ಹೈಕಮಾಂಡ್​​ ಸಭೆ ಬಳಿಕವೂ ಆಗದ ಅಂತಿಮ ನಿರ್ಧಾರ: ಕೇರಳದ ನೂತನ ಸಿಎಂ ಯಾರೆಂಬುದು ಇನ್ನೂ ಸಸ್ಪೆನ್ಸ್​!

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಭರ್ಜರಿ ಗೆಲುವು ಸಾಧಿಸಿದ್ದರೂ, ಮುಂದಿನ ಮುಖ್ಯಮಂತ್ರಿ ಆಯ್ಕೆ ಸಸ್ಪೆನ್ಸ್ ಮುಂದುವರಿದಿದೆ. ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಹೈಕಮಾಂಡ್ ಸಭೆಯ ನಂತರವೂ ಯಾವುದೇ ಅಂತಿಮ ತೀರ್ಮಾನವಾಗಿಲ್ಲ. ಸಿಎಂ ಆಯ್ಕೆ ಅಧಿಕಾರವನ್ನು ಹೈಕಮಾಂಡ್‌ಗೆ ಶಾಸಕರು ವಹಿಸಿದ್ದು, ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ಹೈಕಮಾಂಡ್​​ ಸಭೆ ಬಳಿಕವೂ ಆಗದ ಅಂತಿಮ ನಿರ್ಧಾರ: ಕೇರಳದ ನೂತನ ಸಿಎಂ ಯಾರೆಂಬುದು ಇನ್ನೂ ಸಸ್ಪೆನ್ಸ್​!
ಸಿಎಂ ರೇಸ್​​ನಲ್ಲಿರುವ ನಾಯಕರು.
Image Credit source: mathrubhumi.com

Updated on: May 09, 2026 | 9:01 PM

ತಿರುವನಂತಪುರಂ/ನವದೆಹಲಿ: ಕೇರಳ ವಿಧಾನಸಭಾ ಚುನಾವಣೆಯಲ್ಲಿ 140 ಕ್ಷೇತ್ರಗಳ ಪೈಕಿ ಕಾಂಗ್ರೆಸ್​​ (Congress) ನೇತೃತ್ವದ ಯುಡಿಎಫ್​​ (UDF) 102 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿದೆ. ಹೀಗಿದ್ದರೂ ಕೇರಳದ ಮುಂದಿನ ಮುಖ್ಯಮಂತ್ರಿ (Chief Minister) ಯಾರು ಎಂಬ ಕುತೂಹಲ ಇನ್ನೂ ಮುಂದುವರಿದಿದ್ದು, ಕಾಂಗ್ರೆಸ್ ಹೈಕಮಾಂಡ್ ದೆಹಲಿಯಲ್ಲಿ ನಡೆಸಿದ ಸುದೀರ್ಘ ಸಭೆ ಬಳಿಕವೂ ಈ ಬಗ್ಗೆ ಯಾವುದೇ ಅಂತಿಮ ತೀರ್ಮಾನ ಹೊರಬಂದಿಲ್ಲ.

ಸಭೆ ಬಳಿಕ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕೇರಳ ಕಾಂಗ್ರೆಸ್ ಉಸ್ತುವಾರಿ ದೀಪಾ ದಾಸ್ ಮುನ್ಶಿ, ಮುಖ್ಯಮಂತ್ರಿ ಆಯ್ಕೆ ಕುರಿತ ಚರ್ಚೆ ಇನ್ನೂ ನಡೆಯುತ್ತಿದೆ. ಯುಡಿಎಫ್ ಸರ್ಕಾರದ ನಾಯಕರನ್ನು ಆಯ್ಕೆ ಮಾಡುವ ಸಂಪೂರ್ಣ ಅಧಿಕಾರವನ್ನು ಕಾಂಗ್ರೆಸ್ ಹೈಕಮಾಂಡ್‌ಗೆ ನೀಡುವ ಕುರಿತ ನಿರ್ಣಯಕ್ಕೆ ಎಲ್ಲಾ ಕಾಂಗ್ರೆಸ್ ಶಾಸಕರು ಸಹಿ ಹಾಕಿದ್ದಾರೆ. ಹೀಗಾಗಿ ಸಿಎಂ ಯಾರಾಗಲಿದ್ದಾರೆ ಎಂಬ ಅಂತಿಮ ನಿರ್ಣಯವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್​​ ವರಿಷ್ಠ ರಾಹುಲ್​​ ಗಾಂಧಿ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ತಮಿಳುನಾಡು ಸಿಎಂ ಆಗಿ ನಾಳೆ ವಿಜಯ್​ ಪ್ರಮಾಣವಚನ; ಸಮಯ, ಸ್ಥಳದ ಮಾಹಿತಿ ಇಲ್ಲಿದೆ

ಸಭೆಯಲ್ಲಿ ಯಾರೆಲ್ಲ ಭಾಗಿ?

ಸಿಎಂ ಆಯ್ಕೆ ಸಂಬಂಧ ದೆಹಲಿಯ ರಾಜಾಜಿ ಮಾರ್ಗದಲ್ಲಿರುವ ಖರ್ಗೆ ನಿವಾಸದಲ್ಲಿ ನಡೆದ ಮಹತ್ವದ ಸಭೆಯಲ್ಲಿ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೇರಳ ಕಾಂಗ್ರೆಸ್ ಉಸ್ತುವಾರಿ ದೀಪದಾಸ್ ಮುನ್ಶಿ, ಕೇರಳಂ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸನ್ನಿ ಜೋಸೆಫ್, ಶಾಸಕರಾದ ಸತೀಸನ್, ರಮೇಶ್ ಚೆನ್ನಿತ್ತಲ ಸೇರಿದಂತೆ ಎಐಸಿಸಿ ವೀಕ್ಷಕರಾದ ಮುಕುಲ್ ವಾಸ್ನಿಕ್ ಮತ್ತು ಅಜಯ್ ಮಾಕೆನ್ ಕೂಡ​ ಉಪಸ್ಥಿತರಿದ್ದರು.

ಗದ್ದುಗೆಗಾಗಿ ಗುದ್ದಾಟ

ಯುಡಿಎಫ್ ಭರ್ಜರಿ ಗೆಲುವಿನ ಬಳಿಕ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಒಳಗಡೆ ಭಾರೀ ಲಾಬಿ ಹಾಗೂ ಗುಂಪು ರಾಜಕೀಯ ಜೋರಾಗಿದೆ. ಸತೀಶನ್, ವೇಣುಗೋಪಾಲ್ ಮತ್ತು ಚೆನ್ನಿತ್ತಲ ಪರ ಬೆಂಬಲಿಗರು ಪೋಸ್ಟರ್, ಫ್ಲೆಕ್ಸ್‌, ಮೆರವಣಿಗೆಗಳ ಮೂಲಕ ತಮ್ಮ ನಾಯಕರ ಪರ ಅಭಿಯಾನ ನಡೆಸುತ್ತಿದ್ದಾರೆ. 140 ಸದಸ್ಯರ ಕೇರಳ ವಿಧಾನಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ 102 ಸ್ಥಾನಗಳನ್ನು ಗೆದ್ದು ಬೀಗಿದೆ. ಎಲ್‌ಡಿಎಫ್ 35 ಸ್ಥಾನಗಳಿಗೆ ಕುಸಿದರೆ, ಬಿಜೆಪಿ 3 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಹೀಗಾಗಿ ಜನರ ಚಿತ್ತ ದೆಹಲಿಯತ್ತ ನೆಟ್ಟಿದ್ದು, ಕಾಂಗ್ರೆಸ್ ಹೈಕಮಾಂಡ್ ಶೀಘ್ರದಲ್ಲೇ ಘೋಷಿಸಲಿರುವ ಕೇರಳದ ಮುಂದಿನ ಮುಖ್ಯಮಂತ್ರಿ ಯಾರೆಂಬ ಕುತೂಹಲ ಹೆಚ್ಚಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 8:46 pm, Sat, 9 May 26

Follow Us