ತಿರುವನಂತಪುರಂ:ಮುಸ್ಲಿಂ ಸಮುದಾಯದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ ಒಂದು ವಾರದ ನಂತರ, ಮಂಗಳವಾರ ಹಿರಿಯ ರಾಜಕಾರಣಿ ಪಿ ಸಿ ಜಾರ್ಜ್ (P C George) ವಿರುದ್ಧ ದ್ವೇಷ ಭಾಷಣದ (Hate Speech) ಆರೋಪದ ಮೇಲೆ ಕೇರಳ ಪೊಲೀಸರು (Kerala Police) ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ. ಮೇ 8 ರಂದು ವೆಣ್ಣಲಾದಲ್ಲಿ ನಡೆದ ದೇವಸ್ಥಾನದ ಉತ್ಸವದಲ್ಲಿ ಮಾಡಿದ ಭಾಷಣದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಪಾಲಾರಿವಟ್ಟಂ ಪೊಲೀಸರು ಮಾಜಿ ಶಾಸಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಐಪಿಸಿ 153 (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 295 ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶದಿಂದ) ಸೆಕ್ಷನ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಿರುವನಂತಪುರಂನಲ್ಲಿ ದಾಖಲಾದ ಹಿಂದಿನ ಪ್ರಕರಣದ ವಿವರಗಳು ಮತ್ತು ಜಾಮೀನು ಷರತ್ತುಗಳನ್ನು ಪರಿಶೀಲಿಸಿದ ನಂತರ ಪ್ರಕರಣದ ಮುಂದಿನ ಪ್ರಕ್ರಿಯೆಗಳನ್ನು ಅಂತಿಮಗೊಳಿಸಲಾಗುವುದು ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರದಲ್ಲಿದ್ದಾಗ ಮುಖ್ಯ ಸಚೇತಕರಾಗಿದ್ದ ಎಪ್ಪತ್ತರ ಹರೆಯದ ಜಾರ್ಜ್ ಅವರು ಕೇರಳದ ಮುಸ್ಲಿಮೇತರರು, ಮುಸ್ಲಿಂ ಸಮುದಾಯದಿಂದ ನಡೆಸಲ್ಪಡುವ ರೆಸ್ಟೋರೆಂಟ್‌ಗಳಲ್ಲಿ ಆಹಾರ ಸೇವಿಸುವುದು ಬೇಡ ಎಂದು ಹೇಳುವ ಮೂಲಕ ವಿವಾದಕ್ಕೀಡಾಗಿದ್ದರು.
ಕಳೆದ ತಿಂಗಳ ಕೊನೆಯಲ್ಲಿಅನಂತಪುರಿ ಹಿಂದೂ ಮಹಾ ಸಮ್ಮೇಳನದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೇರಳದ ಮಾಜಿ ಕಾಂಗ್ರೆಸ್ ನಾಯಕ, ದೇಶದಲ್ಲಿ ಹಿಡಿತ ಸಾಧಿಸುವುದಕ್ಕಾಗಿ ಮುಸ್ಲಿಮರು ನಡೆಸುತ್ತಿರುವ ರೆಸ್ಟೋರೆಂಟ್‌ಗಳಲ್ಲಿ ಬಂಜೆತನಕ್ಕೆ ಕಾರಣವಾಗುವ ಹನಿಮದ್ದು ಬೆರೆಸಿದ ಚಹಾವನ್ನು ಮಾರಾಟ ಮಾಡಿ ಇತರರಿಗೆ ಬಂಜೆತನವುಂಟು ಮಾಡಲಾಗುತ್ತಿದೆ ಎಂದಿದ್ದರು.
ಈ ಹೇಳಿಕೆಯು ವ್ಯಾಪಕ ರಾಜಕೀಯ ವಿವಾದಕ್ಕೆ ಕಾರಣವಾಗುತ್ತಿದ್ದಂತೆ, ಪ್ರಕರಣವನ್ನು ದಾಖಲಿಸಿ ಮೇ 1 ರಂದು ಅವರನ್ನು ಬಂಧಿಸಲಾಯಿತು. ಆದಾಗ್ಯೂ, ಬಂಧನವಾದ ಕೆಲವೇ ಗಂಟೆಗಳಲ್ಲಿ ಜಾರ್ಜ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಜಾಮೀನು ಪಡೆದರು. 33 ವರ್ಷಗಳ ಕಾಲ ರಾಜ್ಯ ವಿಧಾನಸಭೆಯಲ್ಲಿ ಪೂಂಞಾರ್ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಜಾರ್ಜ್ ಅವರು 2021 ರ ವಿಧಾನಸಭಾ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆಯಲ್ಲಿ ಎಲ್ಡಿಎಫ್ ಅಭ್ಯರ್ಥಿ ಮುಂದೆ ಪರಾಭವಗೊಂಡಿದ್ದರು.
ಈ ಸುದ್ದಿಯನ್ನು ಇಂಗ್ಲಿಷ್ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:52 pm, Tue, 10 May 22