Kerala Rain: ಭಾರೀ ಮಳೆಗೆ ಕೇರಳ ತತ್ತರ; 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ

| Updated By: ಸುಷ್ಮಾ ಚಕ್ರೆ

Updated on: Oct 13, 2021 | 11:12 AM

Kerala Flood: ಕೇರಳದಲ್ಲಿ ಮಳೆಯ ಅಬ್ಬರದಿಂದ ಅರುವಿಕ್ಕರ, ನೆಯ್ಯಾರ್, ಪೆಪ್ಪರ ಜಲಾಶಯದಿಂದ ನೀರನ್ನು ಹೊರಬಿಡಲಾಗಿದೆ. ತಿರುವನಂತಪುರಂ, ಕೊಟ್ಟಾಯಂ, ಇಡುಕ್ಕಿ ಸೇರಿ 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

Kerala Rain: ಭಾರೀ ಮಳೆಗೆ ಕೇರಳ ತತ್ತರ; 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ
ಕೇರಳದಲ್ಲಿ ಮಳೆಯ ಆರ್ಭಟ
Follow us on

ತಿರುವನಂತಪುರಂ: ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ವಿಪರೀತ ಮಳೆಯಾಗುತ್ತಿದೆ. ಪಕ್ಕದ ಕೇರಳ ರಾಜ್ಯದಲ್ಲೂ ಮಳೆ ಹೆಚ್ಚಾಗಿದ್ದು, ನಿನ್ನೆ ಸುರಿದ ಮಳೆಗೆ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಮಳೆಯಿಂದಾಗಿ ಕೇರಳದ 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಕೇರಳದ ತಿರುವನಂತಪುರಂ, ಕೊಲ್ಲಂ, ಪಥನಾಂತಿಟ್ಟ, ಅಲಪ್ಪುಝ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ ಜಿಲ್ಲೆಗಳಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಅರುವಿಕ್ಕರ, ನೆಯ್ಯಾರ್, ಪೆಪ್ಪರ ಜಲಾಶಯದಿಂದ ನೀರನ್ನು ಹೊರಬಿಡಲಾಗಿದೆ. ಕೇರಳದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಹೆಚ್ಚುವರಿಯಾಗಿ 4 ಎಸ್​ಡಿಆರ್​ಎಫ್ ತಂಡವನ್ನು ನಿಯೋಜನೆ ಮಾಡಲಾಗಿದೆ. ಸದ್ಯಕ್ಕೆ ಕೇರಳದಲಲ್ಇ ಎರಡು ಎನ್​ಡಿಆರ್​ಎಫ್ ತಂಡಗಳಿವೆ. ತಮಿಳುನಾಡಿನಿಂದ ಇನ್ನೂ 4 ತಂಡಗಳು ಇಂದು ಆಗಮಿಸಲಿವೆ. ಹೈ ಅಲರ್ಟ್ ಘೋಷಿಸಿರುವ ಜಿಲ್ಲೆಗಳಲ್ಲಿ ಎನ್​ಡಿಆರ್​ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸಲಿವೆ.

ನಿನ್ನೆ ಸುರಿದ ಮಳೆಯಿಂದ ಮನೆ ಕುಸಿದು ಮಲಪ್ಪುರಂನಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಮಳೆಯಿಂದ ಭಾರೀ ಭೂಕುಸಿತವಾಗಿ ಮನೆ ಕುಸಿದಿತ್ತು. ಮಣ್ಣಿನ ಅವಶೇಷಗಳಡಿ ಸಿಲುಕಿದ್ದ ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಸಾವನ್ನಪ್ಪಿದ್ದರು. ಆ ಮನೆಯಲ್ಲಿದ್ದ ಉಳಿದವರಿಗೂ ಗಂಭೀರ ಗಾಯಗಳಾಗಿವೆ.

ಭಾರೀ ಮಳೆಯ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಮುಂದಿನ ವಾರದವರೆಗೂ ಕೇರಳದ 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇಂದಿನಿಂದ ಅ. 17ರವರೆಗೂ ಕೇರಳದಲ್ಲಿ ಮಳೆ ಹೆಚ್ಚಾಗುವ ನಿರೀಕ್ಷೆಯಿದೆ.

ನೈಋತ್ಯ ಮುಂಗಾರು ಮುಗಿದು ಈಶಾನ್ಯ ಹಿಂಗಾರು ಮಳೆ ಶುರುವಾಗುತ್ತಿರುವುದರಿಂದ ಮಳೆಯ ಅಬ್ಬರ ಹೆಚ್ಚಾಗಿದೆ. ಕಳೆದ ಸೆ. 30ಕ್ಕೆ ಈ ಬಾರಿಯ ಮುಂಗಾರು ಅಂತ್ಯಗೊಂಡಿದೆ. ಕರ್ನಾಟಕ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡು, ಪುದುಚೆರಿ, ಗೋವಾ, ಮಹಾರಾಷ್ಟ್ರದಲ್ಲಿ ಇನ್ನೆರಡು ದಿನ ಭಾರೀ ಮಳೆಯಾಗಲಿದೆ. ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ಇಂದು ಮಳೆಯಾಗಲಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಬಹುತೇಕ ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಇಂದು ಕರ್ನಾಟಕದ ಉತ್ತರ ಒಳನಾಡು ಸೇರಿ ಪುದುಚೇರಿ, ಆಂಧ್ರ ಕರಾವಳಿ, ತೆಲಂಗಾಣ, ತಮಿಳುನಾಡು, ಗೋವಾ, ಕಾರೈಕಲ್‌, ಪಶ್ಚಿಮ ಬಂಗಾಳ, ಒಡಿಶಾ, ಸಿಕ್ಕಿಂ, ಕೊಂಕಣದಲ್ಲಿ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗಲಿದೆ.

ಇದನ್ನೂ ಓದಿ: Karnataka Weather Today: ಬೆಂಗಳೂರಿನಲ್ಲಿ ಅ. 17ರವರೆಗೆ ವಿಪರೀತ ಮಳೆ; ಕರಾವಳಿಯಲ್ಲೂ ನಿಲ್ಲದ ವರುಣನ ಆರ್ಭಟ

ಕರ್ನಾಟಕದಲ್ಲಿ ಪವರ್ ಕಟ್ ಇಲ್ಲ; ಮಳೆಯಿಂದಾದ ಬೆಳೆ ಹಾನಿಗೆ ಪರಿಹಾರ ನೀಡುತ್ತೇವೆ: ಬಸವರಾಜ ಬೊಮ್ಮಾಯಿ