
ತಿರುವನಂತಪುರಂ, ಮೇ 04: 140 ಸದಸ್ಯರ ಬಲವನ್ನು ಹೊಂದಿರುವ ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್) ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಇದನ್ನು ಕಳೆದ ಎರಡು ದಶಕಗಳಲ್ಲಿನ ಅತ್ಯುತ್ತಮ ಪ್ರದರ್ಶನ ಎಂದೇ ಪರಿಗಣಿಸಲಾಗಿದೆ. ಆ ಮೂಲಕ ದೇಶದಲ್ಲಿ ಈವರೆಗೆ ಆಡಳಿತದಲ್ಲಿದ್ದ ಏಕೈಕ ಕಮ್ಯುನಿಷ್ಟ್ ಸರ್ಕಾರವೂ ಅಧಿಕಾರ ಕಳೆದುಕೊಳ್ಳುವ ಎಲ್ಲ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.
2001ರ ವಿಧಾನಸಭಾ ಚುನಾವಣೆಯ ನಂತರದ ಯುಡಿಎಫ್ನ ಅತ್ಯುತ್ತಮ ಫಲಿತಾಂಶ ಇದಾಗಲಿದೆ. ಅಂದು ಯುಡಿಎಫ್ 99 ಸ್ಥಾನಗಳನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು. ಇದೀಗ ಸಿಪಿಐ(ಎಂ) ನೇತೃತ್ವದ ಆಡಳಿತದಲ್ಲಿರುವ ಎಲ್‌ಡಿಎಫ್ (ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್) ಹಲವಾರು ಪ್ರಮುಖ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸುತ್ತಿದ್ದು, ಭಾರೀ ಸೋಲಿನತ್ತ ಸಾಗಿರೋದನ್ನು ಅಂಕಿ ಅಂಶಗಳು ಹೇಳುತ್ತಿವೆ. ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ನೇತೃತ್ವದಲ್ಲಿ ನಡೆದ ಪ್ರಚಾರದಲ್ಲಿ ಕಾಂಗ್ರೆಸ್ 100 ಸ್ಥಾನಗಳ ಗುರಿ ಹೊಂದಿದ್ದು, 10 ವರ್ಷಗಳ ನಂತರ ಮತ್ತೆ ಅಧಿಕಾರಕ್ಕೆ ಬರುವ ದಿಸೆಯಲ್ಲಿ ಕೆಲಸ ಮಾಡಿತ್ತು. ಅದೀಗ ಫಲಕೊಟ್ಟಿರೋದು ಸ್ಪಷ್ಟವಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಯುಡಿಎಫ್ ಉತ್ತಮ ಸಾಧನೆ ಮಾಡಿದ್ದು, ಎಲ್‌ಡಿಎಫ್‌ನ ಪರಂಪರೆಯ ಬಲಿಷ್ಠ ಕ್ಷೇತ್ರಗಳಲ್ಲೂ ಉತ್ತಮ ಮತಗಳನ್ನು ಪಡೆದಿದೆ ಎನ್ನುವುದು ಗಮನಾರ್ಹ.
ಇದನ್ನೂ ಓದಿ: ಅಸ್ಸಾಂ, ಪಶ್ಚಿಮ ಬಂಗಾಳ ಸೇರಿ 5 ರಾಜ್ಯಗಳ ಫಲಿತಾಂಶ ಆನ್‌ಲೈನ್‌ನಲ್ಲಿ ನೋಡುವುದು ಹೇಗೆ? ಇಲ್ಲಿವೆ ಸಿಂಪಲ್ ಸ್ಟೆಪ್ಸ್!
2016ರಲ್ಲಿ ಗೆದ್ದು ಬೀಗಿದ್ದ ಎಲ್‌ಡಿಎಫ್ 2021ರಲ್ಲಿಯೂ ಸತತ ಎರಡನೇ ಬಾರಿ ಅಧಿಕಾರಕ್ಕೇರಿದ್ದು, ಕೇರಳದ ಪರಂಪರೆಯ ಪರ್ಯಾಯ ಆಡಳಿತ ಪದ್ಧತಿಯನ್ನು ಮುರಿದಿತ್ತು. ಆದರೆ ಈ ಬಾರಿ ಯುಡಿಎಫ್ ಭರ್ಜರಿ ಜಯದತ್ತ ದಾಪುಗಾಲಿಟ್ಟಿದ್ದು, ಆಡಳಿತಾರೂಢ ಎಲ್ಡಿಎಫ್ಗೆ ಭರ್ಜರಿ ಶಾಕ್ ಕೊಟ್ಟಿದೆ. ಭಾರಿ ಪ್ರಯತ್ನದ ನಡುವೆಯೂ ದೇಶದವನ್ನು ಆಳುತ್ತಿರುವ ಎನ್ಡಿಎ ಕೇರಳದಲ್ಲಿ ಎರಡಂಕಿ ದಾಟಲೂ ಹರಸಾಹಸ ಪಟ್ಟಿರೋದು ಸ್ಪಷ್ಟವಾಗಿದೆ.
ಪಶ್ಚಿಮ ಬಂಗಾಳ, ಕೇರಳ ಮತ್ತು ತ್ರಿಪುರಾ ರಾಜ್ಯಗಳಲ್ಲಿ ಆಡಳಿತ ನಡೆಸಿದ್ದ ಕಮ್ಯುನಿಷ್ಟ್ ಪಕ್ಷಗಳು ಮತದಾರರು ಬಲಪಂಥದತ್ತ ತಿರುಗುತ್ತಿರುವ ಹಿನ್ನೆಲೆ ಭಾರತದಲ್ಲಿ ನಾಮಾವಶೇಷದ ಅಂಚಿಗೆ ಬಂದಿವೆ. ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಕೇರಳದಲ್ಲಿ ಅಧಿಕಾರ ಕಳೆದುಕೊಳ್ಳುತ್ತಿರುವುದರಿಂದ, 1970ರ ನಂತರ ಮೊದಲ ಬಾರಿಗೆ ದೇಶದ ಯಾವುದೇ ರಾಜ್ಯದಲ್ಲೂ ಕಮ್ಯುನಿಸ್ಟ್ ಸರ್ಕಾರ ಇಲ್ಲ ಎಂಬ ಇತಿಹಾಸ ನಿರ್ಮಾಣವಾಗಲಿದೆ.
1951-52ರ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷವು ಪ್ರಮುಖ ವಿರೋಧ ಪಕ್ಷವಾಗಿತ್ತು. 1957ರಲ್ಲಿ ಕೇರಳದಲ್ಲಿ ವಿಶ್ವದ ಮೊದಲ ಜನತಾಂತ್ರಿಕವಾಗಿ ಆಯ್ಕೆಯಾದ ಕಮ್ಯುನಿಸ್ಟ್ ಸರ್ಕಾರ ರಚನೆಯಾಗಿತ್ತು. 1977ರಲ್ಲಿ ಪಶ್ಚಿಮ ಬಂಗಾಳದಲ್ಲಿ ಸಿಪಿಐ(ಎಂ) ಅಧಿಕಾರಕ್ಕೆ ಬಂದು ದೀರ್ಘಕಾಲ ಆಡಳಿತ ನಡೆಸಿತು. ಜ್ಯೋತಿ ಬಸು 23 ವರ್ಷಕ್ಕೂ ಹೆಚ್ಚು ಕಾಲ ಮುಖ್ಯಮಂತ್ರಿ ಆಗಿದ್ದರು. ತ್ರಿಪುರಾದಲ್ಲೂ 1993ರಿಂದ 20 ವರ್ಷಗಳ ಕಾಲ ಎಡಪಕ್ಷಗಳ ಆಡಳಿತ ನಡೆದಿತ್ತು. ಆದರೆ 2011ರಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ಗೆದ್ದರೆ, 2018ರಲ್ಲಿ ಬಿಜೆಪಿ ತ್ರಿಪುರಾದಲ್ಲಿ ಜಯ ಸಾಧಿಸಿ ಎಡಪಕ್ಷಗಳ ಕೋಟೆಯನ್ನು ಭೇದಿಸಿದ್ದವು. ನಂತರ ಕೇವಲ ಕೇರಳದಲ್ಲೇ ಎಡಪಕ್ಷಗಳಿಗೆ ಆಶ್ರಯ ಉಳಿದಿತ್ತು.
ಚುನಾವಣಾ ಫಲಿತಾಂಶದ ಲೈವ್ ಅಪ್ಡೇಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:01 pm, Mon, 4 May 26