Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳ ಸರ್ಕಾರದ ಆಯುರ್ವೇದ ಕಂಪನಿಯಿಂದ ‘ಪಂಚಗವ್ಯ ಘೃತ’: ವೈರಲ್ ಪೋಸ್ಟ್​ ಹಿಂದಿರುವ ನಿಜ ಸಂಗತಿಯಿದು

Kerala: 2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ, ಕಮ್ಯುನಿಸ್ಟರು (ಕೇರಳದಲ್ಲಿ) ಭಾರತದ ವಿವಿಧ ಭಾಗಗಳಲ್ಲಿ ಹಸುಗಳನ್ನು ಪೂಜಿಸುವ ಬಗ್ಗೆ ಹಾಸ್ಯ ಮಾಡುತ್ತಿದ್ದರು. ಹಸು ಉತ್ಪನ್ನಗಳ ಆರೋಗ್ಯ ಪ್ರಯೋಜನಗಳ ಬಗ್ಗೆ...

ಕೇರಳ ಸರ್ಕಾರದ ಆಯುರ್ವೇದ ಕಂಪನಿಯಿಂದ ‘ಪಂಚಗವ್ಯ ಘೃತ’: ವೈರಲ್ ಪೋಸ್ಟ್​ ಹಿಂದಿರುವ ನಿಜ ಸಂಗತಿಯಿದು
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on:Jun 10, 2021 | 10:07 AM

‘ಕೇರಳ ರಾಜ್ಯ ಸರ್ಕಾರದ ಅಧೀನದಲ್ಲಿರುವ ಆಯುರ್ವೇದ ಕಂಪನಿಯು ಸೆಗಣಿ, ಗಂಜಲದಿಂದ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭ ಗಳಿಸುತ್ತಿದ್ದರೆ, ಕಮ್ಯುನಿಸ್ಟರು ಗೋವುಗಳ ಅಪಹಾಸ್ಯ ಮಾಡುವುದನ್ನು ಮುಂದುವರಿಸಿದ್ದಾರೆ’- ಆರ್ ಎಸ್ಎಸ್ ಮುಖವಾಣಿ ಆರ್ಗನೈಸರ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯ ಶೀರ್ಷಿಕೆ ಇದು. ಈ ಸುದ್ದಿಯನ್ನು ಆರ್ಗನೈಸರ್ ವೀಕ್ಲಿ (@eOrganiser) ಟ್ವೀಟ್ ಮಾಡಿದ್ದು ಈ ಟ್ವೀಟ್ ವೈರಲ್ ಆಗಿದೆ.

ಸುದ್ದಿಯಲ್ಲೇನಿದೆ? ಕೇಂದ್ರದಲ್ಲಿ 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ, ಕಮ್ಯುನಿಸ್ಟರು (ಕೇರಳದಲ್ಲಿ) ಭಾರತದ ವಿವಿಧ ಭಾಗಗಳಲ್ಲಿ ಹಸುಗಳನ್ನು ಪೂಜಿಸುವ ಬಗ್ಗೆ ಹಾಸ್ಯ ಮಾಡುತ್ತಿದ್ದರು. ಗೋ ಆಧರಿತ ಉತ್ಪನ್ನಗಳ ಆರೋಗ್ಯ ಪ್ರಯೋಜನಗಳ ಬಗ್ಗೆ ಧ್ವನಿ ಎತ್ತಿದವರನ್ನು ಕಮ್ಯುನಿಸ್ಟರು ಅಪಹಾಸ್ಯ ಮಾಡುತ್ತಿದ್ದರು. ಆದರೆ ಈಗ, ಆಸಕ್ತಿದಾಯಕ ಸಂಗತಿಯೊಂದು ಸಂಭವಿಸಿದೆ. ‘ಕೇರಳ ಸರ್ಕಾರದ ಅಧೀನದಲ್ಲಿರುವ ಆಯುರ್ವೇದ ಔಷಧಗಳ ಉತ್ಪಾದನಾ ಕಂಪನಿಯಾದ ‘ಔಷಧಿ’, ಹಸುವಿನ ಸೆಗಣಿ (ಗೋಮಯ), ಗಂಜಲ (ಗೋಮೂತ್ರ), ಹಾಲು (ಕ್ಷೀರ), ತುಪ್ಪ (ಘೃತ) ಮತ್ತು ಮೊಸರಿನಿಂದ (ದಧಿ) ಮಾಡಿದ‘ ಪಂಚಗವ್ಯ ಘೃತಂ ’ಅನ್ನು ಮಾರಾಟ ಮಾಡುತ್ತಿದೆ. ಔಷಧಿ ಮಾನಸಿಕ ಕಾಯಿಲೆಗಳು, ಕಾಮಾಲೆ, ಜ್ವರ, ಮೂರ್ಛೆ ರೋಗದ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ನೆನಪಿನ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ.

‘ಔಷಧಿ’ ಪಂಚಗವ್ಯ ಘೃತಂ ಸುದ್ದಿಯಲ್ಲಿ ಔಷಧಿ ಕಂಪನಿಯ ಪಂಚಗವ್ಯ ಘೃತಂನಲ್ಲಿ ಸೆಗಣಿ ,ಗೋಮೂತ್ರ ಇದೆ ಎಂದು ಉಲ್ಲೇಖಿಸಲಾಗಿದೆ. ಇದು ಸತ್ಯ. ಪಂಚಗವ್ಯ ಎಂದರೆ ಹಸುವಿನ 5 ಉತ್ಪನ್ನಗಳು- ಸೆಗಣಿ, ಗೋಮೂತ್ರ, ಹಾಲು ,ತುಪ್ಪ ಮತ್ತು ಮೊಸರು. ಔಷಧಿ ಕಂಪನಿಯ ಪಂಚಗವ್ಯ ಘೃತಂನಲ್ಲಿ ಈ ಐದು ವಸ್ತುಗಳೂ ಇವೆ. ಔಷಧಿ ಕಂಪನಿ ಆಯುರ್ವೇದದ ಪಾರಂಪರಿಕ ವಿಧಿವಿಧಾನಗಳನ್ನು ಅನುಸರಿಸಿ ಹಲವು ಔಷಧಗಳನ್ನು ಉತ್ಪಾದಿಸುತ್ತದೆ.

ಕೇರಳದ ‘ಔಷಧಿ’ ಔಷಧಿ (ಫಾರ್ಮಾಸ್ಯುಟಿಕಲ್ ಕಾರ್ಪೊರೇಷನ್ ಐಎಂ ಕೇರಳ ಲಿಮಿಟೆಡ್) 1941 ರಿಂದ 1943 ರವರೆಗೆ ಕೊಚ್ಚಿ ಮಹಾರಾಜರಾದ ಕೇರಳ ವರ್ಮ VI ಅವರ ಅಧಿಕಾರವಧಿಯಲ್ಲಿ 1941 ರಲ್ಲಿ ಶ್ರೀ ಕೇರಳ ವರ್ಮ ಸರ್ಕಾರಿ ಆಯುರ್ವೇದ ಫಾರ್ಮಸಿ ಎಂಬ ಹೆಸರಲ್ಲಿ ಆರಂಭವಾಯಿತು. ಕೇರಳ ವರ್ಮ ಅವರನ್ನು ‘ಮಿಡುಕ್ಕನ್ ತಂಬುರಾನ್’ (ಜಾಣ ದೊರೆ) ಎಂದೂ ಕರೆಯುತ್ತಾರೆ. ಸಂಸ್ಕೃತದ ಆಳವಾದ ಜ್ಞಾನವಿದ್ದ ಅವರಿಗೆ ಆಯುರ್ವೇದದಲ್ಲಿಯೂ ಪ್ರಾವಿಣ್ಯತೆ ಇತ್ತು. ‘ವಿಶಾವೈದ್ಯಂ’ನಲ್ಲಿಯೂ (ವಿಷ ಚಿಕಿತ್ಸೆ) ಅವರು ಪರಿಣತಿ ಹೊಂದಿದ್ದರು.

1975 ರಲ್ಲಿ ಕಂಪನಿಯನ್ನು ನೋಂದಾಯಿಸಿ ‘ದಿ ಫಾರ್ಮಾಸ್ಯುಟಿಕಲ್ ಕಾರ್ಪೊರೇಷನ್ (ಇಂಡಿಯನ್ ಮೆಡಿಸಿನ್ಸ್) ಕೇರಳ ಲಿಮಿಟೆಡ್’ ತ್ರಿಶೂರ್ ಎಂದು ಮರುನಾಮಕರಣ ಮಾಡಲಾಯಿತು. 480 ಕ್ಕೂ ಹೆಚ್ಚು ಉತ್ಪನ್ನಗಳನ್ನು ಹೊಂದಿರುವ ಈ ಕಂಪನಿಯು ಕೇರಳ ಮತ್ತು ಭಾರತದ ಇತರ 19 ರಾಜ್ಯಗಳಲ್ಲಿನ ಸರ್ಕಾರಿ ಆಸ್ಪತ್ರೆಗಳು ಮತ್ತು ಔಷಧಾಲಯಗಳಿಗೆ ಔಷಧಿಗಳನ್ನು ಒದಗಿಸುತ್ತಿದೆ.

ಆಯುರ್ವೇದದಲ್ಲಿ ಪಂಚಗವ್ಯ ಪಂಚಗವ್ಯ ಘೃತಂ ಎಂದಾದ ಮೇಲೆ ಅದರಲ್ಲಿ ಹಸುವಿನ ಸೆಗಣಿ, ಗೋಮೂತ್ರ, ಹಾಲು, ತುಪ್ಪ, ಮೊಸರು ಇದ್ದೇ ಇರುತ್ತದೆ. ಔಷಧಿ ಕಂಪನಿಯ ಪಂಚಗವ್ಯ ಘೃತಂನಲ್ಲಿ ಮಾತ್ರವಲ್ಲ ಎಲ್ಲ ಕಂಪನಿಗಳ ಪಂಚಗವ್ಯ ಘೃತದಲ್ಲಿಯೂ ಇವೇ ವಸ್ತುಗಳಿರುತ್ತವೆ. ಆಯುರ್ವೇದ ವಿಧಿ ವಿಧಾನಗಳನ್ನು ಅನುಸರಿಸಿ ಈ ಔಷಧಿಗಳನ್ನು ತಯಾರಿಸಲಾಗುತ್ತದೆ. ಪ್ರತಿಯೊಂದು ಔಷಧಿಗೂ ಇಂತಿಂಥ ವಸ್ತುಗಳು ಇಂತಿಷ್ಟು ಪ್ರಮಾಣದಲ್ಲಿ ಸೇರಿಸಬೇಕು ಎಂಬ ನಿಯಮ ಇರುತ್ತದೆ. ಇದನ್ನು ಆಯುರ್ವೇದೀಯ ಭಾಷೆಯಲ್ಲಿ ‘ಸೂತ್ರಗಳು’ ಎನ್ನುತ್ತಾರೆ. ಪಂಚಗವ್ಯ ಘೃತಂ ತಯಾರಿಕೆಯಲ್ಲಿಯೂ ಇದೇ ಸೂತ್ರಗಳು ಬಳಕೆಯಾಗಿವೆ ಎನ್ನುತ್ತಾರೆ ಕೇರಳದ ತ್ರಿಶ್ಶೂರ್ ಜಿಲ್ಲೆಯ ಡಾ.ಚಾಂದನೀಸ್ ಆಯುರ್ವೇದಿಕ್ಸ್ ಸಂಸ್ಥೆಯ ವೈದ್ಯೆ ಡಾ.ಚಾಂದನಿ.

2ನೇ ಶತಮಾನದ್ದು ಎನ್ನಲಾಗುವ ಆಯುರ್ವೇದದ ಗ್ರಂಥ ‘ಚರಕ ಸಂಹಿತೆ’ ಪ್ರಕಾರ ಗೋಮಯ ರಸ (ಸೆಗಣಿಯ ನೀರು) ಮೊಸರು, ಹಾಲು, ಗೋಮೂತ್ರ, ತುಪ್ಪ ಇವೆಲ್ಲವನ್ನೂ ಸಮ ಪ್ರಮಾಣದಲ್ಲಿ ಒಟ್ಟಿಗೆ ಬೇಯಿಸಬೇಕು ಎಂದು ಮಾಹಿತಿ ನೀಡಿದರು ಬೆಂಗಳೂರಿನ ಆಯುರ್ವೇದ ವೈದ್ಯೆ ಡಾ.ಶಕುಂತಲಾ ಪಾಟೀಲ್. ಪಂಚಗವ್ಯದ ಬಗ್ಗೆ ಮತ್ತಷ್ಟು ಉಲ್ಲೇಖಗಳನ್ನು ಅವರು ಒದಗಿಸಿದರು. ರಸ ತಂತ್ರಸಾರ ಮತ್ತು ಸಿದ್ಧಪ್ರಯೋಗ ಸಂಗ್ರಹದಲ್ಲಿ ಪಂಚಗವ್ಯ ಘೃತದ ಉಲ್ಲೇಖ ಹೀಗಿದೆ.

ಚರಕ ಸಂಹಿತಾ

ಬೈಷಜ್ಯರತ್ನಾವಳಿ

ಬೈಷಜ್ಯರತ್ನಾವಳಿ

ಯೋಗ ರತ್ನಾಕರ

ಕೇರಳದ ಸಾಂಪ್ರದಾಯಿಕ ಆಯುರ್ವೇದ ಚಿಕಿತ್ಸೆ ಬಗ್ಗೆ ವಿವರಿಸುವ ಸಹಸ್ರಯೋಗಂನಲ್ಲಿ ಪಂಚಗವ್ಯ ಘೃತ ಬಗ್ಗೆ ಹೀಗೆ ಹೇಳಿದೆ.

ಸಹಸ್ರಯೋಗಂ

ಕೇರಳದಲ್ಲಿ ಆಯುರ್ವೇದ ಆಯುರ್ವೇದವು ಸುಮಾರು 5000 ವರ್ಷಗಳ ಹಿಂದೆ ಭಾರತದಲ್ಲಿ ವಿಕಸನಗೊಂಡಿತು. ಕೇರಳದಲ್ಲಿ, ಆಯುರ್ವೇದವು ಹಲವು ಶತಮಾನಗಳಿಂದಲೂ ಬೆಳವಣಿಗೆ ಕಾಣುತ್ತಿದೆ. ಕೇರಳದ ಆಯುರ್ವೇದ ಚಿಕಿತ್ಸೆಗಳಿಗೆ ವಿಶಿಷ್ಟಸ್ಥಾನವಿದೆ. ಪರಂಪರಾಗತ ಮತ್ತು ಸಾಂಪ್ರದಾಯಿಕ ಚಿಕಿತ್ಸೆಗಳು ಈಗಲೂ ಇಲ್ಲಿ ಮಹತ್ತರ ಸ್ಥಾನವನ್ನು ಪಡೆದಿದೆ.

ಪಂಚಗವ್ಯ ಘೃತದ ಪ್ರಯೋಜನ ಏನು? 

ದುರ್ಬಲ / ಸಪೂರ ದೇಹ, ದುರ್ಬಲ ರೋಗನಿರೋಧಕ ಶಕ್ತಿ ಮತ್ತು ಮನಸ್ಸಿನ ಅಸತೋಲನ ಸ್ಥಿತಿಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ದೈಹಿಕ ದೌರ್ಬಲ್ಯವನ್ನು ನಿವಾರಿಸುತ್ತದೆ ವಾತ ದೇಹ ಪ್ರಕಾರದವರ ತೂಕ ಹೆಚ್ಚಿಸುತ್ತದೆ ಮೂಳೆ ಕೀಲು   ಸಮಸ್ಯೆಗಳು ಮತ್ತು ಸಂಧಿವಾತವನ್ನು ನಿವಾರಿಸಲು ಸಹಾಯ ಮಾಡುತ್ತದೆ ಒಣ ಗಂಟಲು, ಒಣ ಚರ್ಮ ಸಮಸ್ಯೆ ನಿವಾರಣೆಗೆ ಸಹಾಯ

ಇದನ್ನೂ ಓದಿ: ‘ದಿ ವರ್ಡ್​ ಇಸ್​ ಗೋಯಿಂಗ್ ಅಪ್​ಸೈಡ್​ ಡೌನ್’ ಕೇರಳದ ವ್ಯಕ್ತಿ ಕ್ಲಿಕ್ಕಿಸಿದ ಚಿತ್ರಕ್ಕೆ ಉತ್ತಮ ಛಾಯಾಗ್ರಹಣ ಪ್ರಶಸ್ತಿ

Published On - 7:10 pm, Wed, 9 June 21