟ ಆಗಿರಲಿಲ್ಲ, ಪೊಲೀಸ್ ಭದ್ರತೆ ಸರಿಯಾಗಿಯೇ ಇತ್ತು: ಎಡಿಜಿಪಿ ಡೇವಿಡ್ಸನ್ ಸ್ಪಷ್ಟನೆ
ತಮಿಳುನಾಡು ಪೊಲೀಸ್ ಹಲವು ಎಚ್ಚರಿಕೆಗಳ ನಡುವೆಯೂ ಗುಂಪನ್ನು ನಿಯಂತ್ರಿಸಲು ವಿಫಲವಾಗಿದೆ. 500 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಡಿಜಿಪಿ ಹೇಳುತ್ತಾರೆ. ಆದರೆ, ವಾಸ್ತವವಾಗಿ ಬೀದಿಯಲ್ಲಿ ಇದ್ದ ಪೊಲೀಸರ ಸಂಖ್ಯೆ 100ಕ್ಕಿಂತಲೂ ಕಡಿಮೆ. ಆಂಬುಲೆನ್ಸ್ಗಳೂ ಹೋಗದಷ್ಟು ಕಿರಿದಾದ ಬೀದಿಯಲ್ಲಿ ರ್ಯಾಲಿ ನಡೆಸಲು ಅನುಮತಿ ನೀಡುವ ಮುನ್ನ ಪೊಲೀಸರು ನೂರು ಬಾರಿ ಯೋಚಿಸಬೇಕಿತ್ತು ಎಂದು ತಮಿಳುನಾಡು ಬಿಜೆಪಿ ನಾಯಕರು ವಾದಿಸಿದ್ದಾರೆ.
‘ಈ ಲೋಪಕ್ಕೆ ಕಾರಣರಾದ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಸತ್ಯಾಂಶ ಏನು ಎಂಬುದು ಸಿಬಿಐ ತನಿಖೆಯಿಂದ ಮಾತ್ರ ಹೊರಬರಲು ಸಾಧ್ಯ ಎಂದು ಹೇಳಿದ ಅಣ್ಣಾಮಲೈ, ತಮಿಳುನಾಡಿನಲ್ಲಿ ಗುಂಪು ನಿಯಂತ್ರಣದ ಸಮಸ್ಯೆ ಪದೇ ಪದೇ ಬರುತ್ತಿದೆ. ಇದಕ್ಕೆ ಆಡಳಿತಾರೂಢ ಡಿಎಂಕೆ ಸರ್ಕಾರದ ನಿರ್ಲಕ್ಷ್ಯತೆಯೇ ಕಾರಣ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಕರೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ ತಲಾ 20 ಲಕ್ಷ ರೂ. ಪರಿಹಾರ ಘೋಷಿಸಿದ ವಿಜಯ್
ಸೆಪ್ಟೆಂಬರ್ 27, ಶನಿವಾರದಂದು ನಟ ದಳಪತಿ ವಿಜಯ್ ಅವರು ತಮ್ಮ ಟಿವಿಕೆ ಪಕ್ಷದ ರ್ಯಾಲಿಯನ್ನು ತಮಿಳುನಾಡಿನ ಕರೂರಿನಲ್ಲಿ ಆಯೋಜಿಸಿದ್ದರು. ಈ ವೇಳೆ ಸಾಕಷ್ಟು ಜನರು ಸೇರಿ ನೂಕುನುಗ್ಗಲು ಆಗಿ ಕಾಲ್ತುಳಿತ ಸಂಭವಿಸಿದೆ. ಈ ಘಟನೆಯಲ್ಲಿ 40ಕ್ಕೂ ಹೆಚ್ಚು ಮಂದಿ ಅಸುನೀಗಿರಬಹುದು ಎನ್ನುವ ಅಂದಾಜಿದೆ. ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




