ತೆಲಂಗಾಣ ವಾರ್ಷಿಕ ಬಜೆಟ್ ಮಂಡನೆಗೆ ಒಪ್ಪಿಗೆ ಸೂಚಿಸಲು ರಾಜ್ಯಪಾಲರಿಗೆ ಆದೇಶಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ ಕೆ ಚಂದ್ರಶೇಖರ್ ರಾವ್ ಸರ್ಕಾರ
Governor Tamilsai Soundararajan: ಈ ಮಧ್ಯೆ, ಮತ್ತೊಮ್ಮೆ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಹಣಕಾಸು ಕಾರ್ಯದರ್ಶಿಗಳು ರಾಜ್ಯಪಾಲರನ್ನು ಭೇಟಿಯಾಗಿ ಬಜೆಟ್ ಅನುಮೋದನೆಗೆ ಮನವಿ ಮಾಡುವ ನಿರೀಕ್ಷೆಯಿದೆ.
ವಿಧಾನಸಭೆಯಲ್ಲಿ ರಾಜ್ಯ ಬಜೆಟ್ ಮಂಡಿಸಲು ರಾಜ್ಯಪಾಲ ತಮಿಳಿಸಾಯಿ ಸೌಂದರರಾಜನ್ (Governor Tamilsai Soundararajan) ಅವರಿಂದ ಇನ್ನೂ ಅನುಮತಿ ಪಡೆಯದ ಕಾರಣ ತೆಲಂಗಾಣ ಸರ್ಕಾರ (Telangana government) ಸೋಮವಾರ, ಜನವರಿ 30 ರಂದು ಹೈಕೋರ್ಟ್‌ನಲ್ಲಿ ಅರ್ಜಿ (lunch motion petition) ಸಲ್ಲಿಸಿದೆ. ಬಜೆಟ್ ಕಡತವನ್ನು ಜನವರಿ 21 ರಂದೇ ರಾಜ್ಯಪಾಲರಿಗೆ ಕಳುಹಿಸಲಾಗಿದೆ ಎಂದು ಟಿವಿ 9 ತೆಲುಗು ವರದಿ ಮಾಡಿದೆ.
ಫೆಬ್ರವರಿ 3ರಂದು ವಿಧಾನಸಭೆಯಲ್ಲಿ ಬಜೆಟ್ ಮಂಡನೆಗೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ಸರ್ಕಾರ ನಿರ್ಧರಿಸಿದ್ದು, ಬಜೆಟ್ ಅಂಗೀಕರಿಸುವಂತೆ ರಾಜ್ಯಪಾಲರಿಗೆ ಸೂಚಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲು ನಿರ್ಧರಿಸಿದೆ. ಗಮನಾರ್ಹವೆಂದರೆ, ಸೆಪ್ಟೆಂಬರ್ 2022 ರಿಂದಲೂ ರಾಜ್ಯಪಾಲರ ಅನುಮೋದನೆಗಾಗಿ ರಾಜ್ಯ ಸರ್ಕಾರ ಇನ್ನೂ ಏಳು ಮಸೂದೆಗಳನ್ನು ಕಳಿಸಿಕೊಟ್ಟಿದ್ದು, ಅನುಮೋದನೆಗಾಗಿ ಕಾಯುತ್ತಿದೆ.
ಈ ಹಿನ್ನೆಲೆಯಲ್ಲಿ ಇದೀಗ ಮಹತ್ವವಾದ ಬಜೆಟ್ ಮಂಡನೆ ವಿಷಯದಲ್ಲಿ ಹೈಕೋರ್ಟ್ ಕದ ತಟ್ಟಲಾಗಿದೆ. ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಮತ್ತು ನ್ಯಾಯಮೂರ್ತಿ ಎನ್. ತುಕಾರಾಂಜಿ ಅವರನ್ನೊಳಗೊಂಡ ವಿಭಾಗೀಯ ಪೀಠವು ರಾಜ್ಯ ಬಜೆಟ್‌ಗೆ ಸಂಬಂಧಿಸಿದ ರಾಜ್ಯ ಸರ್ಕಾರದ ತುರ್ತು ಅರ್ಜಿಯನ್ನು ಆಲಿಸುವ ಸಾಧ್ಯತೆಯಿದೆ.
ಬಜೆಟ್ ಅಧಿವೇಶನಕ್ಕೆ ಇನ್ನು 3 ದಿನ ಬಾಕಿ ಇರುವುದರಿಂದ ನ್ಯಾಯಾಲಯದ ಮೆಟ್ಟಿಲೇರುವುದು ಬಿಟ್ಟರೆ ಬೇರೆ ದಾರಿ ಇಲ್ಲ ಎಂದು ಸರ್ಕಾರ ಭಾವಿಸಿದೆ. ಸೋಮವಾರ ಮಧ್ಯಾಹ್ನ 1 ಗಂಟೆಗೆ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸಲಿದೆ. ಕಳೆದ ಎರಡು ವರ್ಷಗಳಿಂದ ಪ್ರಗತಿ ಭವನ ಮತ್ತು ರಾಜಭವನದ ನಡುವೆ ಅಂದರೆ ರಾಜ್ಯಪಾಲರು ಮತ್ತು ಕೆಸಿಆರ್ ನೇತೃತ್ವದ ಸರ್ಕಾರದ ಮಧ್ಯೆ ತಿಕ್ಕಾಟ ಉದ್ಭವಿಸಿರುವ ಸಂದರ್ಭದಲ್ಲಿ ಬಜೆಟ್ ಮಂಡನೆ ಅನುಮೋದನೆಗೆ ಮಹತ್ವ ಬಂದಿದೆ.
ಮುಖ್ಯ ಕಾರ್ಯದರ್ಶಿ ಎ ಶಾಂತಿಕುಮಾರಿ ಮತ್ತು ಹಣಕಾಸು ಕಾರ್ಯದರ್ಶಿ ರಾಮಕೃಷ್ಣ ರಾವ್ ಅವರು ರಾಜ್ಯಪಾಲರನ್ನು ಭೇಟಿಯಾಗಿ ಬಜೆಟ್‌ಗೆ ಅನುಮೋದನೆ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ವರದಿಯಾಗಿದೆ. ಆದರೆ ಅದನ್ನು ತಿರಸ್ಕರಿಸಿದರೆ, ಸರ್ಕಾರವು ಕಾನೂನು ಆಶ್ರಯವನ್ನು ಪಡೆಯಲಿದೆ ಎಂದು ವರದಿಗಳು ತಿಳಿಸಿವೆ. ಬಜೆಟ್ ಮಂಡನೆಗೆ ರಾಜ್ಯಪಾಲರ ಒಪ್ಪಿಗೆ ಕೋರಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ದುಷ್ಯಂತ್ ದವೆ ರಾಜ್ಯ ಸರ್ಕಾರವನ್ನು ಪ್ರತಿನಿಧಿಸುವ ಸಾಧ್ಯತೆಯಿದೆ.
ಆಯವ್ಯಯ ಕಡತಕ್ಕೆ ಪ್ರತಿಕ್ರಿಯೆಯಾಗಿ, ರಾಜ್ಯಪಾಲರ ಕಾರ್ಯದರ್ಶಿ ಅವರು ಅಸೆಂಬ್ಲಿಯಲ್ಲಿ ತಮ್ಮ ವಾಡಿಕೆ ಭಾಷಣಕ್ಕಾಗಿ ಮಾಡಿದ ವ್ಯವಸ್ಥೆಗಳ ಬಗ್ಗೆ ಕೇಳಲು ಸರ್ಕಾರಕ್ಕೆ ಮತ್ತೆ ಪತ್ರ ಬರೆದಿದ್ದರು. ಆದಾಗ್ಯೂ, ಭಾಷಣ ಮತ್ತು ಬಜೆಟ್ ಎರಡೂ ವಿಭಿನ್ನ ವಿಷಯಗಳು. ಮತ್ತು ಒಂದಕ್ಕೊಂದು ಸಂಬಂಧವಿಲ್ಲ ಎಂದು ಸರ್ಕಾರ ವಾದಿಸುತ್ತಾ ಬಂದಿದೆ. ರಾಜ್ಯಪಾಲರು ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣ ಮಾಡಬೇಕೆಂಬ ಷರತ್ತು ಸಂವಿಧಾನದಲ್ಲಿ ಇಲ್ಲ. ಹಾಗಾಗಿ ಅದಕ್ಕೂ, ರಾಜ್ಯ ಬಜೆಟ್ ಮಂಡನೆಗೆ ಯಾವುದೇ ಸಂಬಂಧವಿಲ್ಲ ಎಂದು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಫೆ 3 ರಿಂದ ಬಜೆಟ್ ಅಧಿವೇಶನ: ತೆಲಂಗಾಣ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣ ಇರುತ್ತದಾ, ಇಲ್ಲವಾ? ಕೆಸಿಆರ್ ಸರ್ಕಾರ ಹೇಳುವುದೇನು?
ತೆಲಂಗಾಣದಲ್ಲಿ ಬಜೆಟ್ ಅಧಿವೇಶನ ನಿಗದಿಯಾಗಿದೆ. ಫೆಬ್ರವರಿ 3ರಂದು ಅಧಿವೇಶನ ಆರಂಭವಾಗಲಿದೆ. 5ರಂದು ಬಜೆಟ್ ಮಂಡನೆಯಾಗಲಿದೆ. ಆದರೆ ಈ ಬಾರಿಯೂ ರಾಜ್ಯಪಾಲರ ಭಾಷಣ ಇಲ್ಲದೆಯೇ ಬಜೆಟ್ ಅಧಿವೇಶನ ನಡೆಯಲಿದೆ ಎನ್ನಲಾಗಿದೆ. ಮತ್ತೊಂದೆಡೆ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಬಜೆಟ್‌ನ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ತೆಲಂಗಾಣ ಬಜೆಟ್ ಅಧಿವೇಶನ ಮುಂದಿನ ತಿಂಗಳು 3 ಶುಕ್ರವಾರದಂದು ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿದೆ. 5 ರಂದು ಸದನದಲ್ಲಿ ಬಜೆಟ್ ಮಂಡನೆಯಾಗಲಿದೆ. ಈ ಮಟ್ಟಿಗೆ ವಿಧಾನಸಭೆ ಮತ್ತು ಪರಿಷತ್ ಸಭೆಗಳ ಬಗ್ಗೆ ಶಾಸಕರು ಮತ್ತು ಎಂಎಲ್ ಸಿ ಗಳಿಗೆ ಮಾಹಿತಿ ನೀಡಲಾಗಿದೆ.
ತೆಲಂಗಾಣ ರಾಜ್ಯ ಬಜೆಟ್ 2023-24 ರ ಪ್ರಸ್ತಾವನೆಗಳನ್ನು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಈಗಾಗಲೇ ಪರಿಶೀಲಿಸಿದ್ದಾರೆ. ಸಭೆಯಲ್ಲಿ ಹಣಕಾಸು ಸಚಿವ ಹರೀಶ್ ರಾವ್ ಹಾಗೂ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಹಾಗೆ ನೋಡಿದರೆ ಬಜೆಟ್ ಗಾತ್ರ ಸುಮಾರು 2.85 ಲಕ್ಷ ಕೋಟಿಯಿಂದ 3 ಲಕ್ಷ ಕೋಟಿ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ.
ಮತ್ತೊಂದೆಡೆ ಈ ಭಾಷಣದಲ್ಲಿ ರಾಜ್ಯಪಾಲರ ಭಾಷಣ ಇರುತ್ತಾ.. ಅಥವಾ.. ಇಲ್ಲವಾ ಎಂಬ ಕುತೂಹಲ ಮೂಡಿದೆ. ಆದರೆ, ಈ ಬಾರಿ ರಾಜ್ಯಪಾಲರ ಭಾಷಣ ಇಲ್ಲದೆಯೇ ಜಂಟಿ ಅಧಿವೇಶನ ನಡೆಯುವ ಸೂಚನೆಗಳಿವೆ. ಅದಕ್ಕೆ ಕಾರಣವನ್ನೂ ಹೇಳಲಾಗಿದೆ. ಸರ್ಕಾರದ ಮೂಲಗಳ ಪ್ರಕಾರ ಹೊಸ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಮಾತ್ರ ಇರುತ್ತದೆ.
ಆದರೆ ತೆಲಂಗಾಣದಲ್ಲಿ ಕಳೆದ ಒಂದೂವರೆ ವರ್ಷದಿಂದ ಒಂದೇ ಅಧಿವೇಶನ ಜರುಗಿದ್ದು, ವಿಧಾನಸಭೆ ನಡೆಯುತ್ತಿದೆ. ಬಜೆಟ್ ಸಭೆಗಳಲ್ಲಿ ರಾಜ್ಯಪಾಲರ ಭಾಷಣ ಕೇವಲ ಸಂಪ್ರದಾಯವೇ ಹೊರತು ಸಂವಿಧಾನದ ವಿಧಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ತೆಲಂಗಾಣದಲ್ಲಿ ಕೆಲವು ವರ್ಷಗಳಿಂದ ರಾಜಭವನ ವರ್ಸಸ್ ಪ್ರಗತಿ ಭವನ ಎಂಬಂತಾಗಿ ತಿಕ್ಕಾಟ ಮನೆ ಮಾಡಿದೆ. ಇತ್ತೀಚೆಗೆ ಖಮ್ಮಂ ಸಭೆಯಲ್ಲೂ ರಾಜ್ಯಪಾಲರ ವಿಚಾರವಾಗಿ ಆಡಳಿತಾರೂಢ ನಾಯಕರು ಟೀಕೆ ಮಾಡಿದ್ದರು. ಬಳಿಕ ರಾಜ್ಯಪಾಲ ತಮಿಳ್ಸಾಯಿ ಕೂಡ ಅದಕ್ಕೆ ಪ್ರತಿಕ್ರಿಯಿಸಿದ್ದರು.
ರಾಜ್ಯದಲ್ಲಿ ಶಿಷ್ಟಾಚಾರ ಪಾಲನೆಯಾಗುತ್ತಿಲ್ಲ. ಈ ಬಾರಿಯ ಬಜೆಟ್ ಅಧಿವೇಶನದಲ್ಲಾದರೂ ಪಾಲಿಸುತ್ತಾರಾ ಎಂಬುದನ್ನು ಗಮನಿಸಲಾಗುವುದು ಎಂದು ಪ್ರತಿಕ್ರಿಯಿಸಿದರು. ಆದರೆ ಇದಕ್ಕೆ ತಿರುಗೇಟು ಕೊಡುವಂತೆ ರಾಜ್ಯಪಾಲರ ಭಾಷಣ ಇರುವುದಿಲ್ಲ ಎನ್ನಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:33 pm, Mon, 30 January 23