ಕೇರಳ: ಪತ್ರಕರ್ತೆಗೆ ಅನುಚಿತ ವಾಟ್ಸಾಪ್ ಸ್ಟಿಕ್ಕರ್ ಕಳುಹಿಸಿದ ಐಎಎಸ್ ಅಧಿಕಾರಿ ವಿರುದ್ಧ ಪ್ರಕರಣ ದಾಖಲು
IAS officer N Prasanth ಕೇರಳ ರಾಜ್ಯ ಒಳನಾಡು ಸಂಚರಣೆ ನಿಗಮದ (KSINC) ವ್ಯವಸ್ಥಾಪಕ ನಿರ್ದೇಶಕರಾದ ಪ್ರಶಾಂತ್ ಅವರು ಈ ವರ್ಷದ ಆರಂಭದಲ್ಲಿ ಆಳವಾದ ಸಮುದ್ರ ಟ್ರಾಲಿಂಗ್ ಕುರಿತು ಅಮೆರಿಕದ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ರಾಜಕೀಯ ವಿವಾದದಲ್ಲಿ ಸಿಕ್ಕಿಬಿದ್ದರು.
ತಿರುವನಂತಪುರಂ: ಪತ್ರಕರ್ತೆಯೊಬ್ಬರಿಗೆ ಅನುಚಿತ ವಾಟ್ಸಾಪ್ ಸ್ಟಿಕ್ಕರ್ ಕಳುಹಿಸಿದ ಆರೋಪದ ಮೇಲೆ ಕೇರಳ ಪೊಲೀಸರು ಮಂಗಳವಾರ ಐಎಎಸ್ ಅಧಿಕಾರಿ ಎನ್.ಪ್ರಶಾಂತ್ (N Prasanth) ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಧಿಕೃತ ಪ್ರತಿಕ್ರಿಯೆಗಾಗಿ ಪತ್ರಕರ್ತೆ ಪ್ರಶಾಂತ್ ಅವರಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದರು. ಈ ಪ್ರಕರಣದಲ್ಲಿ ಕಾನೂನು ಸಲಹೆಯನ್ನು ಪಡೆದ ನಂತರ ಈ ವರ್ಷ ಫೆಬ್ರವರಿಯಲ್ಲಿ ನಡೆದ ಘಟನೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
“ನಾವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 509 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ” ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಭಾಗವು ಯಾವುದೇ ಮಹಿಳೆಯ ಲಜ್ಜೆಯನ್ನು ಅವಮಾನಿಸುವ, ಯಾವುದೇ ಪದವನ್ನು ಉಚ್ಚರಿಸುವ, ಯಾವುದೇ ಶಬ್ದ ಅಥವಾ ಸನ್ನೆ ಮಾಡುವ ಅಥವಾ ಯಾವುದೇ ವಸ್ತುವನ್ನು ಪ್ರದರ್ಶಿಸುವ ಅಪರಾಧಕ್ಕೆ ಸಂಬಂಧಿಸಿದ್ದಾಗಿದೆ.
ಕೇರಳ ರಾಜ್ಯ ಒಳನಾಡು ಸಂಚರಣೆ ನಿಗಮದ (KSINC) ವ್ಯವಸ್ಥಾಪಕ ನಿರ್ದೇಶಕರಾದ ಪ್ರಶಾಂತ್ ಅವರು ಈ ವರ್ಷದ ಆರಂಭದಲ್ಲಿ ಆಳವಾದ ಸಮುದ್ರ ಟ್ರಾಲಿಂಗ್ ಕುರಿತು ಅಮೆರಿಕದ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ರಾಜಕೀಯ ವಿವಾದದಲ್ಲಿ ಸಿಕ್ಕಿಬಿದ್ದರು.
ಒಂದು ಪ್ರಾದೇಶಿಕ ದಿನಪತ್ರಿಕೆಯ ವರದಿಗಾರ್ತಿ ತನ್ನ ಪರಿಚಯ ಹೇಳಿ ಪ್ರಶಾಂತ್ ಅವರಿಗೆ ವಾಟ್ಸಾಪ್ ಸಂದೇಶ ಕಳುಹಿಸಿ ವಿವಾದದ ಕುರಿತು ಉತ್ತರವನ್ನು ಕೋರಿದ್ದರು. ಈ ವಿಷಯದ ಬಗ್ಗೆ ಮಾತನಾಡಲು ಇದು ಸೂಕ್ತ ಸಮಯವೇ ಎಂದು ವರದಿಗಾರ್ತಿ ಪ್ರಶಾಂತ್ ಅವರಿಗೆ ಸಂದೇಶ ಕಳುಹಿಸಿದ್ದರು. ಇದಕ್ಕೆ ಪ್ರಶಾಂತ್ ಕೇವಲ ಸ್ಟಿಕ್ಕರ್ ಮೂಲಕ ಉತ್ತರಿಸಿದರು. ನಮ್ಮ ವರದಿ ನಿಮಗೆ ತೊಂದರೆಯುಂಟು ಮಾಡುವಂತದಲ್ಲ ವಿವಾದಕ್ಕೆ ಸಂಬಂಧಿಸಿದಂತೆ ಹೇಳಿಕೆಯನ್ನು ನೀಡಿ ಎಂದು ಕೇಳಿದಾಗ ಪ್ರಶಾಂತ್ ಸೂಕ್ತವಲ್ಲದ ಮತ್ತು ಅಶ್ಲೀಲ ಸ್ಟಿಕ್ಕರ್‌ನೊಂದಿಗೆ ಉತ್ತರಿಸಿದ್ದಾರೆ ಎಂದು ಪತ್ರಕರ್ತೆ ದೂರಿದ್ದಾರೆ.
ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ (ಕೆಯುಡಬ್ಲ್ಯೂಜೆ) ಪೊಲೀಸರಿಗೆ ದೂರು ಸಲ್ಲಿಸಿದೆ. 2007 ರ ಬ್ಯಾಚ್ ಐಎಎಸ್ ಅಧಿಕಾರಿಯ ತಪ್ಪು ನಡವಳಿಕೆಯ ವಿರುದ್ಧ ರಾಜ್ಯ ಸರ್ಕಾರವು ಮೇ ತಿಂಗಳಲ್ಲಿ ತನಿಖೆಗೆ ಆದೇಶಿಸಿತ್ತು.
ಇದನ್ನೂ ಓದಿ: ಕೇರಳದಲ್ಲಿ 25,772 ಹೊಸ ಕೊವಿಡ್ ಪ್ರಕರಣ ಪತ್ತೆ; ರಾತ್ರಿ ಕರ್ಫ್ಯೂ ಮತ್ತು ಭಾನುವಾರದ ಲಾಕ್ಡೌನ್ ಇರಲ್ಲ: ಪಿಣರಾಯಿ ವಿಜಯನ್
(Kerala police registered a case against IAS officer N Prasanth for sending inappropriate WhatsApp sticker to woman journalist)