ನಟ ವಿಜಯ್ ರ‍್ಯಾಲಿಯಲ್ಲಿ ಕಲ್ಲು ತೂರಾಟ ಆಗಿರಲಿಲ್ಲ, ಪೊಲೀಸ್ ಭದ್ರತೆ ಸರಿಯಾಗಿಯೇ ಇತ್ತು: ಎಡಿಜಿಪಿ ಡೇವಿಡ್ಸನ್ ಸ್ಪಷ್ಟನೆ
TVK Vijay rally stampede incident, ADGP Davidson Devasirvatham press meet: ದಳಪತಿ ವಿಜಯ್ ಅವರ ಕರೂರು ರ‍್ಯಾಲಿಯಲ್ಲಿ 40 ಜನರನ್ನು ಬಲಿಪಡೆದ ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸ್ ಭದ್ರತಾ ವೈಫಲ್ಯದ ಆರೋಪವನ್ನು ಎಡಿಜಿಪಿ ತಳ್ಳಿ ಹಾಕಿದ್ದಾರೆ. ರ‍್ಯಾಲಿಯಲ್ಲಿ ಪೊಲೀಸರನ್ನು ಸಾಕಷ್ಟು ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು. ಪ್ರತೀ 20 ಜನರಿಗೆ ಒಬ್ಬ ಪೊಲೀಸ್ ಅಧಿಕಾರಿಯನ್ನು ನಿಯೋಜಿಸಲಾಗಿತ್ತು ಎಂದಿದ್ದಾರೆ.

ಚೆನ್ನೈ, ಸೆಪ್ಟೆಂಬರ್ 28: ತಮಿಳುನಾಡಿನ ಕರೂರಿನಲ್ಲಿ ನಟ ವಿಜಯ್ ಅವರ ರ‍್ಯಾಲಿ ವೇಳೆ ಸಂಭವಿಸಿದ ಕಾಲ್ತುಳಿತ (Stampede) ಘಟನೆ ಸಂಬಂಧ ಎಡಿಜಿಪಿ ಡೇವಿಡ್ಸನ್ ದೇವಾಶಿರ್ವತಮ್ (Davidson Devasirvatham) ಇಂದು ಪತ್ರಿಕಾಗೋಷ್ಠಿ ನಡೆಸಿ ಕೆಲ ವಿಚಾರಗಳನ್ನು ಸ್ಪಷ್ಟಪಡಿಸಿದ್ದಾರೆ. ವಿಜಯ್ ಬೆಂಬಲಿಗರು ಆರೋಪಿಸಿರುವಂತೆ ರ‍್ಯಾಲಿ ವೇಳೆ ಎಲ್ಲೂ ಕಲ್ಲು ತೂರಾಟ ಸಂಭವಿಸಿಲ್ಲ. ರ‍್ಯಾಲಿ ಸ್ಥಳದಲ್ಲಿ 500ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು. ಪ್ರತೀ 20 ಜನರಿಗೆ ಒಬ್ಬರಂತೆ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು ಎಂದು ಎಡಿಜಿಪಿ ಅವರು ಸ್ಪಷ್ಟಪಡಿಸಿದ್ದಾರೆ.
ಕರೂರು ಕಾರ್ಯಕ್ರಮದಲ್ಲಿ ಪೊಲೀಸ್ ಭದ್ರತೆ ಸರಿಯಾಗಿ ಇರಲಿಲ್ಲ. ಆಂಬುಲೆನ್ಸ್ಗಳ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು. ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು ಎಂಬಿತ್ಯಾದಿ ಆರೋಪಗಳು ಕೇಳಿ ಬಂದಿವೆ. ಈ ಆರೋಪಗಳನ್ನು ಎಡಿಜಿಪಿ ತಳ್ಳಿಹಾಕಿದ್ದಾರೆ.
ಪೊಲೀಸರನ್ನು ಸಾಕಷ್ಟು ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು ರ್ಯಾಲಿ ಸಮಯದಲ್ಲಿ ವಿದ್ಯುತ್ ಸಂಪರ್ಕ ಸುಗಮವಾಗಿತ್ತು. ಹೊರಗಿನಿಂದ ಯಾರೂ ಕೂಡ ಬಂದು ದಾಂದಲೆ ಮಾಡಿಲ್ಲ ಎಂದು ಹೇಳಿದ ಎಡಿಜಿಪಿ ಡೇವಿಡ್ಸನ್ ದೇವಶಿರ್ವತಂ, ರ‍್ಯಾಲಿ ಸ್ಥಳವನ್ನು ಬೇರೆಡೆ ಇಡುವಂತೆ ತಾವು ಸಲಹೆ ನೀಡಿದ್ದಾಗಿಯೂ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಕರೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ ತಲಾ 20 ಲಕ್ಷ ರೂ. ಪರಿಹಾರ ಘೋಷಿಸಿದ ವಿಜಯ್
ಘಟನೆಯ ತನಿಖೆಗಾಗಿ ಸಮಿತಿ ರಚಿಸಲಾಗಿದ್ದು, ಮೊದಲ ಹಂತದ ತನಿಖೆ ನಂತರ ಹೆಚ್ಚಿನ ವಿವರಗಳನ್ನು ತಿಳಿಸುವುದಾಗಿ ಹೇಳಿದ್ದಾರೆ.
ಸೆಪ್ಟೆಂಬರ್ 27, ಶನಿವಾರ ಕರೂರಿನಲ್ಲಿ ನಡೆದ ದಳಪತಿ ವಿಜಯ್ ಅವರ ರ‍್ಯಾಲಿ ವೇಳೆ ಸಾಕಷ್ಟು ಜನರು ಸೇರಿ ನೂಕುನುಗ್ಗಲು ಸೃಷ್ಟಿಯಾಗಿ, ಕಾಲ್ತುಳಿತವಾಗಿದೆ. ಇದರಲ್ಲಿ ಮಡಿದವರ ಸಂಖ್ಯೆ 40 ದಾಟಿದೆ ಎಂದು ವರದಿಗಳು ಹೇಳುತ್ತಿವೆ. ಮಡಿದವರ ಕುಟುಂಬಕ್ಕೆ ವಿಜಯ್ ಅವರು 20 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಗಾಯಗೊಂಡವರಿಗೆ 2 ಲಕ್ಷ ರೂ ಸಹಾಯ ಪ್ರಕಟಿಸಿದ್ದಾರೆ. ಘಟನೆಯ ತನಿಖೆ ಆಗಬೇಕೆಂದು ಕೋರಿ ನ್ಯಾಯಾಲಯಕ್ಕೂ ಹೋಗಿದ್ದಾರೆ.
ಇದನ್ನೂ ಓದಿ: ಕರೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ ತಲಾ 20 ಲಕ್ಷ ರೂ. ಪರಿಹಾರ ಘೋಷಿಸಿದ ವಿಜಯ್
ದಳಪತಿ ವಿಜಯ್ ಅವರು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಎನ್ನುವ ಹೊಸ ರಾಜಕೀಯ ಪಕ್ಷ ಸ್ಥಾಪನೆ ಮಾಡಿದ್ದಾರೆ. ಇದರ ಒಂದು ಸಾರ್ವಜನಿಜ ಸಮಾವೇಶವನ್ನು ಕರೂರಿನಲ್ಲಿ ಆಯೋಜಿಸಲಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:45 pm, Sun, 28 September 25




